ಆಗಾಗ್ಗೆ ತಲೆ ಸುತ್ತುತ್ತದೆಯೇ, ಬವಳಿ ಬರುತ್ತದೆಯೇ? ಸಿಂಕೋಪ್ ಮುಖ್ಯ ಕಾರಣವಾಗಿರಬಹುದು

Update: 2019-11-22 15:27 GMT

ತಲೆ ಸುತ್ತಿದಂತಾಗಿ,ಬವಳಿ ಬಂದು ಬಿದ್ದ ವ್ಯಕ್ತಿ ಪ್ರಜ್ಞೆಗೆ ಮರಳಿದ ಬಳಿಕ ತನ್ನ ಮಾಮೂಲು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾನೆ,ಹೀಗಾಗಿ ನಾವು ಇಂತಹ ಸಂದರ್ಭಗಳನ್ನು ತೀರ ಲಘುವಾಗಿ ಪರಿಗಣಿಸುವುದೇ ಹೆಚ್ಚು. ಆದರೆ ಇಂತಹ ಸಂದರ್ಭಗಳು ನಿಯಮಿತವಾಗಿ ಮರುಕಳಿಸುತ್ತಿದ್ದರೆ ಅದು ಕಳವಳಕ್ಕೆ ಪ್ರಮುಖ ಕಾರಣವಾಗುತ್ತದೆ. ಸಿಂಕೋಪ್ ಬಗ್ಗೆ ಎಂದಾದರೂ ಕೇಳಿದ್ದೀರಾ? ಅಷ್ಟೇನೂ ಪರಿಚಿತವಲ್ಲದ ಇದು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡಬಹುದು.

ಸಿಂಕೋಪ್ ಸಂದರ್ಭದಲ್ಲಿ ರೋಗಿಯು ದಿಢೀರನೆ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾನೆ. ಹೆಚ್ಚಿನ ಪ್ರಕರಣಗಳಲ್ಲಿ ರೋಗಿಗೆ ತಲೆ ಹಗುರವಾಗಿರುವಂತೆ ಅಥವಾ ಕಣ್ಣು ಕತ್ತಲಾದಂತೆ ಆಗಿ ಏಕಾಏಕಿ ಬವಳಿ ಬಂದು ಬೀಳಬಹುದು. ಇಂತಹ ಹೆಚ್ಚಿನ ಸಂದರ್ಭಗಳಲ್ಲಿ ರೋಗಿಯು ಚೇತರಿಸಿಕೊಂಡು ಮಾಮೂಲು ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾನೆ. ರೋಗಿಯು ಅತಿಯಾಗಿ ಬೆವರಬಹುದು,ಆದರೆ ಪಾರ್ಶ್ವವಾಯು ಅಥವಾ ಇತರ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವಿರುವುದಿಲ್ಲ.

► ಕಡಿಮೆ ರಕ್ತದೊತ್ತಡ ಪ್ರಮುಖ ಕಾರಣ

ನಮ್ಮ ಶರೀರದ ಪ್ರಮುಖ ಅಂಗವಾಗಿರುವ ಮಿದುಳಿಗೆ ಕೇವಲ ಒಂದು ಸೆಕೆಂಡ್‌ನಷ್ಟು ಕಾಲ ರಕ್ತ ಪೂರೈಕೆಯಾಗದಿದ್ದರೂ ಅದು ಕೆಲಸವನ್ನು ಮಾಡುವುದಿಲ್ಲ. ಶರೀರದಲ್ಲಿ ರಕ್ತದೊತ್ತಡ ಕಡಿಮೆಯಾದಾಗ ಮಿದುಳಿಗೆ ಕಡಿಮೆ ರಕ್ತ ಪೂರೈಕೆಯಾಗುತ್ತದೆ. ಹೀಗೆ ರಕ್ತಪೂರೈಕೆಯಲ್ಲಿ ವ್ಯತ್ಯಯವುಂಟಾದಾಗ ವ್ಯಕ್ತಿಯು ದಿಢೀರF ಬವಳಿಗೆ ಗುರಿಯಾಗುತ್ತಾನೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಯು ಪ್ರಜ್ಞೆ ಕಳೆದುಕೊಂಡು ನೆಲಕ್ಕೆ ಬೀಳುತ್ತಾನೆ ಮತ್ತು ಇದು ಮಿದುಳಿಗೆ ರಕ್ತ ಪೂರೈಕೆಯನ್ನು ಸಾಧ್ಯವಾಗಿಸುತ್ತದೆ. ಇದೇ ಕಾರಣದಿಂದ ಸಿಂಕೋಪ್‌ಗೆ ಗುರಿಯಾದ ವ್ಯಕ್ತಿಯು ಚೇತರಿಸಿಕೊಳ್ಳುತ್ತಾನೆ.

ಆದರೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇದ್ದರೆ ರೋಗಿಯು ವೈದ್ಯರನ್ನು ಭೇಟಿಯಾಗಿ ಸಮಸ್ಯೆಯ ಮೂಲಕಾರಣವನ್ನು ತಿಳಿದುಕೊಳ್ಳಬೇಕಾಗುತ್ತದೆ. ಇಂತಹ ಘಟನೆಗಳನ್ನು ಕಡೆಗಣಿಸುತ್ತಿದ್ದರೆ ಹೆಚ್ಚಿನ ಪ್ರಕರಣಗಳಲ್ಲಿ ಮಾರಣಾಂತಿಕವಾಗಬಹುದು ಮತ್ತು ಚೇತರಿಸಿಕೊಳ್ಳಲು ವ್ಯಕ್ತಿಗೆ ಸಾಧ್ಯವಾಗದಿರಬಹುದು.

► ಸಿಂಕೋಪ್ ಮತ್ತು ಹೃದಯಾಘಾತದ ನಡುವೆ ತಪ್ಪುಗ್ರಹಿಕೆ

ಇದೊಂದು ಸಾಮಾನ್ಯ ತಪ್ಪುಗ್ರಹಿಕೆಯಾಗಿದೆ. ಹೆಚ್ಚಿನ ಜನರು ಸಿಂಕೋಪ್‌ಗೂ ಪಾರ್ಶ್ವವಾಯುವಿಗೂ ಸಂಬಂಧ ಕಲ್ಪಿಸುತ್ತಾರೆ. ಆದರೆ ಸಿಂಕೋಪ್ ಅತ್ಯಂತ ಸಾಮಾನ್ಯ ಲಕ್ಷಣವಾಗಿದ್ದು, ಶೇ.40ರಷ್ಟು ಜನರು ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಒಂದು ಬಾರಿಯಾದರೂ ಅನುಭವಿಸಿರುತ್ತಾರೆ. 13ರಿಂದ 22ವರ್ಷ ವಯೋಗುಂಪಿನವರಲ್ಲಿ ಮತ್ತು 55ವರ್ಷ ಮೀರಿದವರಲ್ಲಿ ಸಿಂಕೋಪ್ ಅತ್ಯಂತ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಎರಡೂ ವಯೋಗುಂಪುಗಳಲ್ಲಿ ಸಿಂಕೋಪ್ ಉಂಟಾಗಲು ಕಾರಣಗಳು ಭಿನ್ನವಾಗಿವೆ.

► ಸಿಂಕೋಪ್ ತಲೆ ಸುತ್ತುವಿಕೆಗಿಂತ ಭಿನ್ನ

ವ್ಯಕ್ತಿಗೆ ತಲೆ ಸುತ್ತತೊಡಗಿದಾಗ ತನ್ನ ಸುತ್ತಲಿರುವ ಜಗತ್ತು ಅಥವಾ ಸ್ವಯಂ ತಾನೇ ಸುತ್ತುತ್ತಿರುವ ಅನುಭವವಾಗುತ್ತದೆ. ಆದರೆ ಸಿಂಕೋಪ್‌ನಲ್ಲಿ ವ್ಯಕ್ತಿಯು ಕಣ್ಣಕತ್ತಲು ಅನುಭವಿಸುತ್ತಾನೆ ಮತ್ತ ದಿಢೀರ್ ಆಗಿ ಬವಳಿ ಬಂದು ಬೀಳುತ್ತಾನೆ. ಇವೆರಡೂ ಲಕ್ಷಣಗಳು ಪರಸ್ಪರ ಭಿನ್ನವಾಗಿದ್ದು ಇವುಗಳ ನಡುವೆ ಸಂಬಂಧವನ್ನು ಗೊತ್ತು ಮಾಡಿಕೊಳ್ಳಲು ಪ್ರಯತ್ನಿಸುವ ಬದಲು ಸಮಸ್ಯೆಗಳ ನಿವಾರಣೆ ಮುಖ್ಯವಾಗುತ್ತದೆ.

► ಯಾವ ವೈದ್ಯರನ್ನು ಸಂಪರ್ಕಿಸಬೇಕು

ಸಿಂಕೋಪ್‌ನಿಂದ ಬಳಲುತ್ತಿರುವ ವ್ಯಕ್ತಿಯು ಕಾರ್ಡಿಯಾಕ್‌ಎಲೆಕ್ಟ್ರೋಫಿಜಿಯಾಲಜಿಸ್ಟ್‌ರನ್ನು ಭೇಟಿಯಾಗಬೇಕು. ಆದರೆ ಭಾರತದಲ್ಲಿ ಇಂತಹ ವೈದ್ಯರ ಲಭ್ಯತೆ ಅಪರೂಪವಾಗಿದೆ. ಹೀಗಾಗಿ ಸಿಂಕೋಪ್ ರೋಗಿಗಳು ಕಾರ್ಡಿಯಾಲಜಿಸ್ಟ್‌ರನ್ನು ಭೇಟಿಯಾಗಬಹುದು.

► ಸಿಂಕೋಪ್‌ನ್ನು ಮೊದಲೇ ಗುರುತಿಸುವ ಎಚ್ಚರಿಕೆಯ ಸಂಕೇತಗಳು

ವಾಂತಿ ಮಾಡಬೇಕೆಂಬ ಭಾವನೆ,ಡವಗಡುವ ಹೃದಯ,ತಲೆ ಹಗುರವಾಗುವಿಕೆ ಮತ್ತು ಅತಿಯಾದ ಬೆವರುವಿಕೆ ಇವು ಸಿಂಕೋಪ್‌ನ ಎಚ್ಚರಿಕೆ ಗಂಟೆಯಾಗಿವೆ. ಇಂತಹ ಯಾವುದೇ ಸಂಕೇತ ಅನುಭವಕ್ಕೆ ಬಂದರೆ ವ್ಯಕ್ತಿಯು ತಕ್ಷಣ ನೆಲದಲ್ಲಿ ಮಲಗಿಕೊಳ್ಳಬೇಕು.

► ಸಿಂಕೋಪ್‌ನ್ನು ಹೇಗೆ ತಡೆಗಟ್ಟಬಹುದು?

ತಲೆ ಹಗುರವಾಗುತ್ತಿದೆ ಎಂಬ ಅನುಭವ ಉಂಟಾದಾಗ ರೋಗಿಯು ತಕ್ಷಣ ನೆಲದಲ್ಲಿ ಮಲಗಿಕೊಳ್ಳಬೇಕು ಮತ್ತು ಇದರಿಂದ ಮಿದುಳಿಗೆ ರಕ್ತಪೂರೈಕೆಯು ಉತ್ತಮಗೊಳ್ಳುತ್ತದೆ. ರಕ್ತನಾಳಗಳು ಸಂಕುಚಿತಗೊಳ್ಳುವಂತಾಗಲು ಎರಡೂ ಕೈಗಳನ್ನು ಬಿಗಿಯಾಗಿ ಮುಷ್ಟಿ ಕಟ್ಟಬೇಕು.

ಪದೇ ಪದೇ ಇಂತಹ ಅನುಭವವಾಗುತ್ತಿದ್ದರೆ ತಜ್ಞವೈದ್ಯರಿಂದ ಚಿಕಿತ್ಸೆಯನ್ನು ಪಡೆದುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News