ಅಯೋಧ್ಯೆಯಲ್ಲಿ ಮಸೀದಿಗೆ ಪರ್ಯಾಯ ನಿವೇಶನ ಸ್ವೀಕಾರಾರ್ಹವಲ್ಲ: ಜೆಯುಎಚ್

Update: 2019-11-15 14:34 GMT

ಲಕ್ನೋ, ನ.15: ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ತಿಳಿಸಿರುವಂತೆ ಮಸೀದಿ ನಿರ್ಮಾಣಕ್ಕೆ ಐದು ಎಕರೆ ಪರ್ಯಾಯ ನಿವೇಶನವನ್ನು ಸ್ವೀಕರಿಸದಿರಲು ಅಯೋಧ್ಯೆ ಭೂ ವಿವಾದ ಪ್ರಕರಣದಲ್ಲಿ ಪ್ರಮುಖ ಮುಸ್ಲಿಂ ಕಕ್ಷಿಯಾಗಿರುವ ಜಮೀಯತ್ ಉಲೆಮಾ ಎ-ಹಿಂದ್ (ಜೆಯುಎಚ್‌) ನಿರ್ಧರಿಸಿದೆ. ಹಣ ಅಥವಾ ಭೂಮಿಯಾಗಿರಲಿ,ಮಸೀದಿಗೆ ಯಾವುದೂ ಪರ್ಯಾಯವಲ್ಲ ಎಂದು ಗುರುವಾರ ದಿಲ್ಲಿಯಲ್ಲಿ ತನ್ನ ಕಾರ್ಯಕಾರಿ ಸಮಿತಿಯ ಸಭೆಯ ಬಳಿಕ ಜೆಯುಎಚ್‌ ತಿಳಿಸಿದೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪುನರ್‌ಪರಿಶೀಲನೆಯನ್ನು ಕೋರುವ ಸಾಧ್ಯತೆಯನ್ನೂ ಅದು ತಳ್ಳಿಹಾಕಿಲ್ಲ.

ಐದು ಎಕರೆ ಪರ್ಯಾಯ ನಿವೇಶನ ಮತ್ತು ಪುನರ್‌ಪರಿಶೀಲನೆ ಅರ್ಜಿ ಸಲ್ಲಿಸುವ ಸಾಧ್ಯತೆಗೆ ಸಂಬಂಧಿಸಿದಂತೆ ಎರಡು ಮಹತ್ವದ ನಿರ್ಧಾರಗಳನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿದೆ. ಅದು ಹಣವಾಗಿರಲಿ ಅಥವಾ ಭೂಮಿಯಾಗಿರಲಿ,ವಿಶ್ವದಲ್ಲಿ ಮಸೀದಿಗೆ ಯಾವುದೂ ಪರ್ಯಾಯವಲ್ಲ ಎಂದು ಸಭೆಯು ಸರ್ವಾನುಮತದಿಂದ ತೀರ್ಮಾನಿಸಿದೆ. ವಿನಿಮಯವನ್ನು ಒಪ್ಪಿಕೊಳ್ಳುವುದು ಯಾವುದೇ ಮುಸ್ಲಿಂ ಸಂಘಟನೆಗೆ ಸರಿಯಲ್ಲ ಎಂದು ಜೆಯುಎಚ್‌ನ ಉತ್ತರ ಪ್ರದೇಶ ಮುಖ್ಯಸ್ಥ ಮೌಲಾನಾ ಅಷದ್ ರಷೀದಿ ಅವರು ತಿಳಿಸಿದರು.

ಜೆಯುಎಚ್ ಅಧ್ಯಕ್ಷ ಅರ್ಷದ್ ಮದನಿ ನೇತೃತ್ವದ ಐವರು ಸದಸ್ಯರ ಸತ್ಯಶೋಧನಾ ಸಮಿತಿಯು ಒಂದೆರಡು ದಿನಗಳಲ್ಲಿ ನ್ಯಾಯಾಲಯದ ದಾಖಲೆಗಳನ್ನು ಪರಿಶೀಲಿಸಲಿದೆ ಮತ್ತು ಮುಂದಿನ ಕ್ರಮವನ್ನು ಕೈಗೊಳ್ಳುವ ಮುನ್ನ ತನ್ನ ವಕೀಲರು ಮತ್ತು ಸರ್ವೋಚ್ಚ ನ್ಯಾಯಾಲಯದ ಇತರ ವಕೀಲರ ಅಭಿಪ್ರಾಯಗಳನ್ನು ಪಡೆದುಕೊಳ್ಳಲಿದೆ ಎಂದರು.

1919ರಲ್ಲಿ ಸ್ಥಾಪನೆಗೊಂಡ ಜೆಯುಎಚ್ ದೇಶದಲ್ಲಿಯ ಅತ್ಯಂತ ಪ್ರಭಾವಿ ಮತ್ತು ಶ್ರೀಮಂತ ಮುಸ್ಲಿಂ ಸಂಸ್ಥೆಗಳಲ್ಲೊಂದಾಗಿದ್ದು,ಶತಮಾನೋತ್ಸವದ ಸಂಭ್ರಮದಲ್ಲಿದೆ. ಖಿಲಾಫತ್ ಆಂದೋಲನ ಮತ್ತು ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದ ಅದು,ದೇಶದ ವಿಭಜನೆಯನ್ನೂ ವಿರೋಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News