ರಾಮಜನ್ಮಭೂಮಿ ನ್ಯಾಸ್‌ಗೆ ಮಂದಿರ ನಿರ್ಮಾಣದ ಹೊಣೆ ನೀಡಲಿ: ಮಹಂತ ನೃತ್ಯಗೋಪಾಲದಾಸ್

Update: 2019-11-13 16:34 GMT
ಫೋಟೋ: PTI

ಅಯೋಧ್ಯಾ,ಡಿ.13: ರಾಮಜನ್ಮಭೂಮಿ ನ್ಯಾಸ್ ಈಗಾಗಲೇ ಅಸ್ತಿತ್ವದಲ್ಲಿರುವುದರಿಂದ ಸುಪ್ರೀಂಕೋರ್ಟ್‌ನ ಆದೇಶಕ್ಕನುಗುಣವಾಗಿ ಅಯೋಧ್ಯೆಯ ಶ್ರೀರಾಮಜನ್ಮಭೂಮಿ ದೇವಾಲಯಕ್ಕಾಗಿ ಸರಕಾರವು ಹೊಸ ಟ್ರಸ್ಟ್ ಸ್ಥಾಪಿಸುವ ಅಗತ್ಯವಿಲ್ಲವೆಂದು ನ್ಯಾಸ್‌ನ ಅಧ್ಯಕ್ಷ ಮಹಂತ ನೃತ್ಯ ಗೋಪಾಲದಾಸ್ ಬುಧವಾರ ತಿಳಿಸಿದ್ದಾರೆ.

   ರಾಮಜನ್ಮಭೂಮಿ ನ್ಯಾಸ್, ಅಯೋಧ್ಯೆಯ ಶ್ರೀರಾಮ ದೇವಾಲಯ ನಿರ್ಮಾಣ ಚಳವಳಿಯನ್ನು ಮುನ್ನಡೆಸಲು ವಿಶ್ವಹಿಂದೂ ಪರಿಷತ್ ಸ್ಥಾಪಿಸಿದ ಸಂಸ್ಥೆಯಾಗಿದೆ. ಸರಕಾರವು ನೂತನ ಟ್ರಸ್ಟನ್ನು ರೂಪಿಸುವ ಅಗತ್ಯವಿಲ್ಲವೆಂದು ಮಹಂತ ನೃತ್ಯ ಗೋಪಾಲದಾಸ್ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ‘‘ ಟ್ರಸ್ಟ್ (ರಾಮ ಜನ್ಮಭೂಮಿ ನ್ಯಾಸ್) ಈಗಾಗಲೇ ಅಸ್ತಿತ್ವದಲ್ಲಿದೆ. ಅದಕ್ಕೆ ನಾವು ಹೊಸ ರೂಪು ನೀಡಬಹುದಾಗಿದೆ ಹಾಗೂ ಅಗತ್ಯಕ್ಕನುಗುಣವಾಗಿ ನೂತನ ಸದಸ್ಯರನ್ನು ಅದಕ್ಕೆ ಸೇರ್ಪಡೆಗೊಳಿಸಬಹುದಾಗಿದೆ’’ ಎಂದವರು ತಿಳಿಸಿದರು.

ಶ್ರೀರಾಮ ದೇವಾಲಯ ನಿರ್ಮಾಣಕ್ಕಾಗಿ ನೂತನ ಟ್ರಸ್ಟ್ ಸ್ಥಾಪಿಸುವ ಬಗ್ಗೆ ಇತರ ಸಂತರು ಕೂಡಾ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನೂತನ ಟ್ರಸ್ಟ್ ಅನ್ನು ಸರಕಾರವು ಸ್ಥಾಪಿಸಬೇಕೆಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತಿಳಿಸಿರುವುದಾಗಿ ದಿಗಂಬರ ಅಖಾಡದ ವರಿಷ್ಠ ಮಹಂತ ಸುರೇಶ್ ತಿಳಿಸಿದ್ದಾರೆ.

‘‘ ಅಯೋಧ್ಯೆಯಲ್ಲಿ ಶ್ರೀರಾಮ ದೇಗುಲ ನಿರ್ಮಾಣಕಾಗಿ ಟ್ರಸ್ಟ್ ಅನ್ನು ಸ್ಥಾಪಿಸುವುದು ಕೇಂದ್ರ ಸರಕಾರದ ಹೊಣೆಗಾರಿಕೆಯಾಗಿದೆಯೇ ಹೊರತು ರಾಮಜನ್ಮಭೂಮಿ ನ್ಯಾಸ್ ನದ್ದಲ್ಲ. ಆದರೆ ನ್ಯಾಸ್‌ನ ಪ್ರತಿನಿಧಿಗಳು ಟ್ರಸ್ಟ್‌ನಲ್ಲಿ ಇರಬೇಕಾಗುತ್ತದೆ ’’ಎಂದವರು ತಿಳಿಸಿದರು.

  ಸುಪ್ರೀಂಕೋರ್ಟ್‌ನ ನಿರ್ದೇಶನಕ್ಕನುಗುಣವಾಗಿ ಟ್ರಸ್ಟ್ ಅನ್ನು ರಚಿಸಬೇಕಾಗಿದೆ ಎಂದು ನಿರ್ಮೋಹಿ ಅಖಾಡದ ವರಿಷ್ಠ ಮಹಂತ ದೀನೇಂದ್ರ ದಾಸ್ ತಿಳಿಸಿದ್ದಾರೆ. ಆದರೆ ಅಖಾಡದ ಸದಸ್ಯರು ಟ್ರಸ್ಟ್‌ನಲ್ಲಿ ಸೇರ್ಪಡೆಗೊಳ್ಳುವ ಬಗ್ಗೆ ನೇರವಾಗಿ ಉತ್ತರಿಸಲು ನಿರಾಕರಿಸಿದರು. ನಿರ್ಮೋಹಿ ಅಖಾಡವು ಕೂಡಾ ಒಂದು ಟ್ರಸ್ಟ್ ಆಗಿದ್ದು, ಸರಕಾರದ ಟ್ರಸ್ಟ್‌ಗೆ ಸೇರ್ಪಡೆಗೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು ಅದರ ಸದಸ್ಯರು ನಿರಾಕರಿಸಿದ್ದಾರೆ.

 ಅಯೋಧ್ಯೆಯ ರಾಮಲಲ್ಲಾ ವಿಗ್ರಹವನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದ ವಿಎಚ್‌ಪಿಯ ತ್ರಿಲೋಕಿ ನಾಥ್ ಪಾಂಡೆ ಅವರು ಈ ಟ್ರಸ್ಟನ್ನು ಸರಕಾರವು ರಚಿಸಬೇಕಿದ್ದು, ಅದು ಸರಕಾರದ ಸದಸ್ಯರನ್ನು ಒಳಗೊಂಡಿರಬೇಕಾಗುತ್ತದೆ ಎಂದರು. ಮಹಂತ ನೃತ್ಯಗೋಪಾಲ್‌ದಾಸ್ ಅವರನ್ನು ಸರಕಾರದ ಟ್ರಸ್ಟ್‌ನ ಅಧ್ಯಕ್ಷರಾಗಿ ನೇಮಿಸಬೇಕೆಂದು ಅವರು ಆಗ್ರಹಿಸಿದರು.

ವಿಶ್ವಹಿಂದೂ ಪರಿಷತ್ ಪ್ರಸ್ತಾವನೆ ಮಾಡಿರುವ ಮಾದರಿಯಲ್ಲೇ ನೂತನ ದೇಗುಲವನ್ನು ನಿಮಿಸಬೇಕು ಹಾಗೂ ವಿಶ್ವಹಿಂದೂ ಪರಿಷತ್‌ಸಿದ್ಧಪಡಿಸಿರುವ ಶಿಲೆಗಳನ್ನು ಅದರ ನಿರ್ಮಾಣಕ್ಕಾಗಿ ಬಳಸಬೇಕೆಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News