ಅಯೋಧ್ಯೆ ತೀರ್ಪು: ಮರುಪರಿಶೀಲನೆ ಅರ್ಜಿ ಬಗ್ಗೆ ಹೇಳಿಕೆ ಬದಲಿಸಿದ ಸುನ್ನಿ ವಕ್ಫ್ ಮಂಡಳಿ

Update: 2019-11-20 15:38 GMT

ಹೊಸದಿಲ್ಲಿ, ನ. 20: ಅಯೋಧ್ಯೆ ಭೂಒಡೆತನ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ನಿರ್ಧಾರದಿಂದ ತಾನು ದೂರ ಉಳಿಯಲು ಬಯಸುವುದಾಗಿ ಸುನ್ನಿ ವಕ್ಫ್ ಮಂಡಳಿ ಬುಧವಾರ ಹೇಳಿದೆ.

ವಕ್ಫ್ ಮಂಡಳಿ ಯಾವುದೇ ಮರು ಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ಸುನ್ನಿ ವಕ್ಫ್ ಮಂಡಳಿ ಅಧ್ಯಕ್ಷ ಝಫರ್ ಫಾರೂಕಿ ತಿಳಿಸಿದ್ದಾರೆ.

‘‘ನವೆಂಬರ್ 9ರಂದು ಸುಪ್ರೀಂ ಕೋರ್ಟ್ ತೀರ್ಪು ಘೋಷಿಸಿದ ಸಂದರ್ಭ, ನಾವು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದೆವು. ನಾವು ಎಐಎಂಪಿಎಲ್‌ಬಿಯೊಂದಿಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ’’ ಎಂದು ಫಾರೂಕಿ ಹೇಳಿದ್ದಾರೆ.

ಎಐಎಂಪಿಎಲ್‌ಬಿ ಮರು ಪರಿಶೀಲನಾ ಅರ್ಜಿ ಯಾಕೆ ಸಲ್ಲಿಸುತ್ತಿದೆ ಎಂಬುದು ನನಗೆ ಸ್ಪಷ್ಟವಾಗುತ್ತಿಲ್ಲ ಎಂದು ಫಾರೂಕಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದೇವೆ ಎಂದು ನಾವು ಅಂದೇ ಹೇಳಿದ್ದೆವು. ನಾವು ನಮ್ಮ ನಿಲುವಿಗೆ ಬದ್ಧರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ‘ಸ್ವ-ವಿರೋಧಾಭಾಸ’ದಿಂದ ಕೂಡಿದೆ. ಆದುದರಿಂದ ನಾವು ಮರು ಪರಿಶೀಲನಾ ಅರ್ಜಿ ಸಲ್ಲಿಸಲಿದ್ದೇವೆ ಎಂದು ಎಐಎಂಪಿಎಲ್‌ಬಿ ಶನಿವಾರ ಹೇಳಿತ್ತು.

ಈ ನಡುವೆ ಭೂ ಒಡೆತನ ವಿವಾದದ ಕಕ್ಷಿಗಾರ ಜಮಾತ್ ಉಲೆಮಾ ಹಿಂದ್ ಕೂಡ ತಾನು ಪ್ರತ್ಯೇಕ ಮರು ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News