ಆಹಾರಧಾನ್ಯ ಬೆಲೆ ಈಗ ಗಗನಮುಖಿ: ಹಣದುಬ್ಬರ ಏರಿಕೆ

Update: 2019-11-14 04:02 GMT

ಹೊಸದಿಲ್ಲಿ, ನ.14: ದೇಶದಲ್ಲಿ ಚಿಲ್ಲರೆ ಹಣದುಬ್ಬರ ದರ ಹದಿನಾರು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕ ಏರಿದ್ದು, ಆಹಾರಧಾನ್ಯಗಳ ಬೆಲೆ ಗಗನಮುಖಿಯಾಗಿರುವುದು ಇದಕ್ಕೆ ಮುಖ್ಯ ಕಾರಣ.

ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (ಎನ್‌ಎಸ್‌ಓ) ಬುಧವಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ)ದಿಂದ ಮಾಪನ ಮಾಡುವ ಚಿಲ್ಲರೆ ಹಣದುಬ್ಬರ ದರ ಅಕ್ಟೋಬರ್‌ನಲ್ಲಿ ಶೇಕಡ 4.6ಕ್ಕೆ ಹೆಚ್ಚಿದೆ. ಈ ದರ ಹಿಂದಿನ ತಿಂಗಳಲ್ಲಿ 4% ಹಾಗೂ 2018ರ ಅಕ್ಟೋಬರ್‌ನಲ್ಲಿ 3.4% ಆಗಿತ್ತು.

ಈ ಏರಿಕೆಗೆ ಪ್ರಮುಖ ಕಾರಣವೆಂದರೆ ಆಹಾರಧಾನ್ಯಗಳ ಬೆಲೆಯಲ್ಲಿ ಹೆಚ್ಚಳ. ಆಹಾರಧಾನ್ಯಗಳ ಬೆಲೆ ಸೂಚ್ಯಂಕ ಅಕ್ಟೋಬರ್‌ನಲ್ಲಿ ಶೇ.7.9ಕ್ಕೆ ಹೆಚ್ಚಿದ್ದು, ಹಿಂದಿನ ತಿಂಗಳಲ್ಲಿ ಇದು 5.1% ಆಗಿತ್ತು. ತರಕಾರಿ ಬೆಲೆ ಅಕ್ಟೋಬರ್‌ನಲ್ಲಿ ಶೇಕಡ 26.1ರಷ್ಟು ಹೆಚ್ಚಿದ್ದು, ಬೇಳೆಕಾಳುಗಳ ಬೆಲೆ 11.7% ಹೆಚ್ಚಿದೆ. ಮಾಂಸ ಮತ್ತು ಮೀನಿನ ಬೆಲೆ ಶೇ. 9.8ರಷ್ಟು ಏರಿಕೆಯಾಗಿದೆ. ಅಧಿಕ ಮಳೆಯ ಕಾರಣದಿಂದ ಹಲವು ರಾಜ್ಯಗಳಲ್ಲಿ ಬೆಳೆ ಹಾನಿಯಾಗಿದ್ದು, ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದು ಆಹಾರ ಬೆಲೆ ಹೆಚ್ಚಳಕ್ಕೆ ಮುಖ್ಯ ಕಾರಣ ಎನ್ನುವುದು ಅರ್ಥಶಾಸ್ತ್ರಜ್ಞರ ಅಭಿಮತ,

"ರಾಜಸ್ತಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್ ಹಾಗೂ ಕರ್ನಾಟಕದಲ್ಲಿ 2019ರಲ್ಲಿ ಅಧಿಕ ಮಳೆ ಬಿದ್ದಿದ್ದು, ತೀವ್ರ ಪ್ರವಾಹದಿಂದ ಸಂಕಷ್ಟಕ್ಕೀಡಾಗಿವೆ. ಆಗಸ್ಟ್ ಮತ್ತು ಸೆಪ್ಟಂಬರ್‌ನಲ್ಲಿ ಬಿದ್ದ ಅಧಿಕ ಮಳೆ ಮುಂಗಾರು ಹಂಗಾಮಿ ಬೆಳೆಹಾನಿಗೆ ಕಾರಣವಾಗಿದೆ. ಈ ಕಾರಣದಿಂದ ಆಹಾರಧಾನ್ಯಗಳು ಹಾಗೂ ತರಕಾರಿ ಬೆಲೆ ನವೆಂಬರ್‌ನಲ್ಲೂ ಏರುಗತಿಯಲ್ಲಿರಲಿದೆ" ಎಂದು ಎಸ್‌ಬಿಐನ ಮುಖ್ಯ ಆರ್ಥಿಕ ಸಲಹೆಗಾರ್ತಿ ಸೌಮ್ಯಕಾಂತಿ ಘೋಷ್ ಅಭಿಪ್ರಾಯಪಟ್ಟಿದ್ದಾರೆ. ಡಿಸೆಂಬರ್ ವೇಳೆಗೆ ಈ ದರ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಲ್ಲಿ ಆರ್ಥಿಕ ಹಿಂಜರಿತದ ಮುನ್ಸೂಚನೆಯನ್ನು ಇದುವರೆಗಿನ ಅಂಕಿಅಂಶಗಳು ನೀಡಿದ್ದು, ಕೈಗಾರಿಕಾ ಉತ್ಪಾದನೆ ಎಂಟು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಅಂದರೆ ಶೇಕಡ 4.3ರಷ್ಟು ಕುಸಿದಿದೆ. ಜಿಡಿಪಿ ಪ್ರಗತಿದರ ಕೂಡಾ ಶೇಕಡ 5ಕ್ಕಿಂತ ಕೆಳಗೆ ಇಳಿಯುವ ಭೀತಿ ಇದ್ದು, ಆಹಾರ ಹಣದುಬ್ಬರ ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News