ಆರ್‌ಟಿಐ ವ್ಯಾಪ್ತಿಗೆ ಸಿಜೆಐ: ಬುಧವಾರ ಸುಪ್ರೀಂ ನಿರ್ಧಾರ

Update: 2019-11-12 16:25 GMT

ಹೊಸದಿಲ್ಲಿ, ನ.12: ಮಾಹಿತಿ ಹಕ್ಕು ಕಾಯ್ದೆಯಡಿ ಮುಖ್ಯ ನ್ಯಾಯಾಧೀಶರ(ಸಿಜೆಐ) ಕಚೇರಿಯೂ ಬರುತ್ತದೆಯೇ ಎಂಬ ಕುರಿತು ಬುಧವಾರ (ನ.13) ಸುಪ್ರೀಂಕೋರ್ಟ್ ನಿರ್ಧರಿಸಲಿದೆ.

ಸಿಜೆಐಯವರ ಕಚೇರಿ ಸರ್ಕಾರಿ ಪ್ರಾಧಿಕಾರ ಆಗಿರುವುದರಿಂದ ಅದನ್ನೂ ಆರ್‌ಟಿಐ(ಮಾಹಿತಿ ಹಕ್ಕು ಕಾಯ್ದೆ)ಯಡಿ ಸೇರಿಸಬೇಕು ಎಂದು ದಿಲ್ಲಿ ಹೈಕೋರ್ಟ್ 2010ರ ಜನವರಿಯಲ್ಲಿ ನೀಡಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನ ಪ್ರಧಾನ ಕಾರ್ಯದರ್ಶಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿ ಈ ಆದೇಶ ಹೊರಬೀಳಲಿದೆ.

ಆರ್‌ಟಿಐ ಕಾರ್ಯಕರ್ತ ಸುಭಾಷ್‌ಚಂದ್ರ ಅಗರ್‌ವಾಲ್ ಪರ ವಾದ ಮಂಡಿಸಿದ್ದ ನ್ಯಾಯವಾದಿ ಪ್ರಶಾಂತ್ ಭೂಷಣ್, ಸಿಜೆಐ ಕಚೇರಿ ಮತ್ತು ಸುಪ್ರೀಂಕೋರ್ಟ್‌ನ ಕೊಲಿಜಿಯಂ ಅನ್ನು ಆರ್‌ಟಿಐ ವ್ಯಾಪ್ತಿಯಡಿ ತರಬೇಕು ಎಂದು ಪ್ರತಿಪಾದಿಸಿದರು.

 ಸುಪ್ರೀಂಕೋರ್ಟ್‌ನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ಪ್ರತಿನಿಧಿಸಿದ್ದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ಸಿಜೆಐ ಕಚೇರಿಯಡಿ ಬರುವ ಕೊಲಿಜಿಯಂಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಗೊಳಿಸಿದರೆ ನ್ಯಾಯಾಂಗದ ಸ್ವಾತಂತ್ರ ನಾಶವಾಗುತ್ತದೆ ಎಂದು ವಾದ ಮಂಡಿಸಿದರು.

ಇಂದು(ನವೆಂಬರ್ 13ರಂದು) ಈ ಪ್ರಕರಣದ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಕಟಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News