ಜಂಟಿ ಸಂಸದೀಯ ಸಮಿತಿ ರಫೇಲ್ ಒಪ್ಪಂದದ ತನಿಖೆ ನಡೆಸಲಿ: ರಾಹುಲ್ ಗಾಂಧಿ

Update: 2019-11-14 17:30 GMT

ಹೊಸದಿಲ್ಲಿ, ನ. 14: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತ ತನಿಖೆಗೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಹೆಬ್ಬಾಗಿಲು ತೆರೆದಿದ್ದಾರೆ ಎಂದು ಗುರುವಾರ ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತನಿಖೆಯನ್ನು ಪೂರ್ಣ ಶ್ರದ್ಧೆಯಿಂದ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ರಫೇಲ್ ಒಪ್ಪಂದದ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸುವಂತೆ ಅವರು ಕೋರಿದ್ದಾರೆ.

ಫ್ರೆಂಚ್ ಕಂಪೆನಿ ಡಸಾಲ್ಟ್ ಏವಿಯೇಷನ್‌ನಿಂದ 36 ರಫೇಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ಮೋದಿ ಸರಕಾರಕ್ಕೆ ಕ್ಲೀನ್ ಚಿಟ್ ಹಾಗೂ ಒಪ್ಪಂದದಲ್ಲಿ ಸಂಭವಿಸಿರುವ ಅರಿವಿನ ಅಪರಾಧದ ಆರೋಪದ ಕುರಿತು ಸಿಬಿಐ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ಸಲ್ಲಿಸಿದ ಮನವಿ ತಿರಸ್ಕರಿಸಿದ ಬಳಿಕ ರಾಹುಲ್ ಗಾಂಧಿ ಅವರು ಈ ಹೇಳಿಕೆ ನೀಡಿದ್ದಾರೆ.

36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ನಿರ್ಧಾರದಲ್ಲಿ ಅನುಮಾನ ಪಡುವ ಯಾವುದೇ ವಿಚಾರ ಇಲ್ಲ ಎಂದು ಹೇಳಿ 2018 ಡಿಸೆಂಬರ್ 14ರಂದು ನೀಡಿದ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು.

‘‘ಈ ಮರು ಪರಿಶೀಲನಾ ಅರ್ಜಿ ಯಾವುದೇ ಅರ್ಹತೆ ಹೊಂದಿಲ್ಲ’’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್, ಕೆ.ಎಂ. ಜೋಸೆಫ್ ಅವರನ್ನು ಒಳಗೊಂಡ ಪೀಠ ತಿಳಿಸಿದೆ.

ಆರೋಪದ ಬಗ್ಗೆ ತನಿಖೆ ಆದೇಶಿಸುವುದು ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ನ್ಯಾಯಾಧೀಶರು ಬಂದಿದ್ದಾರೆ ಎಂದು ನ್ಯಾಯಮೂರ್ತಿ ಕೌಲ್ ತೀರ್ಪು ಓದಿ ಹೇಳಿದರು. ನ್ಯಾಯಮೂರ್ತಿ ಕೌಲ್ ಬರೆದ ಮುಖ್ಯ ತೀರ್ಪನ್ನು ನಾನು ಒಪ್ಪಿದ್ದೇನೆ ಎಂದು ಪ್ರತ್ಯೇಕ ತೀರ್ಪು ಬರೆದೆ ನ್ಯಾಯಮೂರ್ತಿ ಜೋಸೆಫ್ ತಿಳಿಸಿದರು.

  ‘‘ರಫೇಲ್ ಹಗರಣದ ತನಿಖೆಗೆ ಹೆಬ್ಬಾಗಿಲನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಜೋಸೆಫ್ ತೆರೆದಿದ್ದಾರೆ. ಈ ಬಗ್ಗೆ ತನಿಖೆಯನ್ನು ಪೂರ್ಣ ಶ್ರದ್ಧೆಯಿಂದ ಆರಂಭಿಸಬೇಕು. ಈ ಹಗರಣದ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ಸ್ಥಾಪಿಸಬೇಕು’’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News