ಸ್ಯಾನ್‌ಡಿಯಾಗೊ ಶೂಟೌಟ್: ಪತಿಯಿಂದ ಪತ್ನಿ, ಮೂವರು ಮಕ್ಕಳ ಹತ್ಯೆ

Update: 2019-11-17 16:33 GMT
ಫೋಟೊ : Getty Images

ಸ್ಯಾನ್‌ಡಿಯಾಗೊ, ನ.17: ಆಮೆರಿಕದ ಸ್ಯಾನ್‌ಡಿಯಾಗೊ ನಗರದಲ್ಲಿ ಕುಟುಂಬದೊಳಗಿನ ಮನಸ್ತಾಪವು ವಿಕೋಪಕ್ಕೆ ತಲುಪಿ, ತಂದೆಯೊಬ್ಬ ತನ್ನ ಹೆಂಡತಿ ಮೂವರು ಗಂಡುಮಕ್ಕಳನ್ನು ಗುಂಡಿಕ್ಕಿ ಹತ್ಯೆಗೈದು, ತಾನೂ ಆತ್ಮಹತ್ಯೆ ಘಟನೆ ಶನಿವಾರ ನಡೆದಿದೆ. ಘಟನೆಯಲ್ಲಿ ಇನ್ನೋರ್ವ ಬಾಲಕ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ.

ಸ್ಯಾನ್‌ಡಿಯಾಗೊ ಪ್ಯಾರರಸ್ ಹಿಲ್ಸ್ ವಸತಿ ಪ್ರದೇಶದಲ್ಲಿ ಈ ಹತ್ಯಾಕಾಂಡ ನಡೆದಿದೆ. ಪೊಲೀಸರು ಘಟನಾಸ್ಥಳಕ್ಕೆ ಆಗಮಿಸಿದಾಗ ಮೂರು ವರ್ಷದ ಬಾಲಕ ಹಾಗೂ ಆತನ ತಂದೆ, ತಾಯಿ ರಕ್ತದ ಮಡುವಿನ ಮಧ್ಯೆ ಶವವಾಗಿ ಬಿದ್ದಿರುವುದು ಪತ್ತೆಯಾಯಿತು. ಗಂಭೀರ ಗಾಯಗೊಂಡಿದ್ದ 5,9 ಹಾಗೂ 11 ವರ್ಷದ ಮೂವರು ಬಾಲಕರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅವರಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾಗಲೇ ಕೊನೆಯುಸಿರೆಳೆದರು ಎಂದು ಸ್ಯಾನ್‌ಡಿಯಾಗೊದ ಪೊಲೀಸ್ ವರಿಷ್ಠ ಡೇವಿಡ್ ನಿಸ್ಲೆಯಿಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬದುಕುಳಿದಿರುವ ಇನ್ನೋರ್ವ ಬಾಲಕ ಆಸ್ಪತ್ರೆಯ ತುರ್ತು ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ ತನ್ನ ಪತಿಯ ವಿರುದ್ಧ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆಯನ್ನು ಪತ್ನಿ ಪಡೆದುಕೊಂಡಿದ್ದರು. ಆದರೆ ಶನಿವಾರ ಬೆಳಗ್ಗೆ ದಂಪತಿಯ ನಡುವೆ ವಾಗ್ವಾದವುಂಟಾಗಿತ್ತು. ಉದ್ರಿಕ್ತ ಪತಿಯು ತನ್ನ ಪತ್ನಿ ಹಾಗೂ ನಾಲ್ವರು ಮಕ್ಕಳಿಗೆ ಹ್ಯಾಂಡ್‌ಗನ್‌ನಿಂದ ಗುಂಡಿಕ್ಕಿದ ಬಳಿಕ ತನಗೆ ತಾನೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News