×
Ad

ಮುಂದಿನ ಐಪಿಎಲ್‌ಗೆ ತಂಡಗಳೆಷ್ಟು ಗೊತ್ತೇ?

Update: 2019-11-21 09:34 IST

ಮುಂಬೈ, ನ.21: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಸ್ಪರ್ಧಾಕಣಕ್ಕೆ ಹೊಸದಾಗಿ ಎರಡು ತಂಡಗಳನ್ನು ಸೇರಿಸುವ ತನ್ನ ನಿರ್ಧಾರದಿಂದ ಹಿಂದೆ ಸರಿದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಿನ ಎರಡು ಸೀಸನ್‌ಗಳ ಅವಧಿಗೆ ಒಂದು ತಂಡವನ್ನಷ್ಟೇ ಸೇರಿಸಿಕೊಳ್ಳಲು ಮುಂದಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಒಂದು ತಂಡ ಸೇರ್ಪಡೆಯಾಗಲಿದ್ದು, ಐಪಿಎಲ್‌ನ ಮುಂದಿನ ಎರಡು ಸೀಸನ್‌ಗಳಲ್ಲಿ ಅಂದರೆ 2022ರವರೆಗೆ 9 ತಂಡಗಳಷ್ಟೇ ಸೆಣೆಸಲಿವೆ.

ಐಸಿಸಿ ಭವಿಷ್ಯದ ಪ್ರವಾಸ ಯೋಜನೆ ಹಿನ್ನೆಲೆಯಲ್ಲಿ 90 ಐಪಿಎಲ್ ಪಂದ್ಯಗಳನ್ನಾಡಲು ಕಾಲಾವಕಾಶ ಲಭ್ಯವಾಗದು ಎಂಬ ಕಾರಣಕ್ಕೆ ಎರಡು ತಂಡಗಳ ಬದಲಾಗಿ ಒಂದು ತಂಡಕ್ಕಷ್ಟೇ ಅವಕಾಶ ನೀಡಲಾಗುತ್ತಿದೆ. ಆಗ ಒಟ್ಟು ಐಪಿಎಲ್ ಪಂದ್ಯಗಳ ಸಂಖ್ಯೆ 76ಕ್ಕೆ ಇಳಿಯುತ್ತದೆ. 2023ರ ವೇಳೆಗೆ ಐಸಿಸಿ ಹೊಸ ಭವಿಷ್ಯದ ಪ್ರವಾಸ ಯೋಜನೆ ರೂಪಿಸುವ ವೇಳೆಗೆ 10ನೇ ತಂಡವನ್ನು ಸೇರಿಸಿಕೊಳ್ಳಲಾಗುವುದು ಎಂದು ಉನ್ನತ ಮೂಲಗಳು ಹೇಳಿವೆ.

ಅಂತೆಯೇ ಬಿಸಿಸಿಐ ಮೂಲಬೆಲೆಯನ್ನು 300 ದಶಲಕ್ಷ ಡಾಲರ್ (ಸುಮಾರು 2 ಸಾವಿರ ಕೋಟಿ ರೂಪಾಯಿ) ನಿಗದಿಪಡಿಸುವ ಆಲೋಚನೆಯಲ್ಲಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಇಷ್ಟು ಮೊತ್ತದ ಹೂಡಿಕೆ ಸಾಧ್ಯತೆ ಕ್ಷೀಣ ಎನ್ನುವುದು ಕೂಡಾ ಬಿಸಿಸಿಐ ನಿರ್ಧಾರಕ್ಕೆ ಮತ್ತೊಂದು ಕಾರಣ ಎನ್ನಲಾಗಿದೆ.

ಅಹ್ಮದಾಬಾದ್‌ನ ಮೊಟೇರಾದಲ್ಲಿರುವ ಸರ್ದಾರ್ ಪಟೇಲ್ ಕ್ರೀಡಾಂಗಣ ಮುಂದಿನ ಮಾರ್ಚ್ ವೇಳೆಗೆ ಪಂದ್ಯಗಳಿಗೆ ಲಭ್ಯವಾಗಲಿದ್ದು, 1.1 ಲಕ್ಷ ಪ್ರೇಕ್ಷಕರಿಗೆ ಸ್ಥಳಾವಕಾಶ ಕಲ್ಪಿಸುವ ಈ ಕ್ರೀಡಾಂಗಣ ವಿಶ್ವದ ಅತಿ ದೊಡ್ಡ ಹಾಗೂ ಸುಂದರ ಕ್ರೀಡಾಂಗಣವಾಗಲಿದೆ. ಇಂಥ ಕೇಂದ್ರಕ್ಕೆ ಪ್ರತ್ಯೇಕ ಫ್ರಾಂಚೈಸಿ ತಂಡ ಇಲ್ಲದಿದ್ದರೆ ಸೂಕ್ತವಲ್ಲ ಎಂಬ ನಿರ್ಧಾರಕ್ಕೂ ಬಿಸಿಸಿಐ ಬಂದಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News