ಬಿಎಚ್‌ಯು ವಿವಾದದ ನಡುವೆ ಸಂಸ್ಕೃತದೊಂದಿಗೆ ತಮ್ಮ ವಿವಿಯ ನಂಟು ಸ್ಮರಿಸಿಕೊಂಡ ಅಮು ಶಿಕ್ಷಕರು

Update: 2019-11-22 15:32 GMT

ಅಲಿಗಡ (ಉ.ಪ್ರ),ನ.22: ಬನಾರಸ ಹಿಂದು ವಿವಿ (ಬಿಎಚ್‌ಯು)ಯ ಸಂಸ್ಕೃತ ವಿಭಾಗದಲ್ಲಿ ಮುಸ್ಲಿಂ ಪ್ರೊಫೆಸರ್ ನೇಮಕದ ಕುರಿತು ಉಂಟಾಗಿರುವ ವಿವಾದಗಳ ನಡುವೆಯೇ ಅಲಿಗಡ ಮುಸ್ಲಿಂ ವಿವಿ (ಅಮು)ಯ ಶಿಕ್ಷಕರು ಸಂಸ್ಕೃತಕ್ಕೆ ತಮ್ಮ ವಿವಿಯ ಕೊಡುಗೆಯನ್ನು ನೆನಪಿಸಿಕೊಂಡಿದ್ದಾರೆ.

ಸಂಸ್ಕೃತದಲ್ಲಿ ಪಿಎಚ್‌ಡಿ ಪಡೆದ ಮೊದಲ ಮುಸ್ಲಿಂ ಅಮು ವಿದ್ವಾಂಸರಾಗಿದ್ದರು,ಹಾಲಿ ವಿವಿಯ ಸಂಸ್ಕೃತ ವಿಭಾಗದಲ್ಲಿರುವ ಒಂಭತ್ತು ಬೋಧಕರ ಪೈಕಿ ಇಬ್ಬರು ಮುಸ್ಲಿಮರಾಗಿದ್ದಾರೆ.

 ಅತ್ತ ಬಿಎಚ್‌ಯುದಲ್ಲಿ ಡಾ.ಫಿರೋಝ್‌ಖಾನ್ ನೇಮಕದ ವಿರುದ್ಧ ವಿದ್ಯಾರ್ಥಿಗಳ ಗುಂಪೊಂದು ಪ್ರತಿಭಟನೆಯನ್ನು ನಡೆಸುತ್ತಿದೆ. ಮುಸ್ಲಿಂ ವ್ಯಕ್ತಿ ಸಂಸ್ಕೃತವನ್ನು ಬೋಧಿಸಲು ಸಾಧ್ಯವಿಲ್ಲ ಎನ್ನುವುದು ಈ ವಿದ್ಯಾರ್ಥಿಗಳ ಪ್ರತಿಪಾದನೆಯಾಗಿದೆ. ಬಿಎಚ್‌ಯು ಡಾ.ಖಾನ್ ಬೆಂಬಲಕ್ಕೆ ನಿಂತಿದೆ. ಹಲವಾರು ವಿದ್ಯಾರ್ಥಿಗಳು ಮತ್ತು ಬೋಧಕರೂ ಖಾನ್ ನೇಮಕವನ್ನು ಬೆಂಬಲಿಸಿದ್ದಾರೆ.

ಶುಕ್ರವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಮು ವಕ್ತಾರ ರಾಹತ್ ಅಬ್ರಾರ್ ಅವರು,1920ರಲ್ಲಿ ಮುಹಮ್ಮದನ್ ಆಂಗ್ಲೋ-ಓರಿಯೆಂಟಲ್ ಕಾಲೇಜು ಅಲಿಗಡ ಮುಸ್ಲಿಂ ವಿವಿಯಾಗಿ ಪರಿವರ್ತನೆಗೊಂಡಾಗ ಅದರ ಸಂಸ್ಕೃತ ವಿಭಾಗವು ಅತ್ಯಂತ ಪ್ರತಿಷ್ಠಿತ ವಿಭಾಗಗಳಲ್ಲೊಂದಾಗಿತ್ತು. 1924ರಲ್ಲಿ ಅಮು ವಿವಿಯ ದ್ವಿತೀಯ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ್ದ ಸಾಹಿಬ್‌ ಝಾದಾ ಅಫ್ತಾಬ್ ಅಹ್ಮದ್ ಖಾನ್ ಅವರು ತನ್ನ ಚೊಚ್ಚಲ ಭಾಷಣದಲ್ಲಿ ಸಂಸ್ಕೃತದ ಮಹತ್ವವನ್ನು ಪ್ರಮುಖವಾಗಿ ಬಿಂಬಿಸಿದ್ದರು. ‘ಸಂಸ್ಕೃತ ಸಾಹಿತ್ಯವು ಹಿಂದು ನಾಗರಿಕತೆ ಮತ್ತು ಸಂಸ್ಕೃತಿಯ ದಾಖಲೆಯಾಗಿದೆ ಮತ್ತು ಸಂಸ್ಕೃತ ಮೂಲದಿಂದ ಕೊಡುಗೆಯ ಮೂಲಕ ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವ ಮುಸ್ಲಿಂ ವಿದ್ವಾಂಸರನ್ನು ತಯಾರು ಮಾಡುವುದು ನಮ್ಮ ಗುರಿಯಾಗಿದೆ’ ಎಂದು ಹೇಳಿದ್ದರು ಎಂದು ತಿಳಿಸಿದರು.

ಸಂಸ್ಕೃತವನ್ನು ಅಧ್ಯಯನ ಮಾಡುವ ಮುಸ್ಲಿಂ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿ ವೇತನಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದೂ ಖಾನ್ ಹೇಳಿದ್ದರು ಎಂದರು.

ಖ್ಯಾತ ಸಂಸ್ಕೃತ ವಿದ್ವಾಂಸ ಪಂಡಿತ ರಾಮಸ್ವರೂಪ ಶಾಸ್ತ್ರಿ ಅವರು ನೂತನ ವಿವಿಯ ಮೊದಲ ಸಂಸ್ಕೃತ ಬೋಧಕರಲ್ಲೋರ್ವರಾಗಿದ್ದರು ಎಂದ ಅವರು,ಅಮು ಸ್ಥಾಪನೆಗೊಂಡ ಬೆನ್ನಲ್ಲೇ ದೇಶದ ಅತ್ಯುತ್ತಮ ವಿವಿಗಳಲ್ಲೊಂದು ಎಂಬ ಹೆಗ್ಗಳಿಕೆ ಪಡೆಯಲು ಅದರ ಈ ಆಧುನಿಕ ದೃಷ್ಟಿಕೋನವೇ ಕಾರಣವಾಗಿತ್ತು ಎಂದರು.

 ಸಲ್ಮಾ ಮಹ್ಫೂಝ್,ಖಾಲಿದ್ ಬಿನ್ ಯೂಸುಫ್ ಮತ್ತು ಮುಹಮ್ಮದ್ ಶರೀಫ್ ಸೇರಿದಂತೆ ಹಲವಾರು ಮುಸ್ಲಿಂ ಪ್ರೊಫೆಸರ್‌ಗಳು ಇತ್ತೀಚಿನ ವರ್ಷಗಳಲ್ಲಿ ಅಮುದ ಸಂಸ್ಕೃತ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎಂದ ಅಬ್ರಾರ್,ಮೆಹ್ಫೂಝ್ 1970ರಲ್ಲಿ ಸಂಸ್ಕೃತದಲ್ಲಿ ಪಿಎಚ್‌ಡಿ ಪಡೆದಿದ್ದ ವಿಶ್ವದ ಮೊದಲ ಮಸ್ಲಿಂ ಮಹಿಳೆಯಾಗಿದ್ದರು ಎಂದು ತಿಳಿಸಿದರು.

1950ರ ದಶಕದಲ್ಲಿ ಅಮು ವಿವಿಯಲ್ಲಿ ಬೋಧಕರಾಗಿದ್ದ ಖ್ಯಾತ ಹಿಂದಿ ಮತ್ತು ಸಂಸ್ಕೃತ ವಿದ್ವಾಂಸ ಹಬೀಬುರ್ರಹ್ಮಾನ್ ಶಾಸ್ತ್ರಿ ಅವರು ಭಾರತೀಯ ಸೌಂದರ್ಯ ಶಾಸ್ತ್ರದ ಕುರಿತು ಕೃತಿಯನ್ನು ರಚಿಸಿದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಷಫಿ ಕಿದ್ವಾಯಿ ಅವರು ನೆನಪಿಸಿಕೊಂಡರು.

ಸಾಂಪ್ರದಾಯಿಕವಾಗಿ ಜಾತಿ,ಜನಾಂಗ ಮತ್ತು ಧರ್ಮಗಳ ಅಡೆತಡೆಗಳನ್ನು ಮೀರಿದ ಮಹಾನ್ ವಿದ್ವಾಂಸರನ್ನು ಸೃಷ್ಟಿಸುವ ಸಾಮರ್ಥ್ಯ ಭಾರತೀಯ ನಾಗರಿಕತೆಯ ಹೆಗ್ಗುರುತು ಆಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News