ಅಯೋಧ್ಯೆ ತೀರ್ಪು: ನ್ಯಾಯದ ಅಣಕ - ಫೈಝಾನ್ ಮುಸ್ತಫಾ

Update: 2019-11-24 05:56 GMT

ಅಯೋಧ್ಯೆಯ ಭೂಹಕ್ಕನ್ನು ಪುರಾವೆಗಳ ಆಧಾರದಲ್ಲಿ ನಿರ್ಧರಿಸುತ್ತೇನೆಯೇ ಹೊರತು ನಂಬಿಕೆ ಅಥವಾ ವಿಶ್ವಾಸದ ಆಧಾರದಲ್ಲಿ ಅಲ್ಲವೆಂದು ನ್ಯಾಯಾಲಯವು ತೀರ್ಪಿನ 796ನೇ ಪ್ಯಾರಾದಲ್ಲಿ ಹೇಳಿದೆ. ವಾಸ್ತವವಾಗಿ ನ್ಯಾಯಾಲಯದ ತೀರ್ಪು ನಂಬಿಕೆಯ ಆಧಾರದಲ್ಲಿ ತಿರುಗಿದೆ ಎಂದು ಮುಸ್ತಫಾ ಹೇಳುತ್ತಾರೆ. ಪುರಾವೆಗಳ ಆಧಾರದಲ್ಲಿ ಮಾತ್ರವೇ ತಾನು ಅಯೋಧ್ಯೆ ಭೂವಿವಾದ ಪ್ರಕರಣವನ್ನು ನಿರ್ಧರಿಸುತ್ತೇನೆಂಬ ತನ್ನ ಹೇಳಿಕೆಗೆ ಅನುಗುಣವಾಗಿ ಅದು ನಡೆದುಕೊಂಡಿಲ್ಲವೆಂದು ಅವರು ಹೇಳುತ್ತಾರೆ.

ಅಯೋಧ್ಯೆ ತೀರ್ಪಿನ ಭಾಗಗಳು ನಗೆಪಾಟಲಿಗೀಡಾಗುವಂತಹದ್ದಾಗಿದೆ. ಹಿಂದೂ ಮತ್ತು ಮುಸ್ಲಿಮರಿಗಾಗಿ ವಿಭಿನ್ನವಾದ ಮಾನದಂಡಗಳನ್ನು ಅನುಸರಿಸಿರುವುದು ಅನ್ಯಾಯ ಹಾಗೂ ಕಾನೂನಿನ ಕಣ್ಣಿನಲ್ಲಿ ತಪ್ಪಾದುದಾಗಿದೆ ಎಂದು ಎನ್‌ಎಎಲ್‌ಎಸ್‌ಎಆರ್ ವಿಶ್ವವಿದ್ಯಾನಿಲಯದ ಉಪಕುಲಪತಿ ಫೈಝಾನ್ ಮುಸ್ತಫಾ ಅವರು ‘ದಿ ವೈರ್’ ಪತ್ರಿಕೆಗಾಗಿ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕರಣ್ ಥಾಪರ್

ಭಾರತದ ಪ್ರಮುಖ ಸಂವಿಧಾನ ತಜ್ಞರಲ್ಲೊಬ್ಬರಾದ ಪ್ರೊಫೆಸರ್ ಮುಸ್ತಫಾ ಅವರು ಹೇಳುತ್ತಾರೆ: ‘‘1528ರಲ್ಲಿ ಬಾಬರಿ ಮಸೀದಿ ನಿರ್ಮಾಣವಾದಾಗಿನಿಂದ ಹಿಡಿದು 1857ರವರೆಗೆ ಅಲ್ಲಿ ಇಸ್ಲಾಮಿ ಪದ್ಧತಿಯ ಆರಾಧನೆ ನಡೆದಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲವೆಂಬ ವಾದವು ತೀರಾ ನಗೆಪಾಟಲಿನದ್ದಾಗಿದೆ.’’ ಸುಪ್ರೀಂಕೋರ್ಟ್‌ನ ಅಯೋಧ್ಯೆ ತೀರ್ಪು ಹಾಗೂ ಅದರಿಂದ ಉದ್ಭವಿಸಿರುವ ಸಮಸ್ಯೆಗಳು ಹಾಗೂ ಪ್ರಶ್ನೆಗಳ ಬಗ್ಗೆ ಮುಸ್ತಫಾ ಅವರು ಸಮಗ್ರವಾಗಿ ಚರ್ಚಿಸಿದ್ದಾರೆ.

ಮಸೀದಿ ನಿರ್ಮಾಣವಾದ ದಿನಾಂಕ ಹಾಗೂ 1856-57ರ ನಡುವೆ ಅಲ್ಲಿ ನಮಾಝ್ ಸಲ್ಲಿಸಲಾಗಿರುವ ಬಗ್ಗೆ ಮುಸ್ಲಿಮರು ಯಾವುದೇ ವಿವರಣೆಗಳನ್ನು ನೀಡಿಲ್ಲವೆಂಬ ಸುಪ್ರೀಂಕೋರ್ಟ್‌ನ ವಾದದ ಬಗ್ಗೆ ಅವರು ಗಮನಸೆಳೆದಿದ್ದಾರೆ.

ಮೊದಲನೆಯದಾಗಿ ಇದೊಂದು 450 ವರ್ಷಗಳಿಗೂ ಅಧಿಕ ಕಾಲ ಅಸ್ತಿತ್ವದಲ್ಲಿದ್ದ ಮಸೀದಿಯೆಂದು ನ್ಯಾಯಾಲಯವು ಒಪ್ಪಿಕೊಂಡಿದೆ. ನಿಯಮಿತವಾಗಿ ಪ್ರಾರ್ಥನೆಗಳನ್ನು ನಡೆಸುವುದೇ ಮಸೀದಿಯ ಕಾರ್ಯವಾಗಿದೆಯೆಂದು ತಾರ್ಕಿಕವಾದ ಗ್ರಹಿಕೆಯಾಗಿದೆ. ಆದಾಗ್ಯೂ, ಸುಪ್ರೀಂಕೋರ್ಟ್ ಹೀಗೆ ಹೇಳಿದೆ. ತರುವಾಯ ಸುಪ್ರೀಂಕೋರ್ಟ್ ತನ್ನದೇ ಆದ ಅಸಮಂಜಸತೆಗಳ ನಡುವೆ ಸಿಕ್ಕಿಹಾಕಿಕೊಂಡಿತ್ತು.

ಇನ್ನೊಂದೆಡೆ, ಮಸೀದಿಯಲ್ಲಿ 450 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಅಸ್ತಿತ್ವದಲ್ಲಿರುವುದನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಆದರೆ ಇಸ್ಲಾಮಿಕ್ ಪ್ರಾರ್ಥನೆ ನಡೆಯುತ್ತಿದ್ದುದನ್ನು ಅದು ನಿರಾಕರಿಸಿದೆ. ಆದರೆ ಮಸೀದಿಯು ಕಾರ್ಯನಿರ್ವಹಿಸುತ್ತಿರಲಿಲ್ಲ ಅಥವಾ ಬಳಕೆಯಾಗುತ್ತಿರಲಿಲ್ಲವೆಂದು ಅದು ಹೇಳಿಲ್ಲ.

ಬಾಬರಿ ಮಸೀದಿಯಲ್ಲಿ ಆರಾಧನಾ ಹಕ್ಕಿಗೆ ಸಂಬಂಧಿಸಿ 1856-57ರ ನಡುವೆ ಹಿಂದೂಗಳು ಹಾಗೂ ಮುಸ್ಲಿಮರ ನಡುವೆ ಗಲಭೆಗಳು ನಡೆದಿತ್ತೆಂಬ ವಾಸ್ತವಾಂಶವನ್ನು ಒಪ್ಪಿಕೊಂಡಿರುವುದು ಸುಪ್ರೀಂಕೋರ್ಟ್‌ನ ತೀರ್ಪಿನಲ್ಲಿ ಅಸಮಂಜಸತೆ ಇರುವುದಕ್ಕೆ ಎರಡನೆ ನಿದರ್ಶನವಾಗಿದೆ. ಆದರೆ 1857ಕ್ಕೆ ಮುಂಚೆ ಮುಸ್ಲಿಮರು ಅಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದಾರೆಂಬುದಕ್ಕೆ ಸಾಕ್ಷಿಯಾಗಿದೆ ಎಂಬ ತಾರ್ಕಿಕ ನಿರ್ಣಯವನ್ನು ನ್ಯಾಯಾಲಯವು ತೆಗೆದುಕೊಂಡಿಲ್ಲ.

 1857ರಲ್ಲಿ ಬ್ರಿಟಿಷರು ಮಸೀದಿಯಲ್ಲಿ ಕಂಬಿಗಳನ್ನು ಸ್ಥಾಪಿಸಿರುವುದು, ಹಿಂದೂಗಳು ಹಾಗೂ ಮುಸ್ಲಿಮರಿಗೆ ಪ್ರತ್ಯೇಕ ಸ್ಥಳಗಳನ್ನು ಸೃಷ್ಟಿಸುವ ಉದ್ದೇಶದಿಂದಾಗಿದ್ದು, ಅದನ್ನು ಅತಿಕ್ರಮಿಸಲಾಗಿದೆಯೆಂಬ ವಾದಕ್ಕೆ ತದ್ವಿರುದ್ಧವಾದುದಾಗಿದೆ. ಈ ಅಂಶವನ್ನು ಕೂಡಾ ಸುಪ್ರೀಂಕೋರ್ಟ್ ಕಡೆಗಣಿಸಿದೆ.

‘‘16ನೇ ಶತಮಾನದಲ್ಲಿ ಬಾಬರಿ ಮಸೀದಿ ನಿರ್ಮಾಣವಾದ ದಿನಾಂಕದಿಂದ ಹಿಡಿದು 1857ರವರೆಗೆ ಮುಸ್ಲಿಮರು ಕಟ್ಟಡದ ಒಳಭಾಗದ ಮೇಲೆ ವಿಶೇಷವಾದ ಅಧಿಕಾರವನ್ನು ಹೊಂದಿದ್ದಾರೆಂಬುದನ್ನು ಸೂಚಿಸುವಂತಹ ಯಾವುದೇ ಪುರಾವೆಗಳನ್ನು ಮುಸ್ಲಿಮರು ಸಲ್ಲಿಸಿಲ್ಲ’’ ಎಂಬ ಸುಪ್ರೀಂ ಕೋರ್ಟ್‌ನ ಅನಿಸಿಕೆಯು ಐತಿಹಾಸಿಕ ಸತ್ಯಾಂಶಗಳ ಮುಖದ ಮೇಲೆ ಹೊಡೆದಂತಾಗಿದೆ ಎಂದು ಮುಸ್ತಫಾ ಹೇಳುತ್ತಾರೆ.

1528ರಲ್ಲಿ ಮಸೀದಿಯು ನಿರ್ಮಾಣವಾದಾಗ ಬಾಬರ್ ದೊರೆಯು ಭಾರತದ ಮೇಲೆ ದಂಡಯಾತ್ರೆ ಕೈಗೊಂಡಿದ್ದ ಹಾಗೂ ಆತ ಶ್ರದ್ಧಾವಂತ ಮುಸ್ಲಿಮನಾಗಿದ್ದ. ಆನಂತರ 1658ರಿಂದ 1707ರವರೆಗೆ ಔರಂಗಜೇಬನು ಭಾರತದ ಚಕ್ರವರ್ತಿಯಾಗಿದ್ದ ಹಾಗೂ ಕಟ್ಚಾ ಧಾರ್ಮಿಕ ಶ್ರದ್ಧೆಯುಳ್ಳವನಾಗಿದ್ದ. ಮೊಗಲ್ ಸಾಮ್ರಾಜ್ಯದ ಸಂಸ್ಥಾಪಕನಾದ ಬಾಬರನ ಹೆಸರಿನಲ್ಲಿ ಸ್ಥಾಪನೆಗೊಂಡ ಈ ಮಸೀದಿಯೊಳಗೆ ಪ್ರವೇಶಿಸಲು ಹಾಗೂ ಪ್ರಾರ್ಥನೆಯನ್ನು ಸಲ್ಲಿಸಲು ಅವರು ಅವಕಾಶ ನೀಡಿದ್ದಾರೆಂಬುದನ್ನು ಗ್ರಹಿಸಲು ಸಾಧ್ಯವಿಲ್ಲ. ಶತಮಾನಗಳ ಮೊಗಲ್ ಆಡಳಿತದುದ್ದಕ್ಕೂ ಮುಸ್ಲಿಮರು ಮಸೀದಿಯ ಮೇಲೆ ವಿಶೇಷ ಸ್ವಾಧೀನವನ್ನು ಹೊಂದಿದ್ದಾರೆಯೇ ಎಂಬ ಪ್ರಶ್ನೆಯು ನಗೆಪಾಟಲಿಗೀಡಾಗುವಂತಹದ್ದಾಗಿದೆ ಎಂದು ಮುಸ್ತಫಾ ಹೇಳುತ್ತಾರೆ.

ಮುಸ್ಲಿಮರು ಹಾಗೂ ಹಿಂದೂಗಳ ಪುರಾವೆಗಳಿಗೆ ವಿಭಿನ್ನವಾದ ಮಾನದಂಡಗಳನ್ನು ಬಳಸಲಾಗಿರುವ ಬಗ್ಗೆ ಮಾತನಾಡಿದ ಮುಸ್ತಫಾ ಅವರು, ಸುಪ್ರೀಂ ಕೋರ್ಟ್‌ನ ಈ ಕ್ರಮವು ನ್ಯಾಯಯುತವಾದುದಲ್ಲ ಹಾಗೂ ಕಾನೂನಿನ ದೃಷ್ಟಿಯಿಂದ ತಪ್ಪಾದುದಾಗಿದೆ. 1528ರಿಂದ 1857ರವರೆಗೆ ಮಸೀದಿಯ ಒಳಭಾಗದ ಮೇಲೆ ತಮಗೆ ವಿಶೇಷವಾದ ಸ್ವಾಧೀನವಿತ್ತೆಂಬುದನ್ನು ಮುಸ್ಲಿಮರು ನ್ಯಾಯಾಲಯದ ಮುಂದೆ ಸಾಬೀತುಪಡಿಬೇಕಾಗಿತ್ತು. ಆದರೆ ಹಿಂದೂಗಳು ಮಾತ್ರ ಮಸೀದಿಯ ಕೇಂದ್ರ ಗುಮ್ಮಟದ ಕೆಳಗೆ ರಾಮಜನ್ಮಸ್ಥಾನವಿತ್ತೆಂದು ತಾವು ನಂಬಿರುವುದನ್ನು ತೋರಿಸಿದರೆ ಮಾತ್ರ ಸಾಕಾಗಿತ್ತು. ಅಂದರೆ ಮುಸ್ಲಿಮರು ಬಹುಕಠಿಣವಾದ ಪುರಾವೆಗಳನ್ನು ಹಾಜರುಪಡಿಸಬೇಕಾಗಿತ್ತು. ಆದರೆ ಹಿಂದೂಗಳು ಮಾತ್ರ ಕೇವಲ ನಂಬಿಕೆಯನ್ನು ಪ್ರತಿಪಾದಿಸಿದ್ದರೆ ಮಾತ್ರ ಸಾಕಾಗಿತ್ತು ಎಂದವರು ಹೇಳುತ್ತಾರೆ.

ಹಿಂದೂಗಳು ಹೊರ ಪ್ರಾಂಗಣದಲ್ಲಿ ನಿಂತು ಅವರು ಮಸೀದಿಯ ಒಳಭಾಗದಲ್ಲಿರುವ ರಾಮನ ಜನ್ಮಸ್ಥಳವೆಂದು ನಂಬಲಾಗಿರುವ ಗರ್ಭಗೃಹದತ್ತ ನೋಡಿ ಪ್ರಾರ್ಥನೆ ಸಲ್ಲಿಸುತ್ತಿದ್ದುದರಿಂದ ಹೊರಗಿನ ಪ್ರಾಂಗಣ ಹಾಗೂ ಒಳಪ್ರಾಂಗಣವನ್ನು ಸಮಗ್ರವಾಗಿ ಒಂದೇ ಸಂಕೀರ್ಣವೆಂಬುದಾಗಿ ಪರಿಗಣಿಸುವೆನೆಂಬ ನ್ಯಾಯಾಲಯದ ನಿರ್ಧಾರವನ್ನು ನಿರ್ದಿಷ್ಟವಾಗಿ ಮುಸ್ತಫಾ ಪ್ರಸ್ತಾಪಿಸಿದ್ದಾರೆ. ಈ ತರ್ಕವು, ಒಂದು ವೇಳೆ ಹೇಗಿದೆಯೆಂದರೆ, ಒಂದು ವೇಳೆ ನೆರೆಹೊರೆಯಾತನು ನನ್ನ ಮನೆಯತ್ತ ದಿಟ್ಟಿಸಿ ನೋಡುತ್ತಿದ್ದಲ್ಲಿ ಅದು ತನ್ನ ಹಕ್ಕಿನ ಆಸ್ತಿಯೆಂದು ಆತ ನಂಬಿರುವುದರಿಂದ ಆತ ಅದನ್ನು ಸ್ವಾಧೀನಪಡಿಸಿಕೊಳ್ಳಲು ದಾವೆ ಮಂಡಿಸಬಹುದೆಂದು ಹೇಳುವಂತಿದೆ ಎಂದು ಮುಸ್ತಫಾ ಹೇಳುತ್ತಾರೆ.

ನ್ಯಾಯಾಲಯವು ಸಂಭವನೀಯತೆಗಳ ಸಮತೋಲನದ ಆಧಾರದಲ್ಲಿ ನಿರ್ಧಾರ ಕೈಗೊಂಡಿತ್ತೆಂದು ಮುಸ್ತಫಾ ಹೇಳುತ್ತಾರೆ. ಬಾಬರಿ ಮಸೀದಿ ನಿವೇಶನವನ್ನು ಸಂಪೂರ್ಣವಾಗಿ ಹಿಂದೂಗಳಿಗೆ ನೀಡುವ ಬದಲು, ಸಮಾನವಾಗಿ ಅಲ್ಲದಿದ್ದರೂ ಹಿಂದೂಗಳು ಹಾಗೂ ಮುಸ್ಲಿಮರ ನಡುವೆ ಹಂಚಬೇಕಿತ್ತು.

ಸಂಭವನೀಯತೆಗಳನ್ನು ಸಮತೋಲನ ಮಾಡಿದಾಗ ಹಿಂದೂಗಳು ಮಂಡಿಸುವ ಪುರಾವೆಯು, ಮುಸ್ಲಿಮರು ಸಲ್ಲಿಸಿರುವ ಪುರಾವೆಗಳಿಗಿಂತ ಉತ್ತಮವಾಗಿದೆ ಎಂಬ ನ್ಯಾಯಾಲಯದ ತೀರ್ಪಿನ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಇತ್ತಂಡಗಳು ತಮ್ಮ ದಾವೆಯನ್ನು ಬೆಂಬಲಿಸುವಂತಹ ಪುರಾವೆಯನ್ನು ಮಂಡಿಸಿದ್ದಾರೆಂಬುದು ಸ್ಪಷ್ಟವಾಗಿದೆ. ಆದರೆ ನ್ಯಾಯಾಲಯವು ಹಿಂದೂಗಳು ಸಲ್ಲಿಸಿರುವ ಪುರಾವೆಗಳು ಉತ್ತಮವಾಗಿವೆ ಎಂದು ನಂಬುತ್ತಾರೆ. ಹೀಗಾಗಿ, ಇಡೀ ನಿವೇಶನವನ್ನು ಒಂದು ತಂಡಕ್ಕೆ ನೀಡುವ ಬದಲು ಅದನ್ನು ವಿಭಜಿಸುವುದು ಉತ್ತಮವಾದ ನಿರ್ಧಾರವಾದೀತು ಎಂದು ಮುಸ್ತಫಾ ಅಭಿಪ್ರಾಯಿಸುತ್ತಾರೆ.

1949ರಲ್ಲಿ ಮಸೀದಿಯು ಅಪವಿತ್ರಗೊಳಿಸಲಾಗಿತ್ತು ಹಾಗೂ 1992ರಲ್ಲಿ ಅದು ಧ್ವಂಸವಾಗಿರುವುದು ಕಾನೂನಿನ ಬಲವಾದ ಉಲ್ಲಂಘನೆಯಾಗಿದೆ. ಕಾನೂನು ಉಲ್ಲಂಘಿಸಿದೆಯೆನ್ನಲಾದ ತಂಡಕ್ಕೆ ಮಸೀದಿಯಿದ್ದ ನಿವೇಶನವನ್ನು ನೀಡಲಾಗಿದೆಯೆಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 ಈ ನಿಟ್ಟಿನಲ್ಲಿ ರಾಮಲಲ್ಲಾ ಪರ ವಕೀಲರು ಮಂಡಿಸಿದ ಪ್ರಮುಖ ವಾದಗಳನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಆದರೂ, ಕೋರ್ಟ್‌ತೀರ್ಪು ರಾಮಲಲ್ಲಾ ಪರವಾಗಿಯೇ ಬಂದಿದೆ ಎಂದು ಮುಸ್ತಫಾ ಬೆಟ್ಟು ಮಾಡುತ್ತಾರೆ. 1989ರಲ್ಲಿ ಸಲ್ಲಿಸಲಾದ ರಾಮಲಲ್ಲಾ ಪ್ರಕರಣವನ್ನು ಸಮಯದ ಕೊರತೆಯ ಕಾರಣದಿಂದ ಕೈಬಿಡುವುದಕ್ಕೆ ಉತ್ತಮ ಕಾರಣಗಳಿದ್ದವೆಂದು ಅವರು ಹೇಳುತ್ತಾರೆ.

 ಇಡೀ ನಿವೇಶನವನ್ನು ಹಿಂದೂಗಳಿಗೇ ನೀಡುವ ಮೂಲಕ ಸುಪ್ರೀಂಕೋರ್ಟ್ ಮುಸ್ಲಿಮರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆಯೆಂದು ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶ ಅಶೋಕ್ ಗಂಗುಲಿ ಅವರ ಅನಿಸಿಕೆಯನ್ನು ಮುಸ್ತಫಾ ಒಪ್ಪಿಕೊಳ್ಳುತ್ತಾರೆ. ಇಸ್ಲಾಮಿಕ್ ನಂಬಿಕೆಯನ್ನು ಬದಿಗಿರಿಸಿ ಹಿಂದೂ ನಂಬಿಕೆಯನ್ನು ತೀರ್ಪು ಆಯ್ದುಕೊಂಡಿದೆಯೆಂಬ ಗಂಗುಲಿ ಅವರ ಅಭಿಪ್ರಾಯವನ್ನು ತಾನು ಸಮ್ಮತಿಸುವುದಾಗಿ ಮುಸ್ತಫಾ ಹೇಳುತ್ತಾರೆ.

ಅಯೋಧ್ಯೆಯ ಭೂಹಕ್ಕನ್ನು ಪುರಾವೆಗಳ ಆಧಾರದಲ್ಲಿ ನಿರ್ಧರಿಸುತ್ತೇನೆಯೇ ಹೊರತು ನಂಬಿಕೆ ಅಥವಾ ವಿಶ್ವಾಸದ ಆಧಾರದಲ್ಲಿ ಅಲ್ಲವೆಂದು ನ್ಯಾಯಾಲಯವು ತೀರ್ಪಿನ 796ನೇ ಪ್ಯಾರಾದಲ್ಲಿ ಹೇಳಿದೆ. ವಾಸ್ತವವಾಗಿ ನ್ಯಾಯಾಲಯದ ತೀರ್ಪು ನಂಬಿಕೆಯ ಆಧಾರದಲ್ಲಿ ತಿರುಗಿದೆ ಎಂದು ಅವರು ಹೇಳುತ್ತಾರೆ. ಪುರಾವೆಗಳ ಆಧಾರದಲ್ಲಿ ಮಾತ್ರವೇ ತಾನು ಅಯೋಧ್ಯೆ ಭೂವಿವಾದ ಪ್ರಕರಣವನ್ನು ನಿರ್ಧರಿಸುತ್ತೇನೆಂಬ ತನ್ನ ಹೇಳಿಕೆಗೆ ಅನುಗುಣವಾಗಿ ಅದು ನಡೆದುಕೊಂಡಿಲ್ಲವೆಂದು ಅವರು ಹೇಳುತ್ತಾರೆ.

ತೀರ್ಪಿನ ಬರಹಗಾರರ ಹೆಸರನ್ನು ಬಹಿರಂಗಪಡಿಸದಿರುವುದು ಕೂಡಾ ಅಸಮರ್ಪಕವೆಂದು ಮುಸ್ತಫಾ ಹೇಳುತ್ತಾರೆ. ಮುಕ್ತ ಹಾಗೂ ನಿರ್ಭೀತರಾದ ನ್ಯಾಯಾಧೀಶರು ತಾವು ಏನನ್ನು ಬರೆದಿದ್ದೇವೆಂಬುದನ್ನು ಒಪ್ಪಿಕೊಳ್ಳಬೇಕು ಎಂದು ಮುಸ್ತಫಾ ಹೇಳುತ್ತಾರೆ.

ಅಯೋಧ್ಯೆ ಭೂವಿವಾದದ ತೀರ್ಪು ಕಾಶಿ ಹಾಗೂ ಮಥುರಾ ಪ್ರಕರಣಗಳಿಗೂ ಅನ್ವಯಿಸಬಹುದಾದ ಒಂದು ಪೂರ್ವನಿದರ್ಶನವೆಂಬುದಾಗಿ ತಾನು ಭಾವಿಸುವುದಿಲ್ಲವೆಂದು ಮುಸ್ತಫಾ ಹೇಳುತ್ತಾರೆ. ಪುರಾತನ ಆಡಳಿತಗಾರರ ಕೃತ್ಯಗಳ ವಿರುದ್ಧ ಬೆಂಬಲವನ್ನು ಪಡೆದುಕೊಳ್ಳುವುದಕ್ಕೆ ಕಾನೂನು ಉತ್ತರವಾಗದು ಎಂದವರು ಹೇಳಿದ್ದಾರೆ.

ಆದಾಗ್ಯೂ ಅಯೋಧ್ಯೆ ತೀರ್ಪು ನ್ಯಾಯಾಂಗದ ಬಗ್ಗೆ ಅಲ್ಪಸಂಖ್ಯಾತರ ನಂಬಿಕೆಯನ್ನು ಅಲುಗಾಡಿಸಿದೆಯೆಂಬ ಜಮಿಯತ್ ಉಲೇಮಾ ಹಿಂದ್‌ನ ನಾಯಕರಾದ ವೌಲಾನಾ ಮಹಮ್ಮೂದ್ ಮಅದನಿ ಅವರ ಅಭಿಪ್ರಾಯಕ್ಕೆ ತನ್ನ ಸಹಮತವಿಲ್ಲವೆಂದು ಮುಸ್ತಫಾ ಹೇಳುತ್ತಾರೆ. ತೀರ್ಪಿನಿಂದಾಗಿ ಅವರಿಗೆ ಬೇಸರವಾಗಿರಬಹುದು. ಆದರೆ ಕಾನೂನಿನ ಬಗ್ಗೆ ಅವರ ನಂಬಿಕೆಗೆ ಭಗ್ನಗೊಂಡಿಲ್ಲವೆಂದು ಅವರು ಹೇಳಿದ್ದಾರೆ.

ತೀರ್ಪಿನ ವಿರುದ್ಧ ನ್ಯಾಯಾಲಯದಲ್ಲಿ ಮರುಪರಾಮರ್ಶನಾ ಅರ್ಜಿ ಸಲ್ಲಿಸುವುದು ಸಾಂವಿಧಾನಿಕ ಹಕ್ಕಾಗಿದೆಯಾದರೂ, ಅದರಿಂದ ಯಾವುದೇ ಪ್ರಯೋಜನವಿಲ್ಲವೆಂದು ಅವರು ಹೇಳುತ್ತಾರೆ. ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಲಕ್ನೊ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಮುಗಿಸಲಾಗಿತ್ತು, ಈ ಪ್ರಕರಣದ ಮೇಲ್ಮನವಿ ಉನ್ನತ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿಯಿದ್ದು, ಸದ್ಯದಲ್ಲಿ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ ತೀರಾ ಕಡಿಮೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಒಂದು ವೇಳೆ ಮಸೀದಿಯು ಧ್ವಂಸಗೊಳ್ಳದೆ, ಈಗಲೂ ಅಸ್ತಿತ್ವದಲ್ಲಿದ್ದರೆ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಮಸೀದಿಯ ನಾಶಕ್ಕೆ ಆದೇಶಿಸುವ ಸಾಧ್ಯತೆ ಇರುತ್ತಿರಲಿಲ್ಲ ಹಾಗೂ ಆ ನಿವೇಶನವನ್ನು ಹಿಂದೂಗಳಿಗೆ ನೀಡುತ್ತಿರಲಿಲ್ಲ. ಮಸೀದಿಯ ನಾಶದಿಂದಾಗಿ ನ್ಯಾಯಾಲಯಕ್ಕೆ ಈ ತೀರ್ಪು ನೀಡಲು ಸಾಧ್ಯವಾಗಿದೆ ಎಂದರು.

ಕೃಪೆ: ದಿ ವೈರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News