ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಿಂಧು, ಪ್ರಣಯ್ ಶುಭಾರಂಭ

Update: 2019-11-14 02:13 GMT

ಹಾಂಕಾಂಗ್, ನ.13: ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಹಾಗೂ ಎಚ್.ಎಸ್. ಪ್ರಣಯ್ 400,000 ಯುಎಸ್ ಡಾಲರ್ ಬಹುಮಾನ ಮೊತ್ತದ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಆದರೆ, ಸೈನಾ ನೆಹ್ವಾಲ್ ಹಾಗೂ ಸಮೀರ್ ವರ್ಮಾ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ.

ಇಲ್ಲಿ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಸಿಂಧು 36 ನಿಮಿಷಗಳ ಹೋರಾಟದಲ್ಲಿ ಕೊರಿಯಾದ ವಿಶ್ವದ ನಂ.19ನೇ ಆಟಗಾರ್ತಿ ಕಿಮ್ ಗಾ ಇವುನ್‌ರನ್ನು 21-15, 21-16 ಗೇಮ್‌ಗಳ ಅಂತರದಿಂದ ಮಣಿಸಿದರು. ಸಿಂಧು ಎರಡನೇ ಸುತ್ತಿನ ಪಂದ್ಯದಲ್ಲಿ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತೆ ಥಾಯ್ಲೆಂಡ್‌ನ ಬುಸನನ್ ಒಂಗ್‌ಬಮ್ರುಂಗ್‌ಫನ್‌ರನ್ನು ಎದುರಿಸಲಿದ್ದಾರೆ.

 ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಣಯ್ ಚೀನಾದ ಹ್ವಾಂಗ್ ಯು ಕ್ಸಿಯಾಂಗ್ ವಿರುದ್ಧ 21-17, 21-17 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ. 44 ನಿಮಿಷಗಳ ಸೆಣಸಾಟದಲ್ಲಿ 27ರ ಹರೆಯದ ಪ್ರಣಯ್ ಎದುರಾಳಿ ಆಟಗಾರ ಕ್ಸಿಯಾಂಗ್ ತಿರುಗೇಟು ನೀಡದಂತೆ ನೋಡಿಕೊಂಡರು.

ಇದೇ ವೇಳೆ 8ನೇ ಶ್ರೇಯಾಂಕದ ಸೈನಾ ಮತ್ತೊಂದು ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಕೈ ಯಾನ್ ಯಾನ್ ವಿರುದ್ಧ 13-21, 20-22 ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಸೈನಾ ಇದೀಗ ಸತತ ಎರಡನೇ ಬಾರಿ ಯಾನ್‌ಗೆ ಸೋಲುಂಡಿದ್ದಾರೆ. ಕಳೆದ ವಾರ ಚೀನಾ ಓಪನ್‌ನಲ್ಲಿ ಯಾನ್‌ಗೆ ಸೋತಿದ್ದರು. ಈ ವರ್ಷದ ಜನವರಿಯಲ್ಲಿ ಇಂಡೋನೇಶ್ಯ ಮಾಸ್ಟರ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ ಬಳಿಕ ಕಳೆದ ಆರು ಟೂರ್ನಿಗಳಲ್ಲಿ ಐದನೇ ಬಾರಿ ಸೈನಾ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ. ವಿಶ್ವದ ನಂ.16ನೇ ಆಟಗಾರ ಸಮೀರ್ ಪುರುಷರ ಸಿಂಗಲ್ಸ್ ಪಂದ್ಯದ ಮೊದಲ ಸುತ್ತಿನ ಪಂದ್ಯದಲ್ಲಿ ಚೈನೀಸ್ ತೈಪೆಯ ವಾಂಗ್ ಝು ವೀ ವಿರುದ್ಧ 11-21, 21-13, 8-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಸಮೀರ್ ಸತತ ಮೂರನೇ ಬಾರಿ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲುಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News