ಮುಂಬೈ ವಿಮಾನ ನಿಲ್ದಾಣದಿಂದ 600 ಕಿ.ಗ್ರಾಂ. ರಕ್ತಚಂದನ ವಶ

Update: 2019-11-12 16:31 GMT

ಮುಂಬೈ, ನ. 12: ಮುಂಬೈಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 3.05 ಕೋಟಿ ರೂಪಾಯಿ ವೌಲ್ಯದ 600 ಕಿ.ಗ್ರಾಂ. ರಕ್ತಚಂದನವನ್ನು ವಶಪಡಿಸಿಕೊಳ್ಳುವ ಮೂಲಕ ನಗರ ಕ್ರೈಮ್ ಬ್ರಾಂಚ್ ರವಿವಾರ ಮತ್ತೊಂದು ಕಳ್ಳ ಸಾಗಾಟ ದಂಧೆಯನ್ನು ಬೇಧಿಸಿದೆ.

ಕಳೆದ ಸೆಪ್ಟಂಬರ್‌ನಲ್ಲಿ ಕ್ರೈಮ್ ಬ್ರಾಂಚ್ 8 ಕೋಟಿ ರೂಪಾಯಿ ವೌಲ್ಯದ 1,556 ಕಿ.ಗ್ರಾಂ. ಚಂದನವನ್ನು ವಶಪಡಿಸಿಕೊಂಡು 13 ಮಂದಿಯನ್ನು ಬಂಧಿಸಿತ್ತು. ಈ ಪ್ರಕರಣದ ಪ್ರಮುಖ ರೂವಾರಿ ಶೆಝಾದ್ ಸಯ್ಯದ್‌ನ ವಿಚಾರಣೆ ಸಂದರ್ಭ ಸ್ವೀಕರಿಸಿದ ಮಾಹಿತಿ ಹಿನ್ನೆಲೆಯಲ್ಲಿ ಕ್ರೈಮ್ ಬ್ರಾಂಚ್ ಈ ಕಳ್ಳ ಸಾಗಾಟವನ್ನು ಬೇಧಿಸಿದೆ. ಇದಕ್ಕಿಂತ ಮೊದಲಿನ ದಾಳಿ ನವೆಂಬರ್ 10ರಂದು ನಡೆದಿತ್ತು. ಈ ದಾಳಿಯಲ್ಲಿ ಗೋದಾಮು ಒಂದರಿಂದ ಪೊಲೀಸರು 600 ಕಿ.ಗ್ರಾಂ. ತೂಕದ 92 ತುಂಡು ರಕ್ತ ಚಂದನವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

 ಈ ಕಳ್ಳ ಸಾಗಾಟದಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದರು. ರವಿವಾರದ ಪ್ರಕರಣದಲ್ಲಿ ‘‘ರಕ್ತ ಚಂದನವನ್ನು ಚೆನ್ನೈಯಿಂದ ರಸ್ತೆ ಮಾರ್ಗವಾಗಿ ಮುಂಬೈಗೆ ಸಾಗಾಟ ಮಾಡಲಾಗಿತ್ತು. ಅಪಾರ ಬೇಡಿಕೆ ಇರುವ ದುಬಾಯಿ ಹಾಗೂ ಹಾಂಗ್‌ಕಾಂಗ್‌ಗೆ ಈ ರಕ್ತ ಚಂದನವನ್ನು ಕಳುಹಿಸುವ ಉದ್ದೇಶವನ್ನು ಕಳ್ಳ ಸಾಗಾಟಗಾರರ ಹೊಂದಿದ್ದರು’’ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News