ಸಂತ್ರಸ್ತೆಯನ್ನು ವಿವಾಹವಾದರೂ ಅತ್ಯಾಚಾರ ಆರೋಪ ರದ್ದಾಗದು: ದಿಲ್ಲಿ ಹೈಕೋರ್ಟ್ ತೀರ್ಪು

Update: 2019-11-18 16:03 GMT

ಹೊಸದಿಲ್ಲಿ, ನ.18: ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಹಾಗೂ ಸಂತ್ರಸ್ತೆ ವಿವಾಹವಾದಲ್ಲಿ ಹಾಗೂ ವಿವಾದವನ್ನು ತಮ್ಮ ನಡುವೆ ಬಗೆಹರಿಸಿಕೊಂಡಲ್ಲಿ, ಅದನ್ನು ಪ್ರಕರಣದ ಎಫ್‌ಐಆರ್‌ನ್ನು ರದ್ದುಪಡಿಸಲು ಉತ್ತಮ ಕಾರಣವೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು ದಿಲ್ಲಿ ಹೈಕೋರ್ಟ್ ತಿಳಿಸಿದೆ.

 ಅತ್ಯಾಚಾರವು ಅತ್ಯಂತ ಹೇಯ ಪ್ರಕರಣಗಳ ಶ್ರೇಣಿಯಡಿ ಬರುವುದರಿಂದ ಒಂದು ವೇಳೆ ಕಕ್ಷಿದಾರರು ತಮ್ಮೊಳಗೆ ವಿವಾದವನ್ನು ಬಗೆಹರಿಸಿದರೂ ಅಥವಾ ಪರಸ್ಪರ ವಿವಾಹವಾದರೂ, ಪ್ರಕರಣವನ್ನು ವಿಚಾರಣೆಯಿಂದ ಕೈಬಿಡಲು ಸಾಧ್ಯವಿಲ್ಲವೆಂದು ಅದು ತಿಳಿಸಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ)ದ ವಿನೂತನ ವರದಿಯ ಪ್ರಕಾರ, 2017ರಲ್ಲಿ ವರದಿಯಾದ 32,559 ಅತ್ಯಾಚಾರ ಪ್ರಕರಣಗಳ ಪೈಕಿ 10,553 ಪ್ರಕರಣಗಳಲ್ಲ ಆರೋಪಿಗಳು, ಸಂತ್ರಸ್ತರ ಸ್ನೇಹಿತರು, ಆನ್‌ಲೈನ್ ಮಿತ್ರರು, ಲಿವ್ ಇನ್ ಸಂಬಂಧ ಹೊಂದಿರುವವರು ಅಥವಾ ಪ್ರತ್ಯೇಕಗೊಂಡ ಪತಿ’ಗಳಾಗಿದ್ದಾರೆ. ಉಳಿದ 16,591 ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳು, ಕುಟುಂಬ ಸ್ನೇಹಿತರು, ಉದ್ಯೋಗಿಗಳು, ನೆರೆಹೊರೆಯವರು ಅಥವಾ ಇತರ ಪರಿಚಿತ ವ್ಯಕ್ತಿಗಳಾಗಿದ್ದಾರೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ತನ್ನ ಲಿವ್‌ಇನ್ ಸಂಗಾತಿ ದಿಲ್ಲಿಯ ಸಫ್ದರ್‌ ಜಂಗ್ ಎನ್‌ಕ್ಲೇವ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ತನ್ನ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ನ್ನು ಕೈಬಿಡಬೇಕೆಂದು ಕೋರಿ ಆರೋಪಿಯೊಬ್ಬ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ಬ್ರಿಜೇಶ್ ಶೇಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

 ಆರೋಪಿಯು ತನ್ನ ಭಾವನಾತ್ಮಕ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಹಾಗೂ ತನ್ನನ್ನು ಪ್ರೀತಿಸುವ ನಾಟಕವಾಡಿ ವಿವಾಹವಾಗುವಂತೆ ಪದೇ ಪದೇ ಒತ್ತಾಯಿಸುತ್ತಿದ್ದಾನೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News