ಭತ್ತ ಖರೀದಿ: ಕೇಂದ್ರದಿಂದ ಚತ್ತೀಸ್‌ಗಢಕ್ಕೆ ತಾರತಮ್ಯ: ಕಾಂಗ್ರೆಸ್ ಆಕ್ರೋಶ

Update: 2019-11-20 15:17 GMT

ಹೊಸದಿಲ್ಲಿ, ನ.20: ಭತ್ತ ಖರೀದಿಯಲ್ಲಿ ಕೇಂದ್ರ ಸರಕಾರವು ಚತ್ತೀಸ್‌ಗಢಕ್ಕೆ ತಾರತಮ್ಯವನ್ನು ಮಾಡುತ್ತಿದೆಯೆಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಸಂಸದರು ಬುಧವಾರ ಲೋಕಸಭಾ ಕಲಾಪಗಳನ್ನು ಬಹಿಷ್ಕರಿಸಿ ಸಭಾತ್ಯಾಗ ಮಾಡಿದರು.

ಕಾಂಗ್ರೆಸ್ ನಾಯಕ ಅಧೀರ್‌ ರಂಜನ್ ಚೌಧರಿ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾವಿಸುತ್ತಾ, ಭತ್ತವನ್ನು ಖರೀದಿಸಲು ಕೇಂದ್ರ ಸರಕಾರವು ನಿರಾಕರಿಸುತ್ತಿರುವುದರಿಂದ ಭಾರತದ ಭತ್ತದ ಕಣಜವೆಂದೇ ಕರೆಯಲಾಗುವ ಚತ್ತೀಸ್‌ಗಢದ 13.5 ಲಕ್ಷ ಮಂದಿ ಬಡರೈರ ಮೇಲೆ ಪರಿಣಾಮ ಬೀರಿದೆಯೆಂದು ಹೇಳಿದರು..

‘‘ ಕಳೆದ ಎರಡು ವರ್ಷಗಳಿಂದ ಕೇಂದ್ರ ಸರಕಾರವು ಚತ್ತೀಸ್‌ಗಢದಿಂದ ಭತ್ತದ ಖರೀದಿಯನ್ನು ನಿಲ್ಲಿಸಿದೆ. ಇದು ತೀರಾ ತಪ್ಪು. ಈ ಸರಕಾರವು ರೈತ ವಿರೋಧಿಯಾಗಿದೆ ಎಂದು ಟೀಕಿಸಿದರು. ದೇಶಾದ್ಯಂತ ಪ್ರತಿಯೊಂದು ರಾಜ್ಯದಿಂದಲೂ ಕೇಂದ್ರ ಸರಕಾರವು ಭತ್ತವನ್ನು ಖರೀದಿಸಿದ್ದರೂ ಚತ್ತೀಸ್‌ಗಢದಿಂದ ಅದು ಖರೀದಿಸಿರಲಿಲ್ಲವೆಂದು ಅಧೀರ್ ಆಪಾದಿಸಿದರು.

ಕೇಂದ್ರ ಸರಕಾರವು ಕೂಡಲೇ ಮಧ್ಯಪ್ರವೇಶಿಸಿ, ಚತ್ತೀಸ್‌ಗಢದಿಂದ ಭತ್ತ ಖರೀದಿಯನ್ನು ಆರಂಭಿಸುವಂತೆ ಅವರು ಆಗ್ರಹಿಸಿದರು. ಆದರೆ ಸರಕಾರದಿಂದ ಈ ಬಗ್ಗೆ ಯಾವುದೆ ಪ್ರತಿಕ್ರಿಯೆ ದೊರೆಯದ ಕಾರಣ, ಆಕ್ರೋಶಗೊಂಡ ಕಾಂಗ್ರೆಸ್ ಸಂಸದರು ಸಭಾತ್ಯಾಗ ಮಾಡಿದರು.

ಭೂಪೇಶ್ ಭಾಗೆಲ್ ನೇತೃತ್ವದ ಕಾಂಗ್ರೆಸ್ ಸರಕಾರವು ಭತ್ತವನ್ನು ಉತ್ತಮ ಬೆಲೆಗೆ ಖರೀದಿಸುವುದಕ್ಕೆ ಅವಕಾಶ ನೀಡುವಂತೆ ಕೇಂದ್ರ ಸರಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News