ಮಹಾರಾಷ್ಟ್ರ: ರಾಜ್ಯಪಾಲರ ಆಹ್ವಾನ ಪತ್ರ, ಶಾಸಕರ ಸಹಿ ಇರುವ ಪತ್ರ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2019-11-24 13:11 GMT

ಹೊಸದಿಲ್ಲಿ, ನ.24: ಮಹಾರಾಷ್ಟ್ರ ರಾಜಕೀಯ ವಿದ್ಯಮಾನದ ಬಗ್ಗೆ ಸೋಮವಾರ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದ್ದು ಈ ಸಂದರ್ಭ ಎರಡು ದಾಖಲೆ ಪತ್ರವನ್ನು ಹಾಜರುಪಡಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಫಡ್ನವೀಸ್ ಹಾಗೂ ಅಜಿತ್ ಪವಾರ್‌ಗೆ ನೋಟಿಸ್ ನೀಡಿದೆ.

ರಾಜ್ಯದಲ್ಲಿ ಸರಕಾರ ರಚಿಸಲು ಬಿಜೆಪಿಯ ದೇವೇಂದ್ರ ಫಡ್ನವೀಸ್‌ಗೆ ಮಹಾರಾಷ್ಟ್ರದ ರಾಜ್ಯಪಾಲ ಭಗತ್‌ ಸಿಂಗ್ ಕೋಶ್ಯಾರಿ ಆಹ್ವಾನ ನೀಡಿದ ಪತ್ರ ಹಾಗೂ ಸರಕಾರಕ್ಕೆ ಬೆಂಬಲ ಸೂಚಿಸಿದ ಶಾಸಕರ ಸಹಿಯುಳ್ಳ ಪತ್ರವನ್ನು (ಫಡ್ನವೀಸ್ ರಾಜ್ಯಪಾಲರಿಗೆ ನೀಡಿದ ಪತ್ರ) ಸೋಮವಾರ ತನ್ನೆದುರು ಹಾಜರುಪಡಿಸುವಂತೆ ಮೂವರು ಸದಸ್ಯರ ಸುಪ್ರೀಂಕೋರ್ಟ್ ಪೀಠ ಸೂಚಿಸಿದೆ. ಸೋಮವಾರ (ನ.25ರಂದು) ಬೆಳಿಗ್ಗೆ 10:30ಕ್ಕೆ ಪತ್ರವನ್ನು ಸಲ್ಲಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ಸೂಚಿಸಿದಾಗ ಅವರು 2 ದಿನದ ಸಮಯಾವಕಾಶ ಕೋರಿದರು. ಆದರೆ ಇದಕ್ಕೆ ನ್ಯಾಯಾಲಯ ಸಮ್ಮತಿಸಲಿಲ್ಲ. 

    24 ಗಂಟೆಯೊಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ. ಆದರೆ ಅದಕ್ಕೂ ಮೊದಲು ಸರಕಾರ ರಚಿಸಲು ಆಹ್ವಾನ ನೀಡಿದ ರಾಜ್ಯಪಾಲರ ಪತ್ರ ಹಾಗೂ ಸರಕಾರಕ್ಕೆ ಬೆಂಬಲ ಸೂಚಿಸಿರುವ ಶಾಸಕರ ಸಹಿಯುಳ್ಳ ಪತ್ರವನ್ನು ಪರಿಶೀಲಿಸಿ ಸೋಮವಾರ ಅರ್ಜಿಯ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದಲ್ಲಿ ನೂತನ ಸರಕಾರ ರಚನೆಯಾಗಿರುವುದನ್ನು ವಿರೋಧಿಸಿ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು ನ್ಯಾಯಾಧೀಶರಾದ ಎನ್‌ವಿ ರಮಣ, ಅಶೋಕ್ ಭೂಷಣ್ ಮತ್ತು ಸಂಜೀವ್ ಖನ್ನಾ ಇರುವ ತ್ರಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸುತ್ತಿದೆ.

ಬಿಜೆಪಿ ತರಾತುರಿಯಲ್ಲಿ, ಅಧಿಕೃತ ಬೆಂಬಲ ಪತ್ರವಿಲ್ಲದೆ ಸರಕಾರ ರಚಿಸಿದೆ ಎಂದು ಮೂರು ಪಕ್ಷಗಳ ಪರ ನ್ಯಾಯವಾದಿ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು. ಸರಕಾರ ರಚನೆಗೆ ಬೆಂಬಲವಾಗಿ ಬಿಜೆಪಿ ಯಾವ ಪತ್ರ ಸಲ್ಲಿಸಿದೆ ಎಂಬುದು ತಿಳಿದಿಲ್ಲ. ಫಡ್ನವೀಸ್‌ಗೆ ಆಹ್ವಾನ ನೀಡುವ ಬಗ್ಗೆ ಅಷ್ಟೊಂದು ತರಾತುರಿಯಲ್ಲಿ ನಿರ್ಧಾರ ಕೈಗೊಂಡಿರುವ ರಾಜ್ಯಪಾಲರ ನಡೆಯೂ ಪ್ರಶ್ನಾರ್ಹವಾಗಿದೆ . ಬಹುಮತವಿದ್ದರೆ ತಕ್ಷಣ ಸಾಬೀತುಪಡಿಸಲಿ. ಅವರಿಂದ ಆಗದಿದ್ದರೆ ನಮಗೆ ಅವಕಾಶ ನೀಡಲಿ ಎಂದು ಸಿಬಲ್ ಹೇಳಿದರು.   

ರಾಜ್ಯಪಾಲರು ರಾಜಕೀಯ ಪಕ್ಷವೊಂದರ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ಅವರು ದುರುದ್ದೇಶದಿಂದ, ತಾರತಮ್ಯದಿಂದ ವರ್ತಿಸುತ್ತಿದ್ದಾರೆ ಎಂದು ಸಿಬಲ್ ಆರೋಪಿಸಿದರು. ಸರಕಾರ ರಚಿಸುವ ಬಗ್ಗೆ ಹಲವು ದಿನದಿಂದ ಕೈ ಎತ್ತದವರು, ಈಗ ಬೇರೊಬ್ಬರು ಸರಕಾರ ರಚಿಸಲು ಮುಂದೆ ಬಂದಾಗ ಆಕ್ಷೇಪಿಸುವುದು ಸರಿಯಲ್ಲ. ವಿಶ್ವಾಸಮತ ಸಾಬೀತುಪಡಿಸುವುದು ಅನಿವಾರ್ಯ. ಆದರೆ ಇವತ್ತೇ ಆಗಬೇಕು, ಈಗಲೇ ಆಗಬೇಕು ಎಂದು ಪಟ್ಟುಹಿಡಿಯುವುದು ಸರಿಯಲ್ಲ. ರಾಜ್ಯಪಾಲರು ವೈಯಕ್ತಿಕ ವಿವೇಚನೆ ಬಳಸಿ ಫಡ್ನವೀಸ್‌ರನ್ನು ಸರಕಾರ ರಚಿಸಲು ಆಹ್ವಾನಿಸಿದ್ದು ರಾಜ್ಯಪಾಲರ ಕ್ರಮವು ನ್ಯಾಯಾಂಗದ ಪರಿಶೀಲನೆಯಿಂದ ಮುಕ್ತವಾಗಿರುತ್ತದೆ ಎಂದು ಬಿಜೆಪಿ ಹಾಗೂ ಕೆಲವು ಪಕ್ಷೇತರ ಶಾಸಕರ ಪರ ನ್ಯಾಯವಾದಿ ಮುಕುಲ್ ರೋಹಟ್ಗಿ ಅಭಿಪ್ರಾಯಪಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಾಜ್ಯಪಾಲರ ಅಧಿಕಾರದ ವಿಷಯ ತೀರ್ಮಾನವಾಗಿದೆ. ಈಗ ವಿಶ್ವಾಸಮತ ಸಾಬೀತುಪಡಿಸುವ ವಿಷಯದ ಬಗ್ಗೆ ಗಮನ ಹರಿಸಬೇಕು. ಆದ್ದರಿಂದ ನ.25ರಂದು ಬೆಳಿಗ್ಗೆ 10:30ಕ್ಕೆ ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News