​ಈ ಮಾಜಿ ಪ್ರಧಾನಿ ನಿವಾಸಕ್ಕೆ 4.35 ಕೋಟಿ ರೂ. ತೆರಿಗೆ ನೋಟಿಸ್

Update: 2019-11-20 03:59 GMT

ಪ್ರಯಾಗ್‌ರಾಜ್: ಮಾಜಿ ಪ್ರಧಾನಿ ಇಂದಿರಾಗಾಂಧಿ ಹುಟ್ಟಿದ ನಿವಾಸ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಆನಂದ ಭವನಕ್ಕೆ 4.35 ಕೋಟಿ ರೂ. ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲಾಗಿದೆ.

ವಾಸೇತರ ಕಟ್ಟಡದ ವರ್ಗದಲ್ಲಿ ಆನಂದಭವನಕ್ಕೆ ತೆರಿಗೆ ನೋಟಿಸ್ ನೀಡಲಾಗಿದ್ದು, 2013ರಿಂದೀಚೆಗೆ ತೆರಿಗೆ ಪಾವತಿಸಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆನಂದ ಭವನ ಗಾಂಧಿ ಕುಟುಂಬದ ಮನೆಯಾಗಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರ ಅಧ್ಯಕ್ಷತೆಯ ಜವಾಹರಲಾಲ್ ನೆಹರೂ ಸ್ಮಾರಕ ಟ್ರಸ್ಟ್ ಇದನ್ನು ನಿರ್ವಹಿಸುತ್ತಿದೆ.

ಮಹಾನಗರಪಾಲಿಕೆ ಕಾಯ್ದೆ ಮತ್ತು ಆಸ್ತಿ ತೆರಿಗೆ ನಿಮಯಾವಳಿ ಅನುಸಾರ ನೋಟಿಸ್ ನೀಡಲಾಗಿದೆ ಎಂದು ಪ್ರಯಾಗ್‌ರಾಜ್ ಮಹಾನಗರ ಪಾಲಿಕೆಯ ಮುಖ್ಯ ತೆರಿಗೆ ಮೌಲ್ಯಮಾಪನ ಅಧಿಕಾರಿ ಪಿ.ಕೆ.ಮಿಶ್ರಾ ಸ್ಪಷ್ಟಪಡಿಸಿದ್ದಾರೆ.

ತೆರಿಗೆ ಮೊತ್ತ ನಿಗದಿಪಡಿಸಲು ಸಮೀಕ್ಷೆ ನಡೆಸಲಾಗಿದ್ದು, ಆಕ್ಷೇಪಣೆಯನ್ನೂ ಆಹ್ವಾನಿಸಿದ್ದೆವು. ಆದರೆ ಇದುವರೆಗೆ ಯಾರಿಂದಲೂ ಆಕ್ಷೇಪ ಬಂದಿಲ್ಲ. ಆದ್ದರಿಂದ ತೆರಿಗೆ ನಿರ್ಧರಿಸಿ ನೋಟಿಸ್ ನೀಡಿದ್ದೇವೆ ಎಂದು ಹೇಳಿದ್ದಾರೆ.

ಜವಾಹರಲಾಲ್ ನೆಹರೂ ಸ್ಮಾರಕ ಟ್ರಸ್ಟ್‌ಗೆ ಎಲ್ಲ ತೆರಿಗೆಗಳಿಂದ ವಿನಾಯ್ತಿ ಇದ್ದು, ಈ ಟ್ರಸ್ಟ್ ಆನಂದ ಭವನವನ್ನು ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ತೆರಿಗೆ ವಿಧಿಸುವಂತಿಲ್ಲ ಎಂದು ಪ್ರಯಾಗ್‌ರಾಜ್‌ನ ಮಾಜಿ ಮೇಯರ್ ಚೌಧರಿ ಜಿತೇಂದ್ರನಾಥ್ ಸಿಂಗ್ ಪ್ರತಿಪಾದಿಸಿದ್ದಾರೆ. ಇದು ಸ್ವಾತಂತ್ರ್ಯ ಹೋರಾಟದ ಸ್ಮಾರಕ; ಹಾಗೂ ಸ್ಮರಣಿಕೆಗಳ ಮ್ಯೂಸಿಯಂ ಹಾಗೂ ಶೈಕ್ಷಣಿಕ ಕೇಂದ್ರ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News