ಎರಡು ತಿಂಗಳ ಜಿಎಸ್‌ಟಿ ಪರಿಹಾರ ಬಾಕಿ ಪಾವತಿಗೆ ಕೇಂದ್ರಕ್ಕೆ ಐದು ಬಿಜೆಪಿಯೇತರ ರಾಜ್ಯಗಳ ಆಗ್ರಹ

Update: 2019-11-21 15:45 GMT

ಹೊಸದಿಲ್ಲಿ, ನ.21: ಕೇಂದ್ರವು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನ ಜಿಎಸ್‌ಟಿ ಪರಿಹಾರ ಬಾಕಿಯನ್ನು ಪಾವತಿಸಲು ವಿಳಂಬಿಸುತ್ತಿದೆ ಎಂದು ಬಿಜೆಪಿಯೇತರ ಆಡಳಿತದ ರಾಜ್ಯಗಳಾದ ದಿಲ್ಲಿ,ಪಶ್ಚಿಮ ಬಂಗಾಳ,ಪಂಜಾಬ್,ರಾಜಸ್ಥಾನ ಮತ್ತು ಕೇರಳ ದೂರಿವೆ. ಈ ವಿಳಂಬವು ತಮ್ಮನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ ಎಂದು ಜಂಟಿ ಹೇಳಿಕೆಯಲ್ಲಿ ಅವು ತಿಳಿಸಿವೆ.

ಈ ಸಮಸ್ಯೆಯತ್ತ ವೈಯಕ್ತಿಕವಾಗಿ ಗಮನ ಹರಿಸುವಂತೆ ಮತ್ತು ಸಂಸತ್ತು ಅಂಗೀಕರಿಸಿರುವ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸದಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ. ಇದೇ ಮೊದಲ ಬಾರಿಗೆ ಜಿಎಸ್‌ಟಿ ಪಾವತಿಗೆ ವಿಳಂಬವಾಗಿದ್ದು,ಇದು ಅಪಾಯಕಾರಿ ಸ್ಥಿತಿಯಾಗಿದೆ ಎಂದು ಪ.ಬಂಗಾಳದ ವಿತ್ತ ಸಚಿವ ಅಮಿತ್ ಮಿತ್ರಾ ಸುದ್ದಿಗಾರರಿಗೆ ತಿಳಿಸಿದರೆ,ಇದು ರಾಜ್ಯ ಹಣಕಾಸು ವ್ಯವಸ್ಥೆಯಲ್ಲಿ ಕೇಂದ್ರವು ಸೃಷ್ಟಿಸಿರುವ ಬಿಕ್ಕಟ್ಟು ಆಗಿದೆ. ಭಾರತದ ಇತಿಹಾಸದಲ್ಲೆಂದೂ ಇಂತಹುದು ಸಂಭವಿಸಿರಲಿಲ್ಲ. ಏನಾದರೂ ತೀವ್ರ ಕ್ರಮವನ್ನು ಕೈಗೊಳ್ಳಬೇಕಿದೆ ಎಂದು ಕೇರಳದ ವಿತ್ತ ಸಚಿವ ಥಾಮಸ್ ಇಸಾಕ್ ಹೇಳಿದರು.

ಕೇಂದ್ರವು ಪ.ಬಂಗಾಳಕ್ಕೆ 1,500 ಕೋ.ರೂ.,ಕೇರಳಕ್ಕೆ 1600 ಕೋ.ರೂ.,ಪಂಜಾಬಿಗೆ 4,100 ಕೋ.ರೂ.ಮತ್ತು ದಿಲ್ಲಿಗೆ 2,355 ಕೋ.ರೂ.ಜಿಎಸ್‌ಟಿ ಪರಿಹಾರವನ್ನು ಪಾವತಿಸಬೇಕಿದೆ. ರಾಜಸ್ಥಾನಕ್ಕೆ ಬಾಕಿಯಿರುವ ಮೊತ್ತ ಇನ್ನೂ  ಸ್ಪಷ್ಟವಾಗಿಲ್ಲ.

 ಕೇಂದ್ರವು ವಿಳಂಬಕ್ಕೆ ಯಾವುದೇ ವಿವರಣೆಯನ್ನು ನೀಡಿಲ್ಲ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿರುವ ರಾಜ್ಯಗಳು, ಸಂವಿಧಾನದ ತಿದ್ದುಪಡಿಯಂತೆ ರಾಜ್ಯಗಳ ಆದಾಯ ಬೆಳವಣಿಗೆಯು ಶೇ.14ಕ್ಕೂ ಕಡಿಮೆಯಾದರೆ ಅವು ಕೇಂದ್ರದಿಂದ ಪರಿಹಾರ ಪಡೆಯಲು ಅರ್ಹವಾಗಿರುತ್ತವೆ. ಜಿಎಸ್‌ಟಿಯು ರಾಜ್ಯಗಳ ಆದಾಯದಲ್ಲಿ ಸುಮಾರು ಶೇ.60 ರಷ್ಟು ಪಾಲು ಹೊಂದಿದೆ. ಹೆಚ್ಚಿನ ರಾಜ್ಯಗಳು ಈಗಾಗಲೇ ಒಟ್ಟು ಜಿಎಸ್‌ಟಿಯ ಶೇ.50ರಷ್ಟು ಕೊರತೆಯನ್ನು ಎದುರಿಸುತ್ತಿವೆ. ಇಂತಹ ಬೃಹತ್ ಕೊರತೆಗಳು ಮುಂಗಡಪತ್ರದಲ್ಲಿ ಯೋಜನೆಗಳಿಗೆ ವ್ಯತ್ಯಯವನ್ನುಂಟು ಮಾಡುತ್ತವೆ ಎಂದಿವೆ. ಹಲವಾರು ಸವಾಲುಗಳು ಎದುರಾಗಿದ್ದರೂ ರಾಜ್ಯಗಳು ಜಿಎಸ್‌ಟಿ ಮಂಡಳಿಯ ಎಲ್ಲ ಪ್ರಮುಖ ನಿರ್ಧಾರಗಳನ್ನು ಒಪ್ಪಿಕೊಂಡಿವೆ ಎಂದಿರುವ ಅವು,ಜಿಎಸ್‌ಟಿ ಮಂಡಳಿಯ ಮುಂದಿನ ಸಭೆಯಲ್ಲಿ ಪರಿಹಾರ ಪಾವತಿ ವಿಳಂಬದ ಬಗ್ಗೆ ಚರ್ಚೆಯಾಗಬೇಕು ಎಂದು ಆಗ್ರಹಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News