ಕಾಶ್ಮೀರದ ಬಗ್ಗೆ ಪೋಸ್ಟ್ ಮಾಡಿದ ಸಹಾಯಕ ಮಹಿಳಾ ಪ್ರೊಫೆಸರ್ ವಿರುದ್ಧ ಎಫ್‌ಐಆರ್

Update: 2019-11-20 16:11 GMT
ಫೈಲ್ ಫೋಟೊ

ಅಲಿಗಢ, ನ.20: ಕಾಶ್ಮೀರ ಕಣಿವೆಯಲ್ಲಿ ಕರ್ತವ್ಯ ನಿರತ ಭದ್ರತಾಪಡೆಗಳ ನೈತಿಕಸ್ಥೈರ್ಯಕ್ಕೆ ಧಕ್ಕೆಯುಂಟು ಮಾಡುವಂತಹದ್ದು ಎಂದು ಆರೋಪಿಸಲಾದ ಕೆಲವು ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಆರೋಪದಲ್ಲಿ ಅಲಿಗಢದ ಮುಸ್ಲಿಂ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಒಬ್ಬರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಆಕ್ಷೇಪಾರ್ಹವೆನ್ನಲಾದ ಪೋಸ್ಟನ್ನು ಪ್ರಸಾರ ಮಾಡಿದ ಹುಮಾ ಪರ್ವೀನ್ ಸಹಾಯಕ ಪ್ರೊಫೆಸರ್ ಆಗಿದ್ದು, ಅವರ ಪತಿ ಕಾಶ್ಮೀರದಲ್ಲಿ ನೆಲೆಸಿದ್ದಾರೆ. ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ತಕ್ಷಣವೇ ಕಣಿವೆಯಲ್ಲಿ ದೂರವಾಣಿ, ಇಂಟರ್‌ನೆಟ್ ಸಂವಹನ ಸ್ಥಗಿತಗೊಂಡಿದ್ದನ್ನು ಪ್ರಸ್ತಾವಿಸಿ ಅವರು ಪೋಸ್ಟ್ ಮಾಡಿದ್ದರು.

‘ಸಚ್ ಮೇ ಸಂಪರ್ಕ ಟೂಟ್ ಜಾನಾ ಕಿತ್‌ನಾ ಖತರ್‌ನಾಕ್ ಹಾಗೂ ದುಖಡ್ ಹೋತಾ ಹೈ, ಚಾಹೆ ಚಂದ್ರಯಾನ ಹೋ ಯಾ ಕಾಶ್ಮೀರ್’

(‘ಚಂದ್ರಯಾನವಾಗಲಿ ಅಥವಾ ಕಾಶ್ಮೀರದ ವಿಷಯವಾಗಲಿ, ಸಂಪರ್ಕವನ್ನು ಕಡಿದುಕೊಳ್ಳುವುದು ಎಷ್ಟು ಅಪಾಯಕಾರಿ ಹಾಗೂ ನೋವಿನ ಸಂಗತಿಯಾಗಿದೆ’) ಎಂದು ಆ ಪ್ರೊಫೆಸರ್ ಪೋಸ್ಟ್ ಮಾಡಿದ್ದರು.

ಬಳಿಕ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿದುಕೊಳ್ಳುವುದರೊಂದಿಗೆ ಇಸ್ರೋದ ಚಂದ್ರಯಾನ 2 ವಿಫಲವಾದದ್ದನ್ನು ’ಅವರು ಪ್ರಸ್ತಾವಿಸಿದ್ದರು.

ಎಎಂಯುನಲ್ಲಿ ಸಾಮೂಹಿಕ ಸಂವಹನ ವಿಭಾಗದ ಸಹಾಯಕ ಪ್ರೊಫೆಸರ್ ಆಗಿರುವ 34 ವರ್ಷ ವಯಸ್ಸಿನ ಹುಮಾ ಪರ್ವೀನ್ ವಿರುದ್ಧ ಎರಡು ಸಮುದಾಯಗಳ ನಡುವೆ ವೈರತ್ವವನ್ನು ಪ್ರಚೋದಿಸಿದ ಆರೋಪವನ್ನು ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಮಾ ಪರ್ವೀನ್ ಎರಡು ವಾರಗಳ ಹಿಂದೆ ಮಾಡಿದ್ದ ಪೋಸ್ಟ್ ವಿರೋಧಿಸಿ ಹಿಂದೂ ಮಹಾಸಭಾದ ವಕ್ತಾರ ಅಶೋಕ್ ಪಾಂಡೆ ನವೆಂಬರ್ 14ರಂದು ದೂರು ದಾಖಲಿಸಿದ್ದರು. ಅವರು ನೀಡಿದ ದೂರಿನನ್ವಯ ಹುಮಾ ಪರ್ವಿನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆಯೆಂದು ಅವರು ಹೇಳಿದರು.

ಹುಮಾ ಪರ್ವೀನ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಪೋಸ್ಟ್ ದೇಶದ ಸಮಗ್ರತೆಗೆ ಬೆದರಿಕೆಯಾಗಿದೆ ಹಾಗೂ ಕಾಶ್ಮೀರದ ಭದ್ರತಾ ಪಡೆಗಳ ನೈತಿಕ ಸ್ಥೈರ್ಯಕ್ಕೆ ಕೇಡುಂಟು ಮಾಡುವಂತಾಗಿದೆ ಎಂದು ಅಶೋಕ್ ಪಾಂಡೆ ಎಫ್‌ಐಆರ್‌ನಲ್ಲಿ ಆಪಾದಿಸಿದ್ದಾರೆ.

ತನ್ನ ವಿರುದ್ಧ ಹೊರಿಸಲಾದ ಆರೋಪವನ್ನು ಪರ್ವಿನ್ ನಿರಾಕರಿಸಿದ್ದಾರೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಅಲ್ಲಿ ದೂರವಾಣಿ, ಇಂಟರ್‌ನೆಟ್ ಸಂಪರ್ಕಗಳನ್ನು ರದ್ದುಪಡಿಸಿದ್ದರಿಂದ ಪತಿಯೊಂದಿಗಿನ ತನ್ನ ಸಂಪರ್ಕವು ಕಡಿದುಹೋಗಿತ್ತು. ಈ ಹಿನ್ನೆಲೆಯಲ್ಲಿ ತನ್ನ ಅನಿಸಿಕೆಯನ್ನು ಪೋಸ್ಟ್ ಮಾಡಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News