ಮೈಸೂರು ಮಹಾರಾಜರ ಚರ್ಮಪ್ರಸಾಧಕನಿಗೆ ವಂಚಿಸಿದ ವ್ಯಕ್ತಿಯ ಆಸ್ತಿ ಮುಟ್ಟುಗೋಲು

Update: 2019-11-21 04:29 GMT

ಹೊಸದಿಲ್ಲಿ, ನ.21: ಮೈಸೂರು ಮಹಾರಾಜರ ಚರ್ಮಪ್ರಸಾಧಕರಾಗಿದ್ದ ಬ್ರಿಟಿಶ್ ಪ್ರಜೆಯನ್ನು ವಂಚಿಸಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಗೆ ಸೇರಿದ 117 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕಾನೂನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ಮೈಕೆಲ್ ಫ್ಲಾಯ್ಡಾ ಎಶ್ವೆರ್ ಎಂಬುವವರಿಗೆ ಸೇರಿದ ಮೈಸೂರಿನಲ್ಲಿದ್ದ ಮನೆ ಹಾಗೂ ವಯನಾಡ್‌ನಲ್ಲಿದ್ದ ಕಾಫಿ ಎಸ್ಟೇಟ್ ಸೇರಿ 220.10 ಎಕರೆ ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ನಿರ್ದೇಶನಾಲಯ ಪ್ರಕಟಿಸಿದೆ. ಜತೆಗೆ 70 ಟ್ರೋಫಿ ಹಾಗೂ ಬೀಟೆ ಮರದಿಂದ ತಯಾರಿಸಿದ ಪೀಠೋಕರಣಗಳನ್ನು ಹಣ ದುರ್ಬಳಕೆ ತಡೆ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಹೇಳಿದೆ.

ಬೆಂಗಳೂರು ಸಿಐಡಿ ದಾಖಲಿಸಿದ ಆರೋಪಪಟ್ಟಿ ಆಧಾರದಲ್ಲಿ ನಿರ್ದೇಶನಾಲಯ ಎಶ್ವೆರ್ ವಿರುದ್ಧ ತನಿಖೆ ನಡೆಸಿತ್ತು. ಮೈಸೂರು ಮಹಾರಾಜರ ಚರ್ಮಪ್ರಸಾಧಕರಾಗಿದ್ದ ಬ್ರಿಟಿಷ್ ಪ್ರಜೆ ದಿವಂಗತ ಎಡ್ವಿನ್ ಜಾಬರ್ಟ್ ವನಿಂಗೆನ್ ಎಂಬುವವರು ಈ ಸಂಬಂಧ ದೂರು ದಾಖಲಿಸಿದ್ದರು.

ಕುದುರೆ ತರಬೇತಿದಾರನಾಗಿದ್ದ ಎಶ್ವೆರ್, ಸುಳ್ಳು ದತ್ತು ದಾಖಲೆಯನ್ನು ಸೃಷ್ಟಿಸಿದ್ದಲ್ಲದೇ, ಎಡ್ವಿನ್ ಜಾಬರ್ಟ್ ಅವರ ಸುಳ್ಳು ಮರಣ ಪ್ರಮಾಣಪತ್ರವನ್ನು ಪಡೆದು ತಮ್ಮ ಹೆಸರಿಗೆ ಈ ಆಸ್ತಿಯನ್ನು ವರ್ಗಾಯಿಸಿಕೊಂಡಿದ್ದ. ವನಿಂಗನ್ ಮೈಸೂರು ಮಹಾರಾಜರಿಗೆ ನೀಡಿದ ಸೇವೆಗಾಗಿ ಮೈಸೂರು ಮಹಾರಾಜರು ಈ ಆಸ್ತಿಯನ್ನು ಅವರಿಗೆ ದಾನರೂಪದಲ್ಲಿ ನೀಡಿದ್ದರು ಎನ್ನುವುದನ್ನು ತಿಳಿದುಕೊಂಡಿದ್ದ. ಆತ ಅವಿವಾಹಿತ ಹಾಗೂ ವೃದ್ಧ ಎನ್ನುವುದು ತಿಳಿದ ಬಳಿಕ ಆ ಆಸ್ತಿಯನ್ನು ಅಕ್ರಮವಾಗಿ ವಶಕ್ಕೆ ಪಡೆದಿದ್ದ ಎಂದು ನಿರ್ದೇಶನಾಲಯ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News