ಸಂಸತ್ತಿನ ಮೂಲ ಅನುಭವ ಮಂಟಪ

Update: 2019-11-22 11:09 GMT

ವೇದಪ್ರಣೀತ ಆರ್ಯರು ಭಾರತದ ಮೂಲನಿವಾಸಿಗಳ ಮೇಲೆ ವಿಜಯ ಸಾಧಿಸಿದ ನಂತರ ಅವರನ್ನು ದಸ್ಯುಗಳೆಂದು ಕರೆದರು. ದಸ್ಯುಗಳೆಂದರೆ ಆರ್ಯರ ಸೇವೆ ಮಾಡುವ ದಾಸರು. ಅವರಿಗಾಗಿ ಎಲ್ಲ ತೆರನಾದ ಉತ್ಪಾದನೆ ಮತ್ತು ಸೇವೆಯಲ್ಲಿ ತೊಡಗಿದಂಥವರು. ಈ ಮೂಲನಿವಾಸಿ ದಸ್ಯುಗಳೇ ಶೂದ್ರ ವರ್ಣಕ್ಕೆ ಸೇರಿದವರು. ಹೀಗೆ ಶೇಕಡಾ 90ರಷ್ಟು ದುಡಿಯುವ ಜನರು ಶೂದ್ರರಾಗಿ ಉಳಿದರು. ಜನಿವಾರ ಇಲ್ಲದವರೆಲ್ಲ ಶೂದ್ರರೇ. ವೇದವನೋದುವ ಬ್ರಾಹ್ಮಣರು, ದೇಶ ಆಳುವ ಕ್ಷತ್ರಿಯರು ಮತ್ತು ವಸ್ತುಗಳ ಕೊಡುಕೊಳ್ಳುವಿಕೆಯಲ್ಲಿ ತೊಡಗಿದ ವೈಶ್ಯರು ಜನಿವಾರದೊಂದಿಗೆ ಉತ್ತಮ ವರ್ಣದವರಾಗಿ ಸವರ್ಣೀಯರೆನಿಸಿದರು. ಇವರೆಲ್ಲ ಸೇರಿ ಉಳಿದ ಬಹುಜನರನ್ನು ದಾಸರನ್ನಾಗಿಸಿ ಶೂದ್ರರೆಂದು ಕರೆದರು. ಈ ಶೂದ್ರರಲ್ಲಿ ತಾರತಮ್ಯದ ವಿರುದ್ಧ ಹೋರಾಡಿದವರನ್ನು ಪಂಚಮರೆಂದು ಕರೆದು, ಊರ ಹೊರಗೆ ಇಟ್ಟು, ಅಸ್ಪಶ್ಯರಾಗಿ ಬದುಕುವ ಶಿಕ್ಷೆಯನ್ನು ಕೊಟ್ಟರು. ಹೀಗೆ ಪಂಚಮ ವರ್ಣದ ಉದಯ ನಂತರದಲ್ಲಿ ಆಯಿತು. ಅವರು ಕೊಟ್ಟ ಈ ಶಿಕ್ಷೆ ತಲೆತಲಾಂತರದಿಂದ ಇಂದಿಗೂ ಉಳಿದುಕೊಂಡು ಬಂದಿದೆ. ಇಂಥ ತುಳಿತಕ್ಕೊಳಗಾದ ಜನರ ಮೂಲಕ ಬಸವಣ್ಣನವರು ಅನುಭವ ಮಂಟಪದ ಸ್ಥಾಪನೆ ಮಾಡಿದರು.

ಬಸವಣ್ಣನವರು ಸಂಸತ್ತಿನ ಪರಿಕಲ್ಪನೆಯನ್ನು ಮೂಡಿಸಿದ ಮಹಾಜ್ಞಾನಿ. ಮಹಿಳೆಯರೂ ಸೇರಿದಂತೆ ದಲಿತ ಮೊದಲಾದ ವಿವಿಧ ಸಮಾಜಗಳ ಹಿನ್ನೆಲೆಯಿಂದ ಬಂದ ನಾಯಕರಾದ 770 ಅಮರಗಣಂಗಳ ಮೂಲಕ ಅನುಭವಮಂಟಪ ಎಂಬ ಸಮಾಜೋ ಧಾರ್ಮಿಕ ಸಂಸತ್ತಿನ ಮೂಲಕ ವಿಶ್ವದಲ್ಲಿ ಮೊದಲ ಬಾರಿಗೆ ಸಮೂಹ ನಾಯಕತ್ವದ ಕಲ್ಪನೆ ಮೂಡಿಸಿದರು. ದಲಿತರು ಮತ್ತು ಮಹಿಳೆಯರು ಸೇರಿದಂತೆ ಎಲ್ಲ ಕಾಯಕಜೀವಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಅರಿವು ಮೂಡಿಸಿದರು. ಜಗತ್ತಿನ ಯಾವ ದೇಶಗಳಲ್ಲೂ ಸಂವಿಧಾನದ ಕನಸು ಬೀಳದ ಸಂದರ್ಭದಲ್ಲಿ ಆಧುನಿಕ ಸಂವಿಧಾನಗಳಿಗೆ ಬೀಜಸ್ವರೂಪವಾದಂಥ ಅಂಶಗಳನ್ನು ವಚನಗಳಲ್ಲಿ ದಾಖಲಿಸಿದರು. ಅನುಭವ ಮಂಟಪದ ಜೊತೆಯಲ್ಲೇ ಒಳಜಗತ್ತಿಗೆ ಸಂಬಂಧಿಸಿದ ಅರಿವಿನ ಮನೆ ಮತ್ತು ಹೊರ ಜಗತ್ತಿಗೆ ಸಂಬಂಧಿಸಿದ ಮಹಾಮನೆಗಳ ಸ್ಥಾಪನೆ ಮಾಡಿದರು. ಅರಿವಿನ ಮನೆ ಇಷ್ಟಲಿಂಗಯೋಗಕ್ಕೆ ಸಂಬಂಧಿಸಿದ್ದರೆ ಮಹಾಮನೆ ಸಮಾಜವೆಂಬ ಜಂಗಮಲಿಂಗದ ಯೋಗಕ್ಷೇಮಕ್ಕೆ ಸಂಬಂಧಿಸಿತ್ತು. ಇಷ್ಟಲಿಂಗದ ಅರಿವು ಜಂಗಮಲಿಂಗದಲ್ಲಿ ಆಚರಣೆಯ ರೂಪ ತಾಳುತ್ತಿತ್ತು. ಈ ಅರಿವು ಆಚಾರಗಳ ಚಿಂತನೆಯ ಚರ್ಚೆ ಅನುಭವ ಮಂಟಪದಲ್ಲಿ ನಡೆಯುತ್ತಿತ್ತು.

ಈ ಅನುಭವ ಮಂಟಪದ ಶೂನ್ಯಸಿಂಹಾಸನದ ಅಧ್ಯಕ್ಷರಾಗಿದ್ದವರು ಅಲ್ಲಮಪ್ರಭುಗಳು. ಅವರೂ ಸೇರಿದಂತೆ ಅಕ್ಕನಾಗಮ್ಮ, ಅಕ್ಕಮಹಾದೇವಿ, ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮ ಮತ್ತು ಮಡಿವಾಳ ಮಾಚಿದೇವರು ಗಣಾಧೀಶರಾಗಿದ್ದರು. ಇವರೂ ಸೇರಿದಂತೆ ಒಟ್ಟು 770 ಶರಣರು ಅಮರಗಣಂಗಳಾಗಿದ್ದರು. ಮಹಿಳೆಯರೂ ಸೇರಿದಂತೆ ಇವರೆಲ್ಲ ವಿವಿಧ ಕಾಯಕ ಮೂಲಗಳಿಂದ ಬಂದವರಾಗಿದ್ದರು. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬರಿಗೂ ಇತ್ತು. ಪ್ರತಿಯೊಂದು ಚರ್ಚೆ ತಾರ್ಕಿಕ ಅಂತ್ಯ ಕಂಡಾಗ ಎಲ್ಲರೂ ಅದಕ್ಕೆ ಬದ್ಧರಾಗಿರುತ್ತಿದ್ದರು.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News