ಸಕ್ಕರೆ ಕಾರ್ಖಾನೆಗಳಿಗೆ ಮೃದು ಸಾಲದ ಮರುಪಾವತಿಗೆ ಸ್ತಂಭನಾವಧಿ ವಿಸ್ತರಣೆ

Update: 2019-11-13 16:30 GMT

ಹೊಸದಿಲ್ಲಿ,ನ.13: ಸಕ್ಕರೆ ಕಾರ್ಖಾನೆಗಳಿಗೆ ಸಬ್ಸಿಡಿ ಬಡ್ಡಿದರಗಳಲ್ಲಿ 15,000 ಕೋ.ರೂ.ಗಳ ಮೃದುಸಾಲವನ್ನು ಒದಗಿಸುವ ಕೇಂದ್ರದ ಯೋಜನೆ ಆಮೆಗತಿಯಿಂದ ಸಾಗುತ್ತಿದೆ. ತನ್ಮಧ್ಯೆ ಸರಕಾರವು ಸಾಲ ಮರುಪಾವತಿಯ ಸ್ತಂಭನಾವಧಿಯನ್ನು ಈಗಿನ ಒಂದು ವರ್ಷದಿಂದ ಒಂದೂವರೆ ವರ್ಷಕ್ಕೆ ವಿಸ್ತರಿಸಿದೆ. ಸ್ತಂಭನಾವಧಿಯಲ್ಲಿ ಸಾಲಗಾರರು ಮರುಪಾವತಿಯನ್ನು ಮಾಡಬೇಕಿಲ್ಲ.

 2018 ಜೂನ್‌ನಲ್ಲಿ 4,440 ಕೋ.ರೂ.ಮತ್ತು 2019 ಮಾರ್ಚ್‌ನಲ್ಲಿ 10,540ಕೋ.ರೂ.,ಹೀಗೆ ಎರಡು ಹಂತಗಳಲ್ಲಿ ಕೇಂದ್ರವು ಮೃದುಸಾಲ ಪ್ಯಾಕೇಜ್‌ನ್ನು ಪ್ರಕಟಿಸಿತ್ತು. ಕಬ್ಬು ಬೆಳೆಗಾರರ ಬಾಕಿಯನ್ನು ಪಾವತಿಸಲು ಮತ್ತು ಎಥೆನಾಲ್ ಉತ್ಪಾದನೆಗೆ ಮಿಗತೆ ಸಕ್ಕರೆಯ ಬಳಕೆಗೆ ಕಾರ್ಖಾನೆಗಳಿಗೆ ನೆರವಾಗುವುದು ಯೋಜನೆಯ ಉದ್ದೇಶವಾಗಿದೆ.

 ಸಾಲ ಕೋರಿ ಸಲ್ಲಿಸಲಾಗಿರುವ 418 ಅರ್ಜಿಗಳ ಪೈಕಿ 282 ಅರ್ಜಿಗಳು ಅರ್ಹ ಎಂದು ಆಹಾರ ಸಚಿವಾಲಯವು ಗುರುತಿಸಿದೆ ಮತ್ತು ಈ ಪೈಕಿ ಒಟ್ಟು 6,139.08 ಕೋ.ರೂ.ಸಾಲಗಳಿಗಾಗಿ 114 ಅರ್ಜಿಗಳಿಗೆ ಒಪ್ಪಿಗೆಯನ್ನು ನೀಡಿದೆ. ಆದರೆ ಬ್ಯಾಂಕುಗಳು ಕೇವಲ 45 ಅರ್ಜಿದಾರರಿಗೆ ಸಾಲಗಳನ್ನು ಮಂಜೂರು ಮಾಡಿದ್ದು,ಸೆಪ್ಟೆಂಬರ್ ಅಂತ್ಯದವರೆಗೆ 33 ಅರ್ಜಿದಾರರಿಗೆ 900 ಕೋ.ರೂ. ಸಾಲಗಳನ್ನು ವಿತರಿಸಿವೆ.

ಮೃದುಸಾಲ ಪ್ಯಾಕೇಜ್‌ನ್ನು ಜಾರಿಗೊಳಿಸುತ್ತಿರುವ ಆಹಾರ ಸಚಿವಾಲಯವು ಮುಂದಿನ ಪ್ರಕ್ರಿಯೆಗಾಗಿ ಅರ್ಹ ಅರ್ಜಿದಾರರ ಪಟ್ಟಿಯನ್ನು ಬ್ಯಾಂಕುಗಳಿಗೆ ಒದಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News