ಚಿಕಿತ್ಸೆಗಾಗಿ 4 ವಾರ ವಿದೇಶ ಪ್ರಯಾಣಕ್ಕೆ ನವಾಝ್‌ಗೆ ನ್ಯಾಯಾಲಯ ಅನುಮತಿ

Update: 2019-11-17 16:39 GMT

ಲಾಹೋರ್, ನ.16: ಅನಾರೋಗ್ಯದಿಂದ ಬಳಲುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ವೈದ್ಯಕೀಯ ಶುಶ್ರೂಷೆಗಾಗಿ ಲಂಡನ್‌ಗೆ ಪ್ರಯಾಣಿಸಲು ಲಾಹೋರ್ ನ ಹೈಕೋರ್ಟ್ ಶನಿವಾರ ಅನುಮತಿ ನೀಡಿದೆ. ಶರೀಫ್ ಅವರು ವೈದ್ಯಕೀಯ ಚಿಕಿತ್ಸೆಗಾಗಿ ನಾಲ್ಕು ವಾರಗಳ ಕಾಲ ವಿದೇಶದಲ್ಲಿ ಉಳಿಯಬಹುದೆಂದು ಅದು ತಿಳಿಸಿದೆ.

 ಆದರೆ ನವಾಝ್ ಶರೀಫ್ ಅವರಿಗೆೆ ಚಿಕಿತ್ಸೆ ನೀಡುವ ವೈದ್ಯರು ಶಿಫಾರಸು ಮಾಡಿದಲ್ಲಿ, ಅವರ ನಾಲ್ಕು ವಾರಗಳ ವಿದೇಶಿ ವಾಸ್ತವ್ಯದ ಅವಧಿಯನ್ನು ಇನ್ನೂ ಹೆಚ್ಚು ದಿನಗಳ ಕಾಲ ವಿಸ್ತರಿಸಬಹುದಾಗಿದೆಯೆಂದು ಅದು ತಿಳಿಸಿದೆ.

69 ವರ್ಷದ ನವಾಝ್ ಶರೀಫ್ ಅವರು ಪ್ಲಾಟೆಲೆಟ್ ಕಣಗಳ ಕೊರತೆ ಸೇರಿದಂತೆ ಬಹುವಿಧದ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಪ್ರಸಕ್ತ ಅವರು ಲಾಹೋರ್ ಸಮೀಪದ ತನ್ನ ನಿವಾಸದಲ್ಲೇ ಸ್ಥಾಪಿಸಲಾಗಿರುವ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿದೇಶ ಪ್ರಯಾಣ ನಿಷೇಧಿತರಾದವರ ಪಟ್ಟಿ (ನೋ ಫ್ಲೈ ಲಿಸ್ಟ್)ಯಿಂದ ನವಾಝ್ ಶರೀಫ್ ಅವರ ಹೆಸರನ್ನು ಕೈಬಿಡುವಂತೆಯೂ ನ್ಯಾಯಾಲಯವು ಇಮ್ರಾನ್ ಖಾನ್ ಸರಕಾರಕ್ಕೆ ಆದೇಶಿಸಿದೆ.

ನವಾಝ್ ಶರೀಫ್ ಅವರ ಪುತ್ರ ಹುಸೈನ್ ನವಾಝ್ ಅವರು ತನ್ನ ತಂದೆಯವರನ್ನು ಲಂಡನ್‌ಗೆ ಕೊಂಡೊಯ್ಯಲು ವಿಶೇಷ ಆ್ಯಂಬುಲೆನ್ಸ್ ವಿಮಾನದ ವ್ಯವಸ್ಥೆ ಮಾಡಿದ್ದು, ಅದು ನಾಳೆ ಲಾಹೋರ್‌ಗೆ ಆಗಮಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News