‘20 ಲಕ್ಷಕ್ಕೂ ಅಧಿಕ ಜನರ ಪೌರತ್ವ ಕಸಿದುಕೊಳ್ಳುವ ಹುನ್ನಾರ’

Update: 2019-11-20 15:14 GMT

ಅಸ್ಸಾಂನ ಮುಸ್ಲಿಮರನ್ನು ಹೊರದಬ್ಬಲು ಹಾಗೂ ಅವರನ್ನು ದೂರವಿಡಲು ಎನ್‌ಆರ್‌ಸಿ ಪ್ರಕ್ರಿಯೆಯನ್ನು ಬಳಸಿಕೊಳ್ಳುವ ತಮ್ಮ ಇರಾದೆಯನ್ನು ಭಾರತದ ಆಡಳಿತಾರೂಢ ರಾಜಕಾರಣಿಗಳು ನೇರವಾಗಿ ವ್ಯಕ್ತಪಡಿಸಿದ್ದಾರೆ. ಭಾರತದಾದ್ಯಂತ ರಾಜಕೀಯ ನಾಯಕರು ಎನ್‌ಆರ್‌ಸಿಯನ್ನು ವಿಸ್ತರಿಸಲು ಬಯಸುತ್ತಿದ್ದಾರೆ ಹಾಗೂ ಮುಸ್ಲಿಮರಿಗೆ ವಿಭಿನ್ನವಾದ ಪೌರತ್ವ ಮಾನದಂಡಗಳನ್ನು ಜಾರಿಗೊಳಿಸಲು ಬಯಸುತ್ತಿದ್ದಾರೆ

ಅನುರಿಮಾ ಭಾರ್ಗವ್, ಯುಎಸ್‌ಸಿಐಆರ್‌ಎಫ್ ಕಮೀಶನರ್

ವಾಶಿಂಗ್ಟನ್, ನ.20: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆ ಯಡಿಯಲ್ಲಿ ಅಸ್ಸಾಂನಲ್ಲಿ ದೀರ್ಘ ಸಮಯದಿಂದ ನೆಲೆಸಿರುವ ಸುಮಾರು 20 ಲಕ್ಷಕ್ಕೂ ಅಧಿಕ ಮಂದಿ,ಶೀಘ್ರವೇ ದೇಶರಹಿತರಾಗಲಿದ್ದಾರೆ. ನ್ಯಾಯಯುತವಲ್ಲದ, ಅಪಾರದರ್ಶಕ ಮತ್ತು ವ್ಯವಸ್ಥಿತವಾದ ಪ್ರಕ್ರಿಯೆಯ ಮೂಲಕ ಅವರ ಪೌರತ್ವವನ್ನು ಕಸಿದುಕೊಳ್ಳಲಾಗುತ್ತಿದೆಯೆಂದು ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ (ಯುಎಸ್‌ಸಿಐಆರ್‌ಎಫ್)ಕ್ಕಾಗಿನ ಆಯೋಗ ಕಳವಳ ವ್ಯಕ್ತಪಡಿಸಿದೆ.

ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯ ಅಂತಿಮ ಪಟ್ಟಿಯನ್ನು ಆಗಸ್ಟ್ 31ರಂದು ಬಿಡುಗಡೆಗೊಳಿಸಲಾಗಿದ್ದು 19 ಲಕ್ಷಕ್ಕೂ ಅಧಿಕ ಮಂದಿಯನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಯುಎಸ್‌ಸಿಐಆರ್‌ಎಫ್ ಹೇಳಿದೆ.

 ಅಸ್ಸಾಂನಲ್ಲಿರುವ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಗುರಿಯಾಗಿರಿಸಿ ಕೊಂಡು ಹಾಗೂ ಅವರಿಗೆ ಪೌರತ್ವವನ್ನು ನಿರಾಕರಿಸುವ ದುರುದ್ದೇಶದಿಂದ ಈ ಪ್ರಕ್ರಿಯೆಯನ್ನು ಬಳಸಿಕೊಳ್ಳಲಾಗುತ್ತಿದೆಯೆಂದು ಯುಎಸ್‌ಸಿಐಆರ್‌ಎಫ್‌ನ ಕಮಿಶನರ್ ಅನುರಿಮಾ ಭಾರ್ಗವ್ ಆಪಾದಿಸಿದ್ದಾರೆ.

ಇದಕ್ಕಿಂತಲೂ ಘೋರವಾದುದೆಂದರೆ ಅಸ್ಸಾಂನ ಮುಸ್ಲಿಮರನ್ನು ಹೊರದಬ್ಬಲು ಹಾಗೂ ಅವರನ್ನು ದೂರವಿಡಲು ಎನ್‌ಆರ್‌ಸಿ ಪ್ರಕ್ರಿಯೆಯನ್ನು ಬಳಸಿಕೊಳ್ಳುವ ತಮ್ಮ ಇರಾದೆಯನ್ನು ಭಾರತದ ಆಡಳಿತಾರೂಢ ರಾಜಕಾರಣಿಗಳು ನೇರವಾಗಿ ವ್ಯಕ್ತಪಡಿಸಿದ್ದಾರೆ. ಭಾರತದಾದ್ಯಂತ ರಾಜಕೀಯ ನಾಯಕರು ಎನ್‌ಆರ್‌ಸಿಯನ್ನು ವಿಸ್ತರಿಸಲು ಬಯಸುತ್ತಿದ್ದಾರೆ ಹಾಗೂ ಮುಸ್ಲಿಮರಿಗೆ ವಿಭಿನ್ನವಾದ ಪೌರತ್ವ ಮಾನದಂಡಗಳನ್ನು ಜಾರಿಗೊಳಿಸಲು ಬಯಸುತ್ತಿದ್ದಾರೆ. ಈ ವಿಷಯವಾಗಿ ಕಳೆದ ವಾರ ನಡೆದ ಆಯೋಗದ ಸಭೆಯಲ್ಲಿ ಭಾರ್ಗವ ತಿಳಿಸಿದ್ದಾರೆ.

ಯುಎಸ್‌ಸಿಐಆರ್‌ಎಫ್‌ನ ಚೇರ್‌ಮನ್ ಟೋನಿ ಪರ್ಕಿನ್ಸ್ ಮಾತನಾಡಿ, ಭಾರತ ಸರಕಾರವು ಪೌರತ್ವಕ್ಕಾಗಿ ಧಾರ್ಮಿಕ ಪರೀಕ್ಷೆಯನ್ನು ನಡೆಸುತ್ತಿದೆಯೆಂದು ಆಪಾದಿಸಿದರು. ಸಂವಿಧಾನ ಪ್ರತಿಪಾದಿಸಿರುವಂತೆ ದೇಶದ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವಂತೆ ಅವರು ಭಾರತ ಸರಕಾರವನ್ನು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News