ದಿಲ್ಲಿ ಜಿಲ್ಲಾ ನ್ಯಾಯಾಲಯಗಳ ವಕೀಲರ ಮುಷ್ಕರಕ್ಕೆ ತೆರೆ

Update: 2019-11-15 17:15 GMT

ಹೊಸದಿಲ್ಲಿ, ನ.15: ಇಲ್ಲಿಯ ತೀಸ್ ಹಝಾರಿ ನ್ಯಾಯಾಲಯದಲ್ಲಿ ನ.2ರಂದು ಪೊಲೀಸರೊಂದಿಗೆ ಘರ್ಷಣೆಗಳ ಬಳಿಕ ದಿಲ್ಲಿಯ ಎಲ್ಲ ಆರೂ ಜಿಲ್ಲಾ ನ್ಯಾಯಾಲಯಗಳ ವಕೀಲರು ಆರಂಭಿಸಿದ್ದ ಮುಷ್ಕರ ಶುಕ್ರವಾರ ಅಂತ್ಯಗೊಂಡಿದ್ದು, ಶನಿವಾರದಿಂದ ಕಲಾಪಗಳಿಗೆ ಹಾಜರಾಗಲಿದ್ದಾರೆ.

ವಿಷಯವನ್ನು ಬಗೆಹರಿಸಿಕೊಳ್ಳುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ವಕೀಲರಿಗೆ ಆದೇಶಿಸಿದ ಬಳಿಕ ಅಖಿಲ ಜಿಲ್ಲಾ ನ್ಯಾಯಾಲಯಗಳ ವಕೀಲರ ಸಂಘಗಳ ಸಮನ್ವಯ ಸಮಿತಿಯು ತನ್ನ ಪದಾಧಿಕಾರಿಗಳ ಸಭೆಯಲ್ಲಿ ಮುಷ್ಕರವನ್ನು ಅಂತ್ಯಗೊಳಿಸುವ ತೀರ್ಮಾನವನ್ನು ತೆಗೆದುಕೊಂಡಿತು.

 ಘರ್ಷಣೆಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲ್ಪಟ್ಟಿರುವ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಬಲವಂತದ ಕ್ರಮಗಳನ್ನು ಕೈಗೊಳ್ಳದಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ಅಧಿಕಾರಿಗಳಿಗೆ ನಿರ್ದೇಶ ನೀಡಿರುವ ಹಿನ್ನೆಲೆಯಲ್ಲಿ ವಕೀಲರ ಸಂಘದ ಸದಸ್ಯರ ಅಭಿಪ್ರಾಯಗಳನ್ನು ಪಡೆದುಕೊಂಡು ಮುಂದಿನ ಕ್ರಮವನ್ನು ನಿರ್ಧರಿಸುವುದಾಗಿ ಸಮಿತಿಯು ತಿಳಿಸಿದೆ.

ಉಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸದ್ಯಕ್ಕೆ ಮುಷ್ಕರವನ್ನು ಕೈ ಬಿಡಲಾಗಿದೆಯಾದರೂ ಇತರ ರೂಪಗಳಲ್ಲಿ ಪ್ರತಿಭಟನೆಗಳು ಮುಂದುವರಿಯಲಿವೆ. ವಕೀಲರ ರಕ್ಷಣೆ ಕಾಯ್ದೆ ರಚನೆಗಾಗಿ ಹೋರಾಟವೂ ಮುಂದುವರಿಯಲಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಮಹಾವೀರ ಶರ್ಮಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News