ರೈಲು ನಿಲ್ದಾಣದಲ್ಲಿ ಖುಷವಂತ್ ಸಿಂಗರ ‘ಅಶ್ಲೀಲ’ ಪುಸ್ತಕ ಮಾರಾಟಕ್ಕೆ ರೈಲ್ವೆ ಅಧಿಕಾರಿಯ ಆಕ್ಷೇಪ

Update: 2019-11-21 15:43 GMT

ಭೋಪಾಲ, ನ.21: ಖ್ಯಾತ ಲೇಖಕ ಖುಷವಂತ್ ಸಿಂಗ್ ಅವರ ‘ವಿಮೆನ್,ಸೆಕ್ಸ್,ಲವ್ ಆ್ಯಂಡ್ ಲಸ್ಟ್ ’ಪುಸ್ತಕದ ಮಾರಾಟವನ್ನು ನಿಲ್ಲಿಸುವಂತೆ ಹಿರಿಯ ರೈಲ್ವೆ ಅಧಿಕಾರಿಯೋರ್ವರು ಭೋಪಾಲ ರೈಲ್ವೆ ನಿಲ್ದಾಣದಲ್ಲಿಯ ಪುಸ್ತಕ ವ್ಯಾಪಾರಿಗೆ ಆದೇಶಿಸಿದ್ದು,ಇಂತಹ ‘ಅಶ್ಲೀಲ’ ಸಾಹಿತ್ಯ ಯುವಜನರನ್ನು ಹಾಳುಮಾಡಬಹುದು ಎಂದು ಹೇಳಿದ್ದಾರೆ.

ಬುಧವಾರ ಭೋಪಾಲ ರೈಲು ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದ ರೈಲ್ವೆ ಮಂಡಳಿಯ ರೈಲು ಪ್ರಯಾಣಿಕರ ಸೇವೆಗಳ ಸಮಿತಿಯ ಅಧ್ಯಕ್ಷ ರಮೇಶಚಂದ್ರ ರತ್ನ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ಪುಸ್ತಕಕ್ಕೂ ಆಕ್ಷೇಪ ವ್ಯಕ್ತಪಡಿಸಿದ ಅವರು ಈ ಪುಸ್ತಕಗಳನ್ನು ಮಾರಾಟಕ್ಕಿಡದಂತೆ ಸೂಚಿಸಿದರು. ಇಂತಹ ಪುಸ್ತಕಗಳನ್ನು ಮಾರಾಟಕ್ಕಿಟ್ಟರೆ ದಂಡವನ್ನು ವಿಧಿಸುವುದಾಗಿ ಅವರು ವ್ಯಾಪಾರಿಗೆ ಎಚ್ಚರಿಕೆಯನ್ನೂ ನೀಡಿದರು.

 ಇದು ಬಹು ಉದ್ದೇಶಗಳ ಮಳಿಗೆ,ಹೀಗಾಗಿ ಅಶ್ಲೀಲ ಶಬ್ದಗಳನ್ನು ಹೊಂದಿರುವ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಅಧಿಕಾರಿಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು,ಇಂತಹ ಅಶ್ಲೀಲ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡದಂತೆ ಸೂಚಿಸಲಾಗಿದೆ ಎಂದು ರತ್ನ ಸುದ್ದಿಗಾರರಿಗೆ ತಿಳಿಸಿದರು.

2014ರಲ್ಲಿ ನಿಧನರಾದ ಸಿಂಗ್ ಖ್ಯಾತ ಲೇಖಕರಾಗಿದ್ದರು ಎನ್ನುವುದನ್ನು ಗಮನಕ್ಕೆ ತಂದಾಗ,ಲೇಖಕರು ಯಾರೇ ಅಗಿರಲಿ,ನಿಯಮಗಳ ಪ್ರಕಾರ ಅಂತಹ ಪುಸ್ತಕಗಳ ಮಾರಾಟಕ್ಕೆ ಇಲ್ಲಿ ಅವಕಾಶವಿಲ್ಲ ಎಂದು ಅವರು ಉತ್ತರಿಸಿದರು.

ರತ್ನ ನಿಲ್ದಾಣದಲ್ಲಿ ಪುಸ್ತಕ ಮಾರಾಟಕ್ಕೆ ಆಕ್ಷೇಪಿಸಿದ್ದು ಇದೇ ಮೊದಲ ಸಲವೇನಲ್ಲ. ಎರಡು ತಿಂಗಳ ಹಿಂದೆ ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಚೇತನ ಭಗತ್ ಅವರ ‘ಹಾಫ್ ಗರ್ಲ್‌ಫ್ರೆಂಡ್’ ಕಾದಂಬರಿಯ ಮಾರಾಟಕ್ಕೂ ಅವರು ಆಕ್ಷೇಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News