ಮಹಾರಾಷ್ಟ್ರದಲ್ಲಿ ರೈತರ ಬಿಕ್ಕಟ್ಟು: ಪ್ರಧಾನಿಯನ್ನು ಭೇಟಿಯಾದ ಶರದ್ ಪವಾರ್

Update: 2019-11-20 16:29 GMT
PTI

ಹೊಸದಿಲ್ಲಿ, ನ. 20: ಎನ್‌ಸಿಪಿ ವರಿಷ್ಠ ಶರದ್ ಪವಾರ್ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ ಹಾಗೂ ಮಹಾರಾಷ್ಟ್ರದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಕೃಷಿ ಬಿಕ್ಕಟ್ಟು ಹಾಗೂ ಬೆಳೆ ಹಾನಿಯ ಹಿನ್ನೆಲೆಯಲ್ಲಿ ತುರ್ತಾಗಿ ಮಧ್ಯೆ ಪ್ರವೇಶಿಸುವಂತೆ ಕೋರಿದ್ದಾರೆ.

 ಮಹಾರಾಷ್ಟ್ರದಲ್ಲಿ ಮೈತ್ರಿ ಸರಕಾರ ರಚಿಸಲು ಎನ್‌ಸಿಪಿ, ಕಾಂಗ್ರೆಸ್ ಹಾಗೂ ಶಿವಸೇನೆಯ ನಡುವೆ ಮಾತುಕತೆ ನಡೆಯುತ್ತಿರುವ ಮಧ್ಯೆ ಶರದ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಸತ್ತಿನಲ್ಲಿರುವ ಅವರ ಚೇಂಬರ್‌ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

 ನಾಸಿಕ್ ಜಿಲ್ಲೆಯಲ್ಲಿ ಸೋಯಾಬೀನ್, ಭತ್ತ, ರಾಗಿ, ಜೋಳ, ಸಜ್ಜೆಯಂತಹ ಬೆಳೆಗಳು ಹಾಗೂ ಟೊಮೊಟೊ, ನೀರುಳ್ಳಿಯಂತಹ ತರಕಾರಿಗಳು ಕೊಯ್ಲಿನ ಹಂತಕ್ಕೆ ಬಂದಿವೆ. ಆದರೆ, ಅಕಾಲಿಕ ಮಳೆ ಇವುಗಳನ್ನು ಸಂಪೂರ್ಣವಾಗಿ ನಾಶಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ 10 ತಿಂಗಳಲ್ಲಿ ಕೃಷಿ ಬಿಕ್ಕಟ್ಟಿನಿಂದ ನಾಸಿಕ್‌ನಲ್ಲಿ 44 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಕಾಲಿಕ ಮಳೆಯಿಂದ ನಾಗಪುರದಲ್ಲಿ 35 ಸಾವಿರ ಹೆಕ್ಟೇರ್ ಹತ್ತಿ ಬೆಳೆ ನಾಶವಾಗಿದೆ ಎಂದು ಪವಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News