'ಅಯೋಧ್ಯೆ ತೀರ್ಪು ದೋಷಪೂರಿತವಾಗಿದೆ, ಆದರೆ': ಯಶವಂತ್ ಸಿನ್ಹಾ ಹೇಳಿದ್ದು ಹೀಗೆ...

Update: 2019-11-18 17:15 GMT

 ಮುಂಬೈ, ನ. 18: ಅಯೋಧ್ಯೆ ವಿವಾದದ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಬಿಜೆಪಿಯ ಮಾಜಿ ನಾಯಕ ಯಶವಂತ್ ಸಿನ್ಹಾ ಟೀಕಿಸಿದ್ದಾರೆ. ಆದರೆ, ಮುಸ್ಲಿಂ ಸಮುದಾಯ ಈ ತೀರ್ಪನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.

ಮುಂಬೈಯಲ್ಲಿ ನಡೆದ ಸಾಹಿತ್ಯೋತ್ಸವದಲ್ಲಿ ಯಶವಂತ್ ಸಿನ್ಹಾ ಮಾತನಾಡಿದರು.

ಅಯೋಧ್ಯೆ ವಿವಾದದ ಕುರಿತು ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂ ಕೋರ್ಟ್ ತೀರ್ಪು ದೋಷಪೂರಿತ. ಅದು ನ್ಯೂನತೆಗಳಿಂದ ತುಂಬಿದೆ. ಆದರೆ, ಈ ತೀರ್ಪನ್ನು ಒಪ್ಪಿಕೊಳ್ಳುವಂತೆ ನಾನು ಮುಸ್ಲಿಂ ಸಮುದಾಯದಲ್ಲಿ ವಿನಂತಿಸುತ್ತೇನೆ ಎಂದಿದ್ದಾರೆ.

ನಾವು ಮುಂದುವರಿಯೋಣ. ಸುಪ್ರೀಂ ಕೋರ್ಟ್‌ನ ತೀರ್ಪಿನ ಬಳಿಕ ಯಾವುದೇ ತೀರ್ಪು ಇಲ್ಲ ಎಂದು ಅವರು ಹೇಳಿದ್ದಾರೆ.

ಬಾಬರಿ ಮಸೀದಿ-ರಾಮಜನ್ಮಭೂಮಿ ಒಡೆತನ ವಿವಾದದ ಕುರಿತು ನವೆಂಬರ್ 9ರಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್, ವಿವಾದಿತ 2.77 ಎಕರೆ ಭೂಮಿಯನ್ನು ರಾಮ್ ಲಲ್ಲಾಗೆ ಹಸ್ತಾಂತರಿಸಬೇಕು ಎಂದು ಹೇಳಿತ್ತು.

ಸುಪ್ರೀಂ ಕೋರ್ಟ್‌ನ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಮನವಿ ಸಲ್ಲಿಸುವ ಬಗ್ಗೆ ರವಿವಾರ ಒಲವು ವ್ಯಕ್ತಪಡಿಸಿರುವ ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ, ಮಸೀದಿ ನಿರ್ಮಿಸಲು 5 ಎಕರೆ ಭೂಮಿ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸುವುದಾಗಿ ಹೇಳಿದೆ.

ಇದಲ್ಲದೆ, ಆರಂಭದಲ್ಲಿ ಬಾಬರಿ ಮಸೀದಿ ಧ್ವಂಸದ ಕುರಿತು ಎಲ್.ಕೆ. ಅಡ್ವಾಣಿ ಹಾಗೂ ಬಿಜೆಪಿಯ ಇತರ ಹಿರಿಯ ನಾಯಕರು ತಪ್ಪೊಪ್ಪಿಕೊಳ್ಳುತ್ತೇವೆ ಹಾಗೂ ಕ್ಷಮೆ ಯಾಚಿಸುತ್ತೇವೆ ಎಂದು ಹೇಳಿದ್ದರು. ಅನಂತರ ರಾಮ ಮಂದಿರ ಚಳವಳಿಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿದರು ಎಂದು ಯಶವಂತ್ ಸಿನ್ಹಾ ಪ್ರತಿಪಾದಿಸಿದ್ದಾರೆ.

 ಭ್ರಷ್ಟ್ರ ಕಾಂಗ್ರೆಸ್‌ಗೆ ಪರ್ಯಾಯವಾಗಿ ಕೋಮುವಾದಿ ಬಿಜೆಪಿಗೆ ಸೇರುವುದು ಉತ್ತಮವೆಂದು ಭಾವಿಸಿ 1993ರಲ್ಲಿ ಬಿಜೆಪಿಗೆ ಸೇರಿದೆ ಎಂದು ಯಶವಂತ್ ಸಿನ್ಹಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News