ಮಹಾರಾಷ್ಟ್ರ ಕ್ಷಿಪ್ರಕ್ರಾಂತಿ: ಉದ್ಯಮಿ ಆನಂದ್ ಮಹೀಂದ್ರಾ ಬಣ್ಣಿಸಿದ್ದು ಹೀಗೆ..
ಮುಂಬೈ, ನ.24: ಮಹಾರಾಷ್ಟ್ರದಲ್ಲಿ ಶನಿವಾರ ನಡೆದ ಕ್ಷಿಪ್ರಕ್ರಾಂತಿಯನ್ನು ಬಣ್ಣಿಸಲು ಉದ್ಯಮಿ ಆನಂದ್ ಮಹೀಂದ್ರಾ ಅವರು ಕಬಡ್ಡಿ ವೀಡಿಯೊವೊಂದನ್ನು ಬಳಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಬಡ್ಡಿ ಪಂದ್ಯದಲ್ಲಿ ಸವಾರನೊಬ್ಬ ಎದುರಾಳಿ ತಂಡದ ರಕ್ಷಣಾ ಆಟಗಾರನ ಕೆಚ್ಚಿನ ನಡೆಗೆ ಬಲೆಬಿದ್ದ ವೀಡಿಯೊವನ್ನು ಶನಿವಾರ ಬೆಳಗ್ಗೆ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸಿಎಂ ಆಗಿ ಹಾಗೂ ಅಜಿತ್ ಪವಾರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಹಿಂದೆ ಟ್ವೀಟ್ ಮಾಡಿದ್ದ ತಮ್ಮ ವೀಡಿಯೊವನ್ನು ಮರುಟ್ವೀಟ್ ಮಾಡಿದ ಮಹೀಂದ್ರಾ, "ನಾನು ಟ್ವೀಟ್ ಮಾಡಿದ ಈ ವೀಡಿಯೊ ನೆನಪಿದೆಯೇ? ಮಹಾರಾಷ್ಟ್ರದಲ್ಲಿ ಇದೀಗ ನಡೆದದ್ದನ್ನು ಬಣ್ಣಿಸಲು ಇದಕ್ಕಿಂತ ಸೂಕ್ತ ಮಾರ್ಗ ಇದೆ ಎಂದು ನಿಮಗೆ ಅನಿಸುತ್ತದೆಯೇ?" ಎಂದು ಪ್ರಶ್ನಿಸಿದ್ದಾರೆ. ಆರ್‌ಪಿಜಿ ಸಮೂಹದ ಮುಖ್ಯಸ್ಥ, ಉದ್ಯಮಿ ಹರ್ಷ ಗೋಯೆಂಕಾ ಕೂಡಾ ಘಟನೆ ಬಗ್ಗೆ ಟ್ವೀಟ್ ಮಾಡಿದ್ದಾರೆ.
"ಶೇರ್ಡ್ ಪವಾರ್" ಎಂದು ಟ್ವೀಟ್ ಮಾಡಿರುವ ಅವರು, ಪವಾರ್ ಕುಟುಂಬ ಇದೀಗ ಒಡೆದು ಹೋಗಿರುವುದನ್ನು ಬಿಂಬಿಸಿದ್ದಾರೆ. ಬಳಿಕ ಸಿಎಂ ಹುದ್ದೆಗೆ ರೇಸ್ ಇನ್ನೂ ಮುಗಿದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
"ನಾನು ನೋಡಿದ ಅತಿಹೆಚ್ಚು ತಿರುವುಗಳನ್ನೊಳಗೊಂಡ ಚಿತ್ರಗಳು ರೇಸ್, ಅಂಧಧೂನ್ ಮತ್ತು ಮಹಾರಾಷ್ಟ್ರಚ್ಯ ಸಿಎಂ ಕೌನ್?, ಕೊನೆಯ ಚಿತ್ರ ಇನ್ನೂ ಮುಗಿದಿಲ್ಲ.. ಇನ್ನಷ್ಟ ಪಾಪ್‌ಕಾರ್ನ್ ಕೊಡಿ" ಎಂದು ಟ್ವೀಟಿಸಿದ್ದಾರೆ.
ಇದೇ ವೇಳೆ ಜೆಎಸ್‌ಡಬ್ಲ್ಯು ಸಮೂಹದ ಸಜ್ಜನ್ ಜಿಂದಾಲ್ ನೂತನ ಸಿಎಂ ಫಡ್ನವೀಸ್ ಅವರನ್ನು ಅಭಿನಂದಿಸಿದ್ದಾರೆ.