ಭೋಪಾಲ್ ದುರಂತದಲ್ಲಿ ಸಿಡಿದ ಹೋರಾಟದ ಕಿಡಿ 'ಅಬ್ದುಲ್ ಜಬ್ಬಾರ್'

Update: 2019-11-18 06:44 GMT

2001ರಲ್ಲಿ ಯೂನಿಯನ್ ಕಾರ್ಬೈಡ್ ಡೌ ಕೆಮಿಕಲ್ಸ್‌ನ ಅಂಗಸಂಸ್ಥೆಯಾಗಿ ಗುರುತಿಸಿಕೊಂಡಿತು. ಹೋರಾಟದ ವೇದಿಕೆಯೂ ಬದಲಾಯಿತು. ಅದು ಜಾಗತಿಕವಾಗಿ ವಿಸ್ತರಣೆಯನ್ನು ಪಡೆಯಿತು. ಜಬ್ಬಾರ್ ಎಂದಿನಂತೆ ತಮ್ಮ ಹಳೆಯ ಸೀಮಿತ ಸಂಪನ್ಮೂಲಗಳ ಜೊತೆಗೆ ಹೋರಾಡಿದರು. ಯಾವುದೇ ವಿದೇಶಿ ನೆರವಿಲ್ಲದೆ, ಹೊರಗಿನ ಸ್ವಯಂಸೇವಕರಿಲ್ಲದೆ, ಇಂಟರ್‌ನೆಟ್‌ನ ಸೌಲಭ್ಯಗಳಿಲ್ಲದೆ ಅದೇ ಹಳೆಯ ಪೋಸ್ಟರ್, ಫೈಲ್, ಹ್ಯಾಂಡ್‌ಬಿಲ್‌ಗಳ ಮೂಲಕ.

ಭೋಪಾಲ್ ದುರಂತ ಮಹಾ ಹತ್ಯಾಕಾಂಡ ಮಾತ್ರವಲ್ಲ, ಭಾರತದ ಜನರಿಗೆ ಅಭಿವೃದ್ಧಿಯ ಹೆಸರಿನಲ್ಲಿ ಮಾಡಿದ ಮಹಾದ್ರೋಹ. ಅದೊಂದು ಅವಘಡ ಎನ್ನಲಾಗುತ್ತಿದೆ. ಆದರೆ ಅದೊಂದು ಮಹಾಅಪರಾಧವಾಗಿತ್ತು. 1984ರ ಡಿಸೆಂಬರ್‌ನಲ್ಲಿ ಯೂನಿಯನ್ ಕಾರ್ಬೈಡ್‌ನ ಕೀಟನಾಶಕ ಕಾರ್ಖಾನೆಯಿಂದ ಸೋರಿಕೆಯಾದ ವಿಷಕಾರಿ ಅನಿಲ ತಕ್ಷಣಕ್ಕೆ ಸುಮಾರು 10,000 ಜನರನ್ನು ಕೊಂದಿತ್ತು. ಅದರ ಉಳಿದ 25,000 ಸಂತ್ರಸ್ತರು ಹಂತಹಂತವಾಗಿ ಸಾಯುತ್ತಾ ಹೋದರು. ಮಾರಣಹೋಮ ಅಲ್ಲಿಗೇ ನಿಲ್ಲಲಿಲ್ಲ. ಒಂದೂವರೆ ಲಕ್ಷ ಜನರು ಉಸಿರಾಟ, ಹಾರ್ಮೋನ್ ಮತ್ತು ಮಾನಸಿಕ ಕಾಯಿಲೆಗಳಿಂದ ಬಳಲತೊಡಗಿದರು. ಅವರ ಪೀಳಿಗೆಯಿಂದ ಪೀಳಿಗೆಗೆ ಈ ರೋಗ ಹಸ್ತಾಂತರವಾಯಿತು. ಕ್ಯಾನ್ಸರ್, ಅಂಗವೈಕಲ್ಯಗಳು ಕಂಡು ಬರತೊಡಗಿದವು. ಒಂದೆಡೆ ವಿಷಾನಿಲದ ಕ್ರೌರ್ಯದಿಂದ ತತ್ತರಿಸಿ ಬಿದ್ದ ಜನಸಮುದಾಯ, ಮತ್ತೆ ಎದ್ದು ನಿಂತು ನ್ಯಾಯಕ್ಕಾಗಿ ಹೋರಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಅಂದರೆ, ಸಂತ್ರಸ್ತರೇ ಮತ್ತೆ ವ್ಯವಸ್ಥೆಯ ವಿರುದ್ಧ ಯುದ್ಧ ಹೂಡಬೇಕಾದ ಸ್ಥಿತಿ. ಈ ರೋಗಪೀಡಿತ ಸಂತ್ರಸ್ತರನ್ನು ಜೊತೆಗೂಡಿಸಿ ಅವರನ್ನು ಯುದ್ಧಕ್ಕೆ ಸಜ್ಜುಗೊಳಿಸಿದ ಹೆಗ್ಗಳಿಕೆ ಇತ್ತೀಚೆಗೆ ನಿಧನರಾದ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಜಬ್ಬಾರ್‌ಗೆ ಸಲ್ಲಬೇಕು.

ಅನಿಲ ಸೋರಿಕೆಯಿಂದ ಜಬ್ಬಾರ್ ತನ್ನ ಕುಟುಂಬದೊಳಗೆ ಮೂರು ಜನರನ್ನು ಕಳೆದುಕೊಂಡಿದ್ದರು. ಮತ್ತು ಸ್ವತಃ ಶ್ವಾಸಕೋಶ ಮತ್ತು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರು. ತನ್ನ ಸ್ಥಿತಿಯಿಂದ ಅವರು ಅಸಹಾಯಕರಾಗಿ ಮೂಲೆ ಸೇರದೆ, ಅಳಿದುಳಿದವರನ್ನು ಸಂಘಟಿಸಿ ಹೋರಾಟಕ್ಕೆ ಧುಮುಕಿದರು. ಭೋಪಾಲ್ ದುರಂತದ ಹಿಂದಿದ್ದದ್ದು ದೊಡ್ಡ ಶಕ್ತಿಗಳಾಗಿದ್ದವು. ಅವರ ಬೇರು ಅಮೆರಿಕದಂತಹ ಶಕ್ತ ರಾಷ್ಟಗಳಲ್ಲಿ ಇಳಿದಿದ್ದವು. ಭಾರತದ ಅಧಿಕಾರಿಶಾಹಿ ವ್ಯವಸ್ಥೆ ಆ ಶಕ್ತಿಗಳ ಜೊತೆಗೆ ಕೈ ಜೋಡಿಸಿದ್ದವು. ಆದುದರಿಂದಲೇ, ತಮಗಾದ ಅನ್ಯಾಯಕ್ಕೆ ಪರಿಹಾರ ಮತ್ತು ಆರೋಪಿಗಳಿಗೆ ಶಿಕ್ಷೆ ಈ ಎರಡು ದೊರಕುವುದು ಕಷ್ಟ ಸಾಧ್ಯವಾಗಿತ್ತು.

ಈ ದುರಂತ ಭಾರತಕ್ಕೆ ಹೊಸತು. ಅಣುಸ್ಥಾವರದಂತಹ ಯೋಜನೆಗಳ ಕುರಿತಂತೆ ಆ ದಿನಗಳಲ್ಲಿ ಜನಜಾಗೃತಿಯಿರಲಿಲ್ಲ ಮತ್ತು ಅದರ ವಿರುದ್ಧ ಹೋರಾಡುವ ಶಕ್ತಿಗಳು ಇನ್ನೂ ಹುಟ್ಟಿರಲಿಲ್ಲ. ದೊಡ್ಡ ವ್ಯವಸ್ಥೆಯ ವಿರುದ್ಧ ಜನರನ್ನು ಸಂಘಟಿಸಿ ಹೋರಾಡುವ ಸ್ಥಿತಿಯೂ ಆಗ ಇದ್ದಿರಲಿಲ್ಲ. ಆಗ ಜಬ್ಬಾರ್‌ರಂತಹ ಕೆಲವೇ ಕೆಲವು ನಾಯಕರು ಸಂತ್ರಸ್ತ ಜನರನ್ನೇ ಒಟ್ಟಾಗಿಸಿ ಅವರಿಗೆ ತರಬೇತಿ ನೀಡಿ, ನ್ಯಾಯಕ್ಕಾಗಿ ಹೋರಾಡುವ ಒಂದು ಪಡೆಯನ್ನು ಕಟ್ಟಿದರು. ಇಂದು ಸಂತ್ರಸ್ತರಿಗೆ ಅಲ್ಪಸ್ವಲ್ಪ ನ್ಯಾಯ ಸಿಕ್ಕಿದ್ದರೆ ಅದರ ಹಿಂದೆ ಜಬ್ಬಾರ್‌ರಂತಹ ಕಾರ್ಯಕರ್ತರ ಬಹುದೊಡ್ಡ ತ್ಯಾಗ ಬಲಿದಾನಗಳಿವೆ.

ಭೋಪಾಲ್ ದುರಂತಕ್ಕೆ ಸಂಬಂಧಿಸಿ ಎರಡು ರೀತಿಯ ಹೋರಾಟಗಳು ನಡೆಯುತ್ತಾ ಬಂದಿದೆ. ಒಂದು ಸರಕಾರದ ಅನ್ಯಾಯವನ್ನು ಪ್ರತಿಭಟಿಸುವುದು, ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು. ಎರಡನೆಯದು, ಸಂತ್ರಸ್ತರಿಗೆ ಪರಿಹಾರವನ್ನು ನೀಡುವುದು ಮಾತ್ರವಲ್ಲ, ಅವರನ್ನು ಸ್ವಾವಲಂಬಿಗಳನ್ನಾಗಿಸುವುದು. ಇದಕ್ಕಾಗಿ ಹೇಗೆ ಯಾವ ದಾರಿಯಲ್ಲಿ ಸಾಗಬೇಕು ಎನ್ನುವುದನ್ನು ತಿಳಿ ಹೇಳುವ ಜನರೇ ಆಗ ಇದ್ದಿರಲಿಲ್ಲ. ಇಂತಹ ಸಂದರ್ಭದಲ್ಲಿ ಭೋಪಾಲ್ ಸಂತ್ರಸ್ತರು ತಮ್ಮ ಹೋರಾಟವನ್ನು ಸಂಘಟಿಸಿದರು. ಹಮ್ ಭೋಪಾಲ್ ಕಿ ನಾರಿ ಹೈ, ಫೂಲ್ ನಹೀ ಚಿಂಗಾರಿ ಹೈ...

ಆಗಿನ್ನು ಭೋಪಾಲ್ ದುರಂತ ಸಂಭವಿಸಿ ಒಂದು ದಶಕ ಉರುಳಿದೆ. 1993ರ ಕಾಲಘಟ್ಟ. ಭೋಪಾಲ್‌ನ ಬೀದಿಗಳಲ್ಲಿ ನೂರಾರು ಮಹಿಳೆಯರು ಕೆರಳಿದ ಸರ್ಪಗಳಂತೆ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಹಲವರು ತಮ್ಮ ಮುಖಗಳನ್ನು ಸೀರೆಯ ಸೆರಗಿನಿಂದ, ಕೆಲವರು ಬುರ್ಖಾಗಳಿಂದ ಮುಚ್ಚಿದ್ದರು. ಅವರೆಲ್ಲರ ಕೈಗಳಲ್ಲಿ ಫಲಕಗಳಿದ್ದವು. ಯೂನಿಯನ್ ಕಾರ್ಬೈಡ್ ಮುಖ್ಯಸ್ಥ ವಾರೆನ್ ಅಂಡರ್ಸನ್ ಅವರನ್ನು ಉಲ್ಲೇಖಿಸಿ ಗ್ಯಾಸ್ ಪೀಡಿತ್ ಕೋ ಇನ್ಸಾಫ್ ದೋ ಮತ್ತು ಹ್ಯಾಂಗ್ ಅಂಡರ್ಸನ್ ಎಂದು ಅವುಗಳಲ್ಲಿ ಬರೆಯಲ್ಪಟ್ಟಿದ್ದವು. ಅವರೆಲ್ಲರ ನೇತೃತ್ವವನ್ನು ಜಬ್ಬಾರ್ ವಹಿಸಿದ್ದರು. ‘‘ಲಡೇಂಗೇ ಜೀತೇಂಗೆ’’ ಎಂದು ಅವರು ಘೋಷಣೆ ಕೂಗುತ್ತಾ, ಹಾಡು ಹಾಡುತ್ತಾ ಮುಂದೆ ಹೆಜ್ಜೆಯಿಟ್ಟರೆ ಉಳಿದವರು ಅದಕ್ಕೆ ಜೊತೆಯಾಗುತ್ತಿದ್ದರು. ಈ ಮೆರವಣಿಗೆ ಸರಕಾರವನ್ನು ಎಚ್ಚರಿಸುವಲ್ಲಿ ಮಹತ್ತರ ಪಾತ್ರವಹಿಸಿತ್ತು. ಹಮ್ ಭೋಪಾಲ್ ಕಿ ನಾರಿ ಹೈ, ಫೂಲ್ ನಹಿನ್, ಚಿಂಗರಿ ಹೈ (ನಾವು ಹೂವುಗಳಲ್ಲ, ಭೋಪಾಲದ ನಾರಿಯರು, ಬೆಂಕಿಯ ಕಿಡಿಗಳು) ಎಂಬ ಮಹಿಳೆಯರ ಘೋಷಣೆಗಳು ದಿಲ್ಲಿಯನ್ನು ತಲುಪುವಂತಿದ್ದವು. ಸಂತ್ರಸ್ತರಿಗೆ ಮೊದಲಿಗೆ, ಮಧ್ಯಪ್ರದೇಶ ಸರಕಾರವು ಪ್ರತಿದಿನ 200 ಮಿಲಿ ಲೀ. ಹಾಲು ಮತ್ತು ಪ್ರತಿ ತಿಂಗಳು 5 ಕೆಜಿ ಆಹಾರವನ್ನು ಪರಿಹಾರವಾಗಿ ನೀಡಿತ್ತು. ಇದೊಂದು ರೀತಿ ಸರಕಾರದ ಭಿಕ್ಷೆಯಂತಿತ್ತು. ಆಗ ಜಬ್ಬಾರ್ ನೇತೃತ್ವದಲ್ಲಿ ಮಹಿಳೆಯರು ಘೋಷಣೆಯನ್ನು ಹೊರಡಿಸಿದರು. ‘ನಮಗೆ ಕರುಣೆ ಬೇಡ, ನಮಗೆ ಉದ್ಯೋಗಗಳು ಬೇಕು.’

ಜಬ್ಬಾರ್ ಒಂದೆಡೆ ಮಾಧ್ಯಮಗಳಲ್ಲಿ ಹೀಗೆ ಹಂಚಿಕೊಂಡಿದ್ದರು. ‘ನಾವು 1988 ರಲ್ಲಿ ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ಗೆ ಹೋದೆವು, ಈ ಹೋರಾಟದ ಮೊದಲ ಯಶಸ್ಸಿನ ಭಾಗವಾಗಿ ಮಹಿಳೆಯರಿಗೆ ಟೈಲರಿಂಗ್ ಕೇಂದ್ರಗಳನ್ನು ತೆರೆಯಲು ಸಾಧ್ಯವಾಯಿತು. ಈ ಕೇಂದ್ರಗಳಲ್ಲಿ ಸುಮಾರು 2,300 ಮಹಿಳೆಯರು ಉದ್ಯೋಗಗಳನ್ನು ಮಾಡುತ್ತಿದ್ದಾರೆ’ ಅನಿಲ ದುರಂತದಲ್ಲಿ ಬದುಕುಳಿದ ಸುಮಾರು 30,000 ಜನರನ್ನು ಜಬ್ಬಾರ್ ಅವರು ಪ್ರತಿನಿಧಿಸಿದ್ದರು. ಅವರಲ್ಲಿ ಮುಖ್ಯವಾಗಿ ಮಹಿಳೆಯರು. 1986ರಿಂದ ತೊಡಗಿದ ಅವು ಹಲವು ಮಗ್ಗುಲುಗಳನ್ನು ಪಡೆದಿದೆ. ಪ್ರತಿ ಶನಿವಾರ ಅವರು ಪ್ರತಿಭಟನಾ ಸಭೆಗಳನ್ನು ನಡೆಸಿದ್ದಾರೆ. ಮೊದಲು ಭೋಪಾಲ್‌ನ ರಾಧಾ ಸಿನೆಮಾ ಮಂದಿರದ ಬಳಿ, ಬಳಿಕ ಯಾದ್ಗಾರ್ ಇ ಶಹಜಹಾನಿ ಪಾರ್ಕ್‌ನಲ್ಲಿ. ಈ ಪಾರ್ಕ್ ಒಂದು ಐತಿಹಾಸಿಕ ತಾಣವಾಗಿದೆ. 1942ರಲ್ಲಿ ಬ್ರಿಟಿಷರ ವಿರುದ್ಧ ಹೋರಾಟವನ್ನು ನಡೆಸಿದ ಐತಿಹಾಸಿಕ ತಾಣ ಇದು. ಪ್ರತಿ ವಾರ, ಮಹಿಳೆಯರು ಮೆರವಣಿಗೆಯ ಬಳಿಕ ಈ ಉದ್ಯಾನದಲ್ಲಿ ಒಂದುಗೂಡುತ್ತಿದ್ದರು. ಅವರ ಜೊತೆಗೆ ವೈದ್ಯಕೀಯ ಕಡತಗಳು ಮತ್ತು ಹೋರಾಟದ ಕಥೆಗಳನ್ನೊಳಗೊಂಡ ಉರಿಯುತ್ತಿರುವ ಮಾತುಗಳಿದ್ದವು. ಈ ಸಂದರ್ಭದಲ್ಲಿ ಅವರೊಂದಿಗೆ ಬೃಹತ್ ಬಟ್ಟೆಯ ಬ್ಯಾನರ್ ಇರುತ್ತಿತ್ತು. ಅದರಲ್ಲಿ ‘ಯುದ್ಧದಲ್ಲಿ ಭಾಗವಹಿಸುವವರು ಮಾತ್ರ ದಾನ ಮಾಡಬಹುದು’ ಎನ್ನುವ ಹೇಳಿಕೆಯಿತ್ತು.

ಈ ಹೋರಾಟ ವಿಶಿಷ್ಟ ಮಾದರಿಯದು. ಇದೊಂದು ಅಹಿಂಸಾತ್ಮಕ ಚಳವಳಿ. ಇದಕ್ಕಾಗಿ 50 ಪೈಸೆಯನ್ನು ಸ್ವಯಂ ಪ್ರೇರಣೆಯಿಂದ ದಾನ ಮಾಡುವಂತೆ ಸಂತ್ರಸ್ತರನ್ನು ಜಬ್ಬಾರ್ ಕೇಳಿಕೊಂಡರು. ಬಾಹ್ಯ ಧನಸಹಾಯದ ಜೊತೆಗೆ ಬದುಕುಳಿದವರೂ ಇದರಲ್ಲಿ ಆರ್ಥಿಕವಾಗಿ ಪಾಲುದಾರರಾಗಬೇಕು ಎನ್ನುವುದು ಅವರು ಉದ್ದೇಶವಾಗಿತ್ತು. ಇದು ಕೇವಲ ಭೋಪಾಲ್‌ಗೆ ಮಾತ್ರ ಸಂಬಂಧಪಟ್ಟ ಹೋರಾಟವಲ್ಲ, ಇಡೀ ಭಾರತಕ್ಕೆ ಸಂಬಂಧಪಟ್ಟ ಹೋರಾಟ ಎನ್ನುವುದು ಜಬ್ಬಾರ್ ಅವರ ಅನಿಸಿಕೆಯಾಗಿತ್ತು. ವಿದೇಶಿಗರನ್ನು ‘ಈ ದೇಶಕ್ಕೆ ಬನ್ನಿ, ಇಲ್ಲಿನ ಜನರ ಜೀವನ, ಆರೋಗ್ಯ, ಪರಿಸರದೊಂದಿಗೆ ಚೆಲ್ಲಾಟವಾಡಿ. ಕೆಟ್ಟು ಹೋದ ಬಳಿಕ ಅಲ್ಪ ಪರಿಹಾರವನ್ನು ನೀಡಿ ಹೊಣೆಗಾರಿಕೆಯಿಂದ ಜಾರಿಕೊಳ್ಳಿ’ ಎನ್ನುವ ಸಂದೇಶವನ್ನು ಭಾರತ ಸರಕಾರ ನೀಡುವುದನ್ನು ನೀವು ಬಯಸುತ್ತೀರಾ ಎಂದು ದೇಶದ ಜನರನ್ನು ಕೇಳುತ್ತಿದ್ದರು. ಅನಿಲ ದುರಂತಕ್ಕೆ ಸಂಬಂಧಪಟ್ಟ ಅಪರಾಧಿಗಳಿಗೆ ಶಿಕ್ಷೆಯಾಗುವ ಮೂಲಕ ಇಡೀ ಭಾರತಕ್ಕೆ ನ್ಯಾಯ ನೀಡಬೇಕು ಎನ್ನುವುದು ಅವರ ಸ್ಪಷ್ಟ ನಿಲುವಾಗಿತ್ತು.

ಲಡೇಂಗೇ ಜೀತೇಂಗೆ

ಭೋಪಾಲ್ ಅನಿಲ ಸಂತ್ರಸ್ತರ ಹೋರಾಟ ನಿಧಾನಕ್ಕೆ ಬೇರೆ ಬೇರೆ ರೂಪಗಳನ್ನು ಪಡೆಯಿತು. 2001ರಲ್ಲಿ ಯೂನಿಯನ್ ಕಾರ್ಬೈಡ್ ಡೌ ಕೆಮಿಕಲ್ಸ್‌ನ ಅಂಗಸಂಸ್ಥೆಯಾಗಿ ಗುರುತಿಸಿಕೊಂಡಿತು. ಹೋರಾಟದ ವೇದಿಕೆಯೂ ಬದಲಾಯಿತು. ಅದು ಜಾಗತಿಕವಾಗಿ ವಿಸ್ತರಣೆಯನ್ನು ಪಡೆಯಿತು. ಜಬ್ಬಾರ್ ಎಂದಿನಂತೆ ತಮ್ಮ ಹಳೆಯ ಸೀಮಿತ ಸಂಪನ್ಮೂಲಗಳ ಜೊತೆಗೆ ಹೋರಾಡಿದರು. ಯಾವುದೇ ವಿದೇಶಿ ನೆರವಿಲ್ಲದೆ, ಹೊರಗಿನ ಸ್ವಯಂಸೇವಕರಿಲ್ಲದೆ, ಇಂಟರ್‌ನೆಟ್‌ನ ಸೌಲಭ್ಯಗಳಿಲ್ಲದೆ ಅದೇ ಹಳೆಯ ಪೋಸ್ಟರ್, ಫೈಲ್, ಹ್ಯಾಂಡ್‌ಬಿಲ್‌ಗಳ ಮೂಲಕ. ಜಬ್ಬಾರ್ ಅವರ ಹಳೆಯ ಕಂಪ್ಯೂಟರ್ ಅವರ ಕಣ್ಣಿನಂತೆಯೇ ಕೆಟ್ಟು ಕೂತಿದೆ. ಅವರ ಕಚೇರಿ ಗೋಡೆಗಳ 35 ವರ್ಷ ಹಳೆಯ ಛಾಯಾಚಿತ್ರಗಳು ಗುರುತಿಸಲಾಗದಷ್ಟು ಮಸುಕಾಗಿವೆ.

ಫೇಸ್‌ಬುಕ್‌ನಲ್ಲಿ ಅವರು ಖಾತೆಯನ್ನು ಸ್ಥಾಪಿಸಿದರಾದರೂ, ಬೀದಿಗಳಲ್ಲಿ ನಡೆಯದೇ ಫೇಸ್‌ಬುಕ್ ಮೂಲಕ ಹೋರಾಟ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು ಮತ್ತು ಬದುಕುಳಿದವರಿಗೆ ಅನೇಕ ಪಾಠಗಳನ್ನು ಕಲಿಸಿದೆ. ಜನರಲ್ಲಿ ಮೂಡಿಸಿದ ಜಾಗೃತಿ ಕೇವಲ ಅನಿಲ ಪರಿಹಾರ ಯುದ್ಧಕ್ಕೆ ಸೀಮಿತವಾಗಿಲ್ಲ ಎಂದು ಜಬ್ಬಾರ್ ಅನಿಸಿಕೆಯಾಗಿತ್ತು. ನೀವು ಇದನ್ನು ಏಕೆ ಮಾಡುತ್ತಿದ್ದೀರಿ? ನನ್ನ ಹುಡುಗನನ್ನು ಯಾಕೆ ಬಂಧಿಸಿದ್ದೀರಿ? ನಿಮ್ಮ ಲಾಠಿಯಿಂದ ನನ್ನನ್ನು ಏಕೆ ಸೋಲಿಸಲು ಬಯಸುತ್ತೀರಿ? ಅವರು ಬ್ಯಾಂಕಿಗೆ ಹೋಗಿ ತಮ್ಮ ಖಾತೆಗಳಲ್ಲಿ 6,000 ರೂಪಾಯಿಗಳ ಬದಲು ಕೇವಲ 4,300 ರೂ.ಗಳನ್ನು ಏಕೆ ಹೊಂದಿದ್ದಾರೆಂದು ಪ್ರಶ್ನಿಸುವುದನ್ನು ಕಲಿತಿರುವುದು ತಪ್ಪೇ ಎಂದು ಅವರು ಪೊಲೀಸರನ್ನು ಪ್ರಶ್ನಿಸುತ್ತಿದ್ದರು. ಮಧುಮೇಹ, ಹೃದಯ ಕಾಯಿಲೆ ಜಬ್ಬಾರ್‌ರನ್ನು ಕಳೆದ ಮೂರು ತಿಂಗಳಲ್ಲಿ ಹಣ್ಣು ಮಾಡಿದ್ದವು. ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಅವರು ವಾರಗಳ ಹಿಂದೆಯೇ ಆರೋಪಿಸಿದ್ದರು. ಇನ್ನೇನು ಸಾಯುವ ಕ್ಷಣದಲ್ಲಿ ಸರಕಾರ ಎಚ್ಚೆತ್ತು ಅವರ ನೆರವಿಗೆ ಮುಂದಾಯಿತು. ಆದರೆ ಅಷ್ಟರಲ್ಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

Writer - ರಾಜೇಶ್ ಬೆಟ್ಟಂಪಾಡಿ

contributor

Editor - ರಾಜೇಶ್ ಬೆಟ್ಟಂಪಾಡಿ

contributor

Similar News