ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಸುಧಾರಣೆ ಎಂದ ಸರಕಾರ

Update: 2019-11-19 16:57 GMT

ಹೊಸದಿಲ್ಲಿ, ನ.19: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡ ಆ.5ರಿಂದೀಚಿಗೆ ಕಾಶ್ಮೀರ ಕಣಿವೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯಲ್ಲಿ ಸುಧಾರಣೆಯಾಗಿದೆ ಎಂದು ಗೃಹ ಸಚಿವಾಲಯವು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದೆ. ಆದರೆ ಪೂರಕವಾಗಿ ಬಿಡುಗಡೆಗೊಳಿಸಿರುವ ಅಂಕಿಅಂಶಗಳು ಈ ಹೇಳಿಕೆಯನ್ನು ಸಮರ್ಥಿಸುತ್ತಿಲ್ಲ.

ಕಲ್ಲು ತೂರಾಟದ ಘಟನೆಗಳು ಕಡಿಮೆಯಾಗಿವೆಯೇ ಎಂಬ ಬಿಜೆಪಿ ಸಂಸದ ಕನಕಮಲ್ ಕಟಾರಾ ಅವರ ಪ್ರಶ್ನೆಗೆ ಸಹಾಯಕ ಗೃಹಸಚಿವ ಜಿ.ಕಿಶನ್ ರೆಡ್ಡಿ ಅವರು ಸಕಾರಾತ್ಮಕವಾಗಿ ಉತ್ತರಿಸಿದರಾದರೂ ಅಂಕಿಅಂಶಗಳು ಇದಕ್ಕೆ ವಿರುದ್ಧವಾಗಿರುವಂತಿವೆ.

2019,ಆ.5ರಿಂದ ನ.15ರವರೆಗೆ ಕಲ್ಲು ತೂರಾಟ/ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ದಾಖಲಾಗಿರುವ 190 ಪ್ರಕರಣಗಳಲ್ಲಿ 765 ಜನರನ್ನು ಬಂಧಿಸಲಾಗಿದೆ. 2019,ಜ.1ರಿಂದ ಆ.4ರವರೆಗೆ ಇಂತಹ 361 ಪ್ರಕರಣಗಳು ದಾಖಲಾಗಿದ್ದವು ಎಂದು ಗೃಹ ಸಚಿವಾಲಯವು ಲಿಖಿತ ಉತ್ತರದಲ್ಲಿ ತಿಳಿಸಿದೆ. ಆದರೆ ಆ.5ಕ್ಕೆ ಮುನ್ನ ಕಲ್ಲು ತೂರಾಟಕ್ಕಾಗಿ ಎಷ್ಟು ಜನರನ್ನು ಬಂಧಿಸಲಾಗಿತ್ತು ಎನ್ನುವುದನ್ನು ಉತ್ತರವು ಉಲ್ಲೇಖಿಸಿಲ್ಲ.

ಕಲ್ಲು ತೂರಾಟ ಘಟನೆಗಳ ಸಂಖ್ಯೆಯು 2016ರಲ್ಲಿ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿಯ ಸಾವಿನ ನಂತರ ವರದಿಯಾಗಿದ್ದ ಪ್ರಕರಣಗಳಿಗಿಂತ ತುಂಬ ಕಡಿಮೆಯಿದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಲು ತೂರಾಟದ ಘಟನೆಗಳನ್ನು ತಡೆಯಲು ಸರಕಾರವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಅದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಭಾರೀ ಸಂಖ್ಯೆಯಲ್ಲಿ ಕಿಡಿಗೇಡಿಗಳು, ಪ್ರಚೋದಕರು ಮತ್ತು ಗುಂಪುಗಳನ್ನು ಸೇರಿಸುವರನ್ನು ಗುರುತಿಸಿ ಪಿಎಸ್‌ಎ ಅಡಿ ಬಂಧನ ಸೇರಿದಂತೆ ಅವರ ವಿರುದ್ಧ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ ರೆಡ್ಡಿ,ಕಲ್ಲು ತೂರಾಟದ ಘಟನೆಗಳ ಹಿಂದೆ ಹುರಿಯತ್ ಬೆಂಬಲಿತ ಸಂಘಟನೆಗಳ ಕೈವಾಡವಿದೆ ಎಂದು ಆರೋಪಿಸಿದರು.

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು,ಕಳೆದ ಆರು ತಿಂಗಳಲ್ಲಿ 12,934 ವಿದೇಶಿಯರು ಸೇರಿದಂತೆ ಒಟ್ಟು 34,10,219 ಪ್ರವಾಸಿಗಳು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ ಮತ್ತು ಈ ಅವಧಿಯಲ್ಲಿ ಪ್ರವಾಸೋದ್ಯಮದ ಮೂಲಕ 25.12 ಕೋ.ರೂ. ಆದಾಯ ಗಳಿಕೆಯಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News