ಈ ವಿಶೇಷ ಮಗುವಿಗೆ ಎರಡು ತಲೆ, ಮೂರು ಕೈ !

Update: 2019-11-25 03:40 GMT
ಸಾಂದರ್ಭಿಕ ಚಿತ್ರ

ಭೋಪಾಲ್: ಇಲ್ಲಿಗೆ ಸಮೀಪದ ವಿದಿಶಾ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಶನಿವಾರ ಎರಡು ತಲೆ ಮತ್ತು ಮೂರು ಕೈ ಇರುವ ಗಂಡುಮಗುವಿಗೆ ಜನ್ಮ ನೀಡಿದ್ದಾರೆ.

ವಿದಿಶಾ ಜಿಲ್ಲೆಯ ಮಾಳಾ ಗ್ರಾಮದ ಈ ಮಹಿಳೆಗೆ ಸೋನೋಗ್ರಫಿ ಪರೀಕ್ಷೆ ಮೂಲಕ ಅವಳಿ ಮಕ್ಕಳಾಗುತ್ತವೆ ಎಂದು ವೈದ್ಯರು ಹೇಳಿದ್ದರು. ಆದರೆ ಹೆರಿಗೆಯಾದಾಗ ಎರಡು ತಲೆಯ ಮಗುವಿಗೆ ಜನ್ಮ ನೀಡಿದರು ಎಂದು ಜಿಲ್ಲಾಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಸಂಜಯ್ ಖರೆ ಹೇಳಿದ್ದಾರೆ.

ಈ ಸುದ್ದಿ ಹರಡುತ್ತಿದ್ದಂತೆ ಮಗುವನ್ನು ನೋಡಲು ಆಸ್ಪತ್ರೆಗೆ ಧಾವಿಸಿದ ಜನಸಮೂಹವನ್ನು ನಿಯಂತ್ರಿಸಲು ಹರಸಾಹಸ ಮಾಡಬೇಕಾಯಿತು ಎಂದು ಅವರು ಹೇಳಿದ್ದಾರೆ. ಮಗುವನ್ನು ನವಜಾತ ಶಿಶುಗಳ ವಿಶೇಷ ನಿಗಾ ಘಟಕಕ್ಕೆ ದಾಖಲಿಸಲಾಗಿದ್ದು, ವೈದ್ಯರು ನಿಗಾ ವಹಿಸಿದ್ದಾರೆ.

"ಮಹಿಳೆಯ ಹೆರಿಗೆ ಶಸ್ತ್ರಚಿಕಿತ್ಸೆ ಅತ್ಯಂತ ಕ್ಲಿಷ್ಟಕರವಾಗಿತ್ತು. ಇಂಥ ಮಗುವನ್ನು ನಾವು ನಿರೀಕ್ಷಿಸಿರಲಿಲ್ಲ. ಇದು ಒಂದೂವರೆ ವರ್ಷದ ಹಿಂದೆ ವಿವಾಹವಾದ ಮಹಿಳೆಗೆ ಮೊದಲ ಮಗು. ಈ ಹೆರಿಗೆ ಬಳಿಕ ಕುಟುಂಬಕ್ಕೆ ಆಘಾತವಾಗಿದ್ದು, ತಾಯಿಗೆ ಈ ಬಗ್ಗೆ ಇನ್ನೂ ತಿಳಿಸಿಲ್ಲ" ಎಂದು ವೈದ್ಯೆ ಡಾ. ಪ್ರತಿಭಾ ಓಸ್ವಾಲ್ ಹೇಳಿದ್ದಾರೆ.

"ಶಿಶುವಿನ ಆರೋಗ್ಯದ ಬಗ್ಗೆ ತೀವ್ರ ಕಾಳಜಿ ವಹಿಸಿದ್ದು, ಈ ಹಿಂದೆ ಇಂಥ ಮಗುವಿನ ಶಸ್ತ್ರಚಿಕಿತ್ಸೆ ನೆರವೇರಿಸಿದ ಭೋಪಾಲ್ ಹಾಗೂ ದೆಹಲಿಯ ತಜ್ಞ ವೈದ್ಯರಿಂದ ಸಲಹೆ ಪಡೆಯಲಾಗುತ್ತಿದೆ" ಎಂದು ಮಕ್ಕಳ ತಜ್ಞ ಸುರೇಂದ್ರ ಸೋನ್‌ಕರ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News