ಪ್ರಧಾನಮಂತ್ರಿ ಮಾತೃವಂದನ ಯೋಜನೆ ವಿಫಲ: ಉತ್ತರಪ್ರದೇಶದ ಸಾಧನೆ ಅತ್ಯಂತ ಕಳಪೆ

Update: 2019-11-21 15:16 GMT

ಹೊಸದಿಲ್ಲಿ, ನ.21: ಗರ್ಭಿಣಿಯರು ಹಾಗೂ ಹಾಲೂಡಿಸುವ ಮಹಿಳೆಯರು ಸೇರಿದಂತೆ ತಾಯಂದಿರಿಗೆ ಆರೋಗ್ಯ ಸೇವೆ ಹಾಗೂ ಆರ್ಥಿಕ ನೆರವು ಒದಗಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಮಾತೃವಂದನ ಯೋಜನೆ ಗುರಿ ತಲುಪಲು ವಿಫಲವಾಗಿದೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.

ಯೋಜನೆಗಳ ಲಾಭವನ್ನು ಗ್ರಾಮೀಣ ಮಟ್ಟದ ಫಲಾನುಭವಿಗಳಿಗೆ ತಲುಪಿಸಲು ದೇಶದ ಬಹುತೇಕ ರಾಜ್ಯಗಳು ವಿಫಲವಾಗಿದ್ದು, ಉತ್ತರ ಪ್ರದೇಶದ ಸಾಧನೆ ಅತ್ಯಂತ ಕಳಪೆಯಾಗಿದೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.

ಗ್ರಾಮೀಣ ಪ್ರದೇಶದ ಗರ್ಭಿಣಿಯರು ಹಾಗೂ ಹಾಲೂಡಿಸುವ ಮಹಿಳೆಯರು ಪೌಷ್ಠಿಕ ಆಹಾರದ ಕೊರತೆ ಹಾಗೂ ವಿಶ್ರಾಂತಿಯ ಕೊರತೆಯಿಂದ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದು, ಸರಕಾರದ ನೂತನ ಯೋಜನೆಗಳ ಪ್ರಯೋಜನ ಇವರಿಗೆ ಲಭಿಸುತ್ತಿಲ್ಲ ಎಂದು ಸಮೀಕ್ಷೆಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಜಾರ್ಖಂಡ್, ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ ಮತ್ತು ಹಿಮಾಚಲಪ್ರದೇಶ ರಾಜ್ಯಗಳ 706 ಗರ್ಭಿಣಿ ಹಾಗೂ ಹಾಲೂಡಿಸುವ ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.

ಈ ಆರು ರಾಜ್ಯಗಳಲ್ಲಿ ತಲಾ ಆರು ಜಿಲ್ಲೆಗಳ ಒಟ್ಟು 60 ಅಂಗನವಾಡಿ ಕೇಂದ್ರಗಳ ಮೂಲಕ 342 ಗರ್ಭಿಣಿ ಮಹಿಳೆಯರು ಹಾಗೂ 364 ಹಾಲೂಡಿಸುವ ಮಹಿಳೆಯರನ್ನು ಸಮೀಕ್ಷೆ ಮಾಡಲಾಗಿದೆ.

ಗರ್ಭಿಣಿಯರಿಗೆ ಪೌಷ್ಟಿಕಾಹಾರ ಪೂರೈಕೆ, ಆರೋಗ್ಯಸೇವೆ ಲಭ್ಯತೆ, ವಿಶ್ರಾಂತಿ ಈ ಮೂರು ಮಾನದಂಡದ ಆಧಾರದಲ್ಲಿ ಸಮೀಕ್ಷೆ ನಡೆಸಿದ್ದು ಉತ್ತರಪ್ರದೇಶದ ಸಾಧನೆ ಅತ್ಯಂತ ಕಳಪೆಯಾಗಿದ್ದರೆ ಮಧ್ಯಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳ ಸಾಧನೆಯೂ ಕಳಪೆಯಾಗಿದೆ. ಗರ್ಭಿಣಿ ಮಹಿಳೆಯರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯನ್ನೂ ಈ ರಾಜ್ಯಗಳಲ್ಲಿ ಅಸಮರ್ಪಕವಾಗಿ ಮತ್ತು ಕಳಪೆಯಾಗಿ ಅನುಷ್ಠಾನಗೊಳಿಸಲಾಗಿದ್ದು ಸರಾಸರಿ 23% ಗರ್ಭಿಣಿ ಮಹಿಳೆಯರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.

'ಜಚ್ಚಾ ಬಚ್ಚಾ ಸರ್ವೆ' (ತಾಯಿ-ಮಗು ಸಮೀಕ್ಷೆ) ಎಂಬ ಹೆಸರಿನ ಈ ಸಮೀಕ್ಷೆಯನ್ನು 2019ರ ಜೂನ್‌ನಲ್ಲಿ ಅರ್ಥಶಾಸ್ತ್ರಜ್ಞರಾದ ರೀತಿಕಾ ಖೇರಾ ಮತ್ತು ಜೀನ್ ಡ್ರೆಝ್ ಹಾಗೂ ಸಾಮಾಜಿಕ ವಿಜ್ಞಾನಿ ಅನ್ಮೋಲ್ ಸೊಮಾಂಚಿ ನೇತೃತ್ವದಲ್ಲಿ ಸ್ವಯಂಸೇವಕ ವಿದ್ಯಾರ್ಥಿಗಳು ಕೈಗೊಂಡಿದ್ದರು. ತಾಯಿಯ ಆರೋಗ್ಯಕ್ಕೆ ಮೂಲಾಧಾರವಾದ ಪೌಷ್ಟಿಕ ಆಹಾರ ಬಹುತೇಕ ಮಹಿಳೆಯರಿಗೆ ಲಭಿಸುತ್ತಿಲ್ಲ. ಗರ್ಭಧಾರಣೆ ಸಂದರ್ಭ ತಾವು ಹೆಚ್ಚು ಪೌಷ್ಟಿಕ ಆಹಾರ ಸೇವಿಸಿದ್ದೇವೆ ಎಂದು ಕೇವಲ 31% ಮಹಿಳೆಯರು ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ ಈ ಪ್ರಮಾಣ ಕೇವಲ 12% ಆಗಿದೆ.

ಗರ್ಭಿಣಿಯರು ತೂಕ ಹೆಚ್ಚಿಸಿಕೊಳ್ಳುವುದು ಅತ್ಯವಶ್ಯಕ. ಕಡಿಮೆ ದೇಹತೂಕವಿರುವ ಮಹಿಳೆಯರು ಗರ್ಭಧಾರಣೆ ಸಂದರ್ಭ 13ರಿಂದ 18 ಕಿ.ಗ್ರಾಂನಷ್ಟು ತೂಕ ಹೆಚ್ಚಿಸಿಕೊಳ್ಳಬೇಕು. ಆದರೆ ಪೌಷ್ಟಿಕಾಹಾರದ ಅಲಭ್ಯತೆಯಿಂದ ಇದೂ ಸಾಧ್ಯವಾಗಿಲ್ಲ. ಕೇವಲ ಸರಾಸರಿ 7 ಕಿ.ಗ್ರಾಂನಷ್ಟು ತೂಕ ಹೆಚ್ಚಾಗಿದೆ. ಉತ್ತರಪ್ರದೇಶದಲ್ಲಿ ಈ ಪ್ರಮಾಣ 4%ಕ್ಕೂ ಕಡಿಮೆಯಾಗಿದ್ದು ಸುಮಾರು 60% ಮಹಿಳೆಯರು ಗರ್ಭಿಣಿಯರಾಗಿದ್ದ ಸಂದರ್ಭ ತೂಕದಲ್ಲಿ ವ್ಯತ್ಯಾಸವೇ ಆಗಿಲ್ಲ ಎಂದು ವರದಿಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಈ ಪ್ರಮಾಣ 11% ಆಗಿದೆ.

ಗರ್ಭಿಣಿ ಮಹಿಳೆಯರಿಗೆ ಸಾಕಷ್ಟು ವಿಶ್ರಾಂತಿಯ ಅಗತ್ಯವಿದೆ. ಆದರೆ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಎಲ್ಲಾ ಗರ್ಭಿಣಿಯರು ಹಾಗೂ ಹಾಲೂಡಿಸುವ ತಾಯಂದಿರು ತಾವು ಮಗುವನ್ನು ಹೆರುವವರೆಗೂ ಮನೆಕೆಲಸವನ್ನು ಮುಂದುವರಿಸಿದ್ದೆವು ಎಂದಿದ್ದರೆ, ಬೇರೆ ಯಾರೂ ಇಲ್ಲದ ಕಾರಣ ಗರ್ಭಧಾರಣೆ ಸಮಯದಲ್ಲೂ ಮನೆಕೆಲಸ ಮಾಡುವುದು ಅನಿವಾರ್ಯವಾಗಿತ್ತು ಎಂದು 21% ಮಹಿಳೆಯರು ಹೇಳಿದ್ದಾರೆ. ಹಾಲೂಡಿಸುವ ಮಹಿಳೆಯರಲ್ಲಿ ಐವರಲ್ಲಿ ಒಬ್ಬರು ಹೊಲದಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗಿದೆ ಎಂದಿದ್ದಾರೆ. ಮಗುವನ್ನು ಹೆರುವ ದಿನದವರೆಗೂ ತಾವು ತೋಟ, ಹೊಲದಲ್ಲಿ ಕೆಲಸ ಮಾಡಿದ್ದೆವು ಎಂದು 63%ದಷ್ಟು ಮಹಿಳೆಯರು ತಿಳಿಸಿದ್ದಾರೆ.

ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಗ್ರಾಮೀಣ ಮಹಿಳೆಯರಿಗೆ ಉಚಿತ ಹೆರಿಗೆ ವ್ಯವಸ್ಥೆಯಿದೆ ಎಂದು ಸರಕಾರ ಹೇಳುತ್ತಿದೆ. ಆದರೂ ಹೆರಿಗೆ ಸಂದರ್ಭ ಒಂದು ಕುಟುಂಬಕ್ಕೆ ಸರಾಸರಿ 6,500 ರೂ. ಖರ್ಚಾಗುತ್ತದೆ. ಬಹುತೇಕ ಕುಟುಂಬಗಳ ಮಾಸಿಕ ಆದಾಯಕ್ಕೆ ಇದು ಸಮ ಎಂದು ಸಮೀಕ್ಷೆ ತಿಳಿಸಿದೆ.

 ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಓರ್ವ ಗರ್ಭಿಣಿ ಮಹಿಳೆ ಪ್ರತೀ ಬಾರಿ ಶಿಶುವಿಗೆ ಜನ್ಮ ನೀಡಿದಾಗಲೂ 6,000 ರೂ. ಸಹಾಯಧನ ಪಡೆಯುವ ವ್ಯವಸ್ಥೆಯಿತ್ತು. 2013ರಲ್ಲಿ ಜಾರಿಗೆ ಬಂದಿದ್ದ ಈ ಕಾಯ್ದೆಯ ಅನುಷ್ಠಾನದ ಬಗ್ಗೆ ಕೇಂದ್ರ ಸರಕಾರ ಅಸಡ್ಡೆ ತೋರಿದ್ದು 2017ರಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಇದರ ಬದಲು ಹೊಸ ಯೋಜನೆ - ಪ್ರಧಾನಮಂತ್ರಿ ಮಾತೃವಂದನ ಯೋಜನೆ(ಪಿಎಂಎಂವಿವೈ)ಯನ್ನು ಜಾರಿಗೊಳಿಸಿತು. ಈ ಯೋಜನೆಯಡಿ , ಮಹಿಳೆಯ ಪ್ರಥಮ ಹೆರಿಗೆ(ಶಿಶು ಜೀವಂತವಿರಬೇಕು)ಗೆ ಮಾತ್ರ 5000 ರೂ. ಆರ್ಥಿಕ ನೆರವು ನೀಡಲಾಗುತ್ತದೆ. ನಂತರದ ಹೆರಿಗೆಗೆ ಆರ್ಥಿಕ ನೆರವು ದೊರಕುವುದಿಲ್ಲ. ಈ ಮೊತ್ತವನ್ನೂ ಮೂರು ಕಂತಿನಲ್ಲಿ ನೀಡಲಾಗುತ್ತದೆ.

ಆದರೆ ಪಿಎಂಎಂವಿವೈ ಯೋಜನೆಯ ಅಸಮರ್ಪಕ ಅನುಷ್ಟಾನದಿಂದ ಯಾವುದೇ ಮಹಿಳೆಯೂ ಪೂರ್ತಿ 5000 ರೂ. ಮೊತ್ತವನ್ನು ಪಡೆಯಲು ಸಾಧ್ಯವಾಗಿಲ್ಲ. ಕೇವಲ 39% ಮಹಿಳೆಯರು ಪ್ರಥಮ ಕಂತನ್ನು ಮಾತ್ರ ಪಡೆದಿದ್ದರೆ ಕೇವಲ 14% ಮಹಿಳೆಯರು ಎಲ್ಲಾ 3 ಕಂತಿನ ಹಣವನ್ನೂ ಪಡೆಯಲು ಶಕ್ತರಾಗಿದ್ದಾರೆ. ಸರಾಸರಿ ಕೇವಲ 23% ಮಹಿಳೆಯರು ಯೋಜನೆಯ ಪ್ರಯೋಜನ ಪಡೆದಿದ್ದು ಛತ್ತೀಸ್‌ಗಢ ಈ ಪಟ್ಟಿಯಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿದೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ.

ಅರ್ಜಿ ತುಂಬುವುದೇ ಪ್ರಯಾಸಕರ

ಪಿಎಂಎಂವಿವೈ ಯೋಜನೆಯಡಿ 3 ಕಂತುಗಳಲ್ಲಿ ಆರ್ಥಿಕ ನೆರವು ಪಡೆಯಬೇಕಿದ್ದರೆ ಗರ್ಭಿಣಿ ಮಹಿಳೆ 23 ಪುಟಗಳ ಸುದೀರ್ಘ ಅರ್ಜಿಯನ್ನು ತುಂಬಬೇಕಿದೆ. ಈ ಅರ್ಜಿ ಫಾರಂಗಳನ್ನು ತುಂಬಿ ಅದನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕಿದ್ದರೆ ಅಂಗನವಾಡಿ ಕಾರ್ಯಕರ್ತೆಯರ ಮೊರೆ ಹೋಗಬೇಕು. ಹೀಗೆ ಸಲ್ಲಿಸಿದ ಅರ್ಜಿಗಳೂ, ಆಧಾರ್ ನಂಬರ್ ಮತ್ತು ಬ್ಯಾಂಕ್ ಖಾತೆಯ ವಿವರದಲ್ಲಿರುವ ವ್ಯತ್ಯಾಸ ಮತ್ತಿತರ ಆಧಾರ್ ಸಂಬಂಧಿ ಕಾರಣದಿಂದ ಹೆಚ್ಚಿನ ಸಂದರ್ಭ ತಿರಸ್ಕೃತಗೊಳ್ಳುತ್ತವೆ. ಕೆಲವೊಮ್ಮೆ ಬೇರ್ಯಾವುದೋ ಖಾತೆಗೆ ಹಣ ವರ್ಗಾವಣೆಯಾಗುವುದೂ ಉಂಟು ಎಂದು ಫಲಾನುಭವಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News