ಮಕ್ಕಳ ಅಪಹರಣ ಆರೋಪ: ನಿತ್ಯಾನಂದ ವಿರುದ್ಧ ಎಫ್‌ಐಆರ್ ದಾಖಲು

Update: 2019-11-20 17:15 GMT
PTI

ಅಹ್ಮದಾಬಾದ್, ನ.20: ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಆಶ್ರಮದ ನಿರ್ವಹಣೆಗಾಗಿ ಭಕ್ತರಿಂದ ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ಮಕ್ಕಳನ್ನು ಅಪಹರಿಸಿ ಅಕ್ರಮವಾಗಿ ಬಂಧನದಲ್ಲಿರಿಸಿದ ಆರೋಪದಲ್ಲಿ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿ ಸಾಧ್ವಿ ಪ್ರಾಣಪ್ರಿಯಾನಂದ ಮತ್ತು ಪ್ರಿಯಾತತ್ವ ರಿದ್ಧಿಕಿರಣ್ ಎಂಬ ಇಬ್ಬರು ಮಹಿಳಾ ಭಕ್ತೆಯರನ್ನು ಬಂಧಿಸಲಾಗಿದೆ. ಕನಿಷ್ಟ ನಾಲ್ವರು ಮಕ್ಕಳನ್ನು ಅಪಹರಿಸಿ, ಮನೆಯೊಂದರಲ್ಲಿ ಅಕ್ರಮವಾಗಿ ಕೂಡಿಹಾಕಿ, ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಮಕ್ಕಳನ್ನು ಬಳಸಿರುವ ಆರೋಪ ಈ ಭಕ್ತೆಯರ ಮೇಲಿದೆ. ಇವರಿಬ್ಬರು ಆಶ್ರಮದ ವ್ಯವಸ್ಥಾಪಕರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಹ್ಮದಾಬಾದ್‌ನಲ್ಲಿರುವ ‘ಯೋಗಿನಿ ಸರ್ವಜ್ಞಾನಪೀಠಂ’ ಎಂಬ ಆಶ್ರಮದಿಂದ ರಕ್ಷಿಸಲ್ಪಟ್ಟಿರುವ ನಾಲ್ವರು ಮಕ್ಕಳ ಹೇಳಿಕೆಯ ಆಧಾರದಲ್ಲಿ ನಿತ್ಯಾನಂದನ ಮೇಲೆ ಎಫ್‌ಐಆರ್ ದಾಖಲಾಗಿದೆ. ತಮ್ಮನ್ನು ಅಕ್ರಮವಾಗಿ ಕೂಡಿಹಾಕಿ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಬಳಸಲಾಗುತ್ತಿತ್ತು ಎಂದು ಮಕ್ಕಳು ಹೇಳಿಕೆ ನೀಡಿರುವುದಾಗಿ ಡಿವೈಎಸ್ಪಿ(ಅಹ್ಮದಾಬಾದ್ ಗ್ರಾಮೀಣ) ಕೆಟಿ ಕಮಾರಿಯಾ ಹೇಳಿದ್ದಾರೆ. ಆಶ್ರಮದ ಅಧಿಕಾರಿಗಳ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಆಶ್ರಮದಿಂದ ರಕ್ಷಿಸಲಾಗಿರುವ ಎರಡು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಿದ್ದು ಮಕ್ಕಳ ಪೋಷಕರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದವರು ಹೇಳಿದ್ದಾರೆ.

 ಈ ಮಧ್ಯೆ, ತನ್ನ ಇಬ್ಬರು ಪುತ್ರಿಯರನ್ನು ಅಹ್ಮದಾಬಾದ್‌ನ ನಿತ್ಯಾನಂದನ ಆಶ್ರಮದಲ್ಲಿ ಅಕ್ರಮವಾಗಿ ಕೂಡಿ ಹಾಕಿದ್ದು ಅವರನ್ನು ನ್ಯಾಯಾಲಯದೆದುರು ಹಾಜರುಪಡಿಸುವಂತೆ ಸೂಚಿಸಬೇಕೆಂದು ಕೋರಿ ಜನಾರ್ದನ ಶರ್ಮ ಎಂಬವರು ಗುಜರಾತ್ ಹೈಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News