ರಫೇಲ್ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಲೇಬೇಕು: ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್

Update: 2019-11-15 15:41 GMT

ಹೊಸದಿಲ್ಲಿ, ನ.15: ರಫೇಲ್ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಲೇಬೇಕು ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಮತ್ತು ಮಾಜಿ ಬಿಜೆಪಿ ನಾಯಕ ಅರುಣ ಶೌರಿ ಅವರು ಶುಕ್ರವಾರ ಇಲ್ಲಿ ಪ್ರತಿಪಾದಿಸಿದರು. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಮೋದಿ ಸರಕಾರಕ್ಕೆ ಕ್ಲೀನ್ ಚಿಟ್ ನೀಡಿದ್ದ ತನ್ನ ತೀರ್ಪಿನ ಪುನರ್‌ಪರಿಶೀಲನೆಯನ್ನು ಕೋರಿ ಭೂಷಣ,ಶೌರಿ ಮತ್ತು ಮಾಜಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಅವರ ಅರ್ಜಿಯೂ ಸೇರಿದಂತೆ ಅರ್ಜಿಗಳ ಗೊಂಚಲನ್ನು ಸರ್ವೋಚ್ಚ ನ್ಯಾಯಾಲಯವು ಗುರುವಾರ ತಿರಸ್ಕರಿಸಿತ್ತು. ಒಪ್ಪಂದದಲ್ಲಿ ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳಲ್ಲಿ ಎಫ್‌ಐಆರ್ ದಾಖಲಿಸುವಂತೆ ಸಿಬಿಐಗೆ ಆದೇಶಿಸಲು ಯಾವುದೇ ಕಾರಣಗಳಿಲ್ಲ ಎಂದೂ ಅದು ಹೇಳಿತ್ತು.

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹೊರತಾಗಿಯೂ ತಾವು ಸಲ್ಲಿಸಿರುವ ದೂರಿನ ಕುರಿತು ತನಿಖೆ ನಡೆಸಲು ಸಿಬಿಐ ಬದ್ಧವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ ಭೂಷಣ,ಹಾಗೆ ಮಾಡಲು ಅದು ವಿಫಲಗೊಂಡರೆ ತಾವು ಸುಪ್ರೀಂ ಮೆಟ್ಟಿಲನ್ನೇರುವುದಾಗಿ ತಿಳಿಸಿದರು.

ತನ್ನ ವಾದಕ್ಕೆ ಸಮರ್ಥನೆಯಾಗಿ ಭೂಷಣ ಅವರು ತೀರ್ಪನ್ನು ಪ್ರಕಟಿಸಿದ್ದ ಮು.ನ್ಯಾ.ರಂಜನ್ ಗೊಗೊಯಿ ನೇತೃತ್ವದ ಪೀಠದ ಮೂವರು ನ್ಯಾಯಾಧೀಶರಲ್ಲೋರ್ವರಾಗಿದ್ದ ನ್ಯಾ.ಕೆ.ಎಂ.ಜೋಸೆಫ್ ಅವರ ಅಭಿಪ್ರಾಯವನ್ನು ಪ್ರಸ್ತಾಪಿಸಿದರು.

ನ್ಯಾ.ಜೋಸೆಫ್ ಅವರು ಗುರುವಾರ ತನ್ನ ಪ್ರತ್ಯೇಕ ಆದರೆ ಸಹಮತದ ತೀರ್ಪಿನಲ್ಲಿ,ಸಿಬಿಐ ಹಾಲಿ ಸರಕಾರದಿಂದ ಸಂಪೂರ್ಣ ಸ್ವತಂತ್ರವಾಗಿ ಕಾರ್ಯಾಚರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಅದರಿಂದ ಅತ್ಯುನ್ನತ ಗುಣಮಟ್ಟದ ವೃತ್ತಿಪರತೆ,ರಾಜಿ ಮಾಡಿಕೊಳ್ಳದ ಸ್ವಾತಂತ್ರಮತ್ತು ತಟಸ್ಥತೆಯನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದರು.

ಪ್ರಕರಣದ ತನಿಖೆಯನ್ನು ನಡೆಸಲು ಸಿಬಿಐ ಸರಕಾರದ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ ಮತ್ತು ಅದಕ್ಕಾಗಿ ಮೂರು ತಿಂಗಳ ಕಾಲಾವಕಾಶವನ್ನು ಹೊಂದಿದೆ ಎಂದ ಭೂಷಣ,ಸಿಬಿಐ ಹಾಗೆ ಮಾಡದಿದ್ದರೆ ಅದಕ್ಕೆ ಕಾರಣಗಳನ್ನು ಅದು ಉಲ್ಲೇಖಿಸಬೇಕಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News