ಕಾಶ್ಮೀರ ರಾಜಕಾರಣಿಗಳ ಬಂಧನವನ್ನು ತುರ್ತುಪರಿಸ್ಥಿತಿಗೆ ಹೋಲಿಸಕೂಡದು: ಕೇಂದ್ರ

Update: 2019-11-20 16:16 GMT

ಹೊಸದಿಲ್ಲಿ, ನ.20: ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ ಕಾಶ್ಮೀರದಲ್ಲಿ ರಾಜಕೀಯ ಮುಖಂಡರ ಬಂಧನವಾಗಿದ್ದು, ಈ ಪ್ರಕರಣಗಳನ್ನು ತುರ್ತುಪರಿಸ್ಥಿತಿಯಲ್ಲಿ ನಡೆದಂತಹ ಬಂಧನಗಳಿಗೆ ಹೋಲಿಸಬಾರದೆಂದು ಕೇಂದ್ರ ಸಹಾಯಕ ಗೃಹ ಸಚಿವ ಜಿ. ಕಿಶನ್ ರೆಡ್ಡಿ ಬುಧವಾರ ಹೇಳಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ‘ಕೇವಲ ಒಬ್ಬ ವ್ಯಕ್ತಿಯ ಕುರ್ಚಿಯನ್ನು ರಕ್ಷಿಸಲು’ 36 ಸಂಸದರ ಬಂಧನವಾಗಿತ್ತು ಎಂದವರು ಕಟಕಿಯಾಡಿದರು.

ಪ್ರಶ್ನೋತ್ತರ ವೇಳೆಯಲ್ಲಿ ಪೂರಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಕಾನೂನು ಮತ್ತು ಶಿಸ್ತನ್ನು ಕಾಪಾಡುವ ಉದ್ದೇಶದಿಂದ ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದಲ್ಲಾ ಅವರಂತಹ ನಾಯಕರನ್ನು ಬಂಧಿಸಲಾಗಿದೆ ಎಂದು ಹೇಳಿದರು.

‘‘ದೇಶದ ಹಿತಾಸಕ್ತಿಯ ದೃಷ್ಟಿಯಿಂದ ವಿಭಿನ್ನ ವ್ಯಕ್ತಿಗಳನ್ನು ವಿಭಿನ್ನ ಸಮಯಗಳಲ್ಲಿ ಬಂಧಿಸಲಾಗಿದೆ. ಆದರೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ ಕುರ್ಚಿಯನ್ನು ಉಳಿಸುವುದಕ್ಕಾಗಿ ನೀವು 36 ಸಂಸದರನ್ನು ಬಂಧಿಸಿದ್ದೀರಿ ಎಂದು ಕಿಶನ್ ರೆಡ್ಡಿ ಕಾಂಗ್ರೆಸ್‌ನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ ಟೀಕಿಸಿದರು. ನಾವು ದೇಶ ಹಾಗೂ ಅದರ ಕಾನೂನು, ಸುವ್ಯವಸ್ಥೆಯ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ ಎಂದವರು ಹೇಳಿದರು.

ಫಾರೂಕ್ ಅಬ್ದುಲ್ಲಾ ಸಂಸತ್ ಕಲಾಪದಲ್ಲಿ ಭಾಗವಹಿಸದಂತೆ ಎಷ್ಟು ಸಮಯವದರೆಗೆ ಕೇಂದ್ರ ಸರಕಾರ ತಡೆಯಲಿದೆಯೆಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.

ಸದನದಲ್ಲಿ ಹಾಜರಿದ್ದ ಗೃಹಸಚಿವ ಅಮಿತ್‌ಶಾ ಮಾತನಾಡಿ, ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಕಾಶ್ಮೀರದಲ್ಲಿ ಸಾವಿರಾರು ಮಂದಿಯನ್ನು ಬಂಧಿಸಲಾಗಿದೆಯೆಂದು ಅಪಪ್ರಚಾರ ಮಾಡಲಾಗುತ್ತಿದೆ ಹಾಗೂ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ ಎಂದು ಅಮಿತ್‌ಶಾ ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News