'ನಾವು 162 ಜನರಿದ್ದೇವೆ, ಬಂದು ನೋಡಿ': ಮಹಾರಾಷ್ಟ್ರ ರಾಜ್ಯಪಾಲರಿಗೆ ಸಂಜಯ್ ರಾವತ್ ಟ್ವೀಟ್

Update: 2019-11-25 17:45 GMT

ಮುಂಬೈ, ನ. 25: ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟ ‘ಮಹಾ ವಿಕಾಸ್ ಅಘಾದಿ’ ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಹಕ್ಕು ಪ್ರತಿಪಾದಿಸಿದ ಗಂಟೆಗಳ ಬಳಿಕ ಮೂರು ಪಕ್ಷಗಳ ಶಾಸಕರು ಬಸ್ ಹಾಗೂ ಕಾರುಗಳಲ್ಲಿ ಮುಂಬೈಯಲ್ಲಿರುವ ಪಂಚತಾರಾ ಹೊಟೇಲ್‌ಗೆ ಆಗಮಿಸಿ ಸೋಮವಾರ ಸಂಜೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಗ್ರಾಂಡ್ ಹಯಾತ್ ಹೊಟೇಲ್‌ನಲ್ಲಿ ಸಂಜೆ 7 ಗಂಟೆಗೆ ಮೂರು ಪಕ್ಷಗಳ ಶಾಸಕರು ಒಟ್ಟಿಗೆ ಸೇರಿ, ನಾವು 162 ಶಾಸಕರು ಒಗ್ಗಟ್ಟಾಗಿದ್ದೇವೆ. ಸರಕಾರ ರಚನೆಗೆ ಬೇಕಾದ ಬಹುಮತ ನಮ್ಮಲ್ಲಿ ಇದೆ ಎಂದು ಮಾಧ್ಯಮದ ಎದುರು ಘೋಷಿಸಿದರು.

 ನಾವೆಲ್ಲರೂ ಜೊತೆಯಾಗಿದ್ದೇವೆ. ನಾವೆಲ್ಲರೂ ಮೊದಲ ಬಾರಿಗೆ ಜೊತೆಯಾಗಿರುವುದನ್ನು ನೋಡಿ. ರಾಜ್ಯಪಾಲರು ಸ್ವತಃ ಬಂದು ನೋಡಲಿ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.

  ಎನ್‌ಸಿಪಿ ವರಿಷ್ಠ ಶರದ್ ಪವಾರ್, ಅವರ ಪುತ್ರಿ ಸುಪ್ರಿಯಾ ಸುಳೆ, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ, ಅವರ ಪುತ್ರ ಆದಿತ್ಯ ಠಾಕ್ರೆ, ಸಂಜಯ್ ರಾವತ್ ಸೇರಿದಂತೆ ಮೂರು ಪಕ್ಷಗಳ ಶಾಸಕರು ಹೊಟೇಲ್‌ನಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ನಾಯಕ ಅಶೋಕ್ ಚವ್ಹಾಣ್, ನಾವು 162ಕ್ಕೂ ಅಧಿಕ ಶಾಸಕರಿದ್ದೇವೆ. ಬಿಜೆಪಿಯನ್ನು ದೂರವಿರಿಸಲು ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. 162 ಶಾಸಕರ ಸಹಿ ಇರುವ ಪತ್ರವನ್ನು ರಾಜಭವನಕ್ಕೆ ಕಳುಹಿಸಿದ್ದೇವೆ. ನಮ್ಮಲ್ಲಿ ಬಹುಮತವಿದೆ. ಸರಕಾರ ರಚಿಸಲು ನಮಗೆ ಅವಕಾಶ ಸಿಗಬೇಕು ಎಂದರು.

ಕಾಂಗ್ರೆಸ್‌ನ ಬಾಳಾಸಾಹೇಬ್ ಥೋರಾಟ್ ಮಾತನಾಡಿ, ಇದು ಮಹಾ ವಿಕಾಸ್ ಅಘಾಡಿಯ ಮೊದಲ ಸಭೆ. ಅಲ್ಪ ಮತದಿಂದ ಸರಕಾರ ರಚಿಸಿದವರು ರಾಜೀನಾಮ ನೀಡುವಂತೆ ಈ ಸಭೆ ಆಗ್ರಹಿಸುತ್ತಿದೆ. 162 ಶಾಸಕರ ಸಹಿಯುಳ್ಳ ಪತ್ರವನ್ನು ರಾಜ್ಯಪಾಲರ ಕಚೇರಿಗೆ ನೀಡಿದ್ದೇವೆ. ನಮ್ಮ ಒಗ್ಗಟ್ಟನ್ನು ನೋಡಿದ ಮೇಲಾದರೂ ಮುಖ್ಯಮಂತ್ರಿ ರಾಜೀನಾಮೆ ನೀಡಲಿ ಎಂದರು.

ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮಾತನಾಡಿ, ನಮ್ಮ ಮೈತ್ರಿಯ ಬಲವನ್ನು ಸೆರೆ ಹಿಡಿಯುವ ಕ್ಯಾಮರಾ ಲೆನ್ಸ್ ಇಲ್ಲ. ನಮ್ಮ ಹಾದಿ ಸುಗಮವಾಗಿದೆ. ಶಿವಸೇನೆ ಏನು ಎಂಬುದನ್ನು ತಿಳಿಯದೆ, ಅಡ್ಡ ಹಾದಿಯಲ್ಲಿ ನುಗ್ಗಲು ಪ್ರಯತ್ನಿಸಿದರೆ, ಶಿವಸೇನೆ ಏನು ಎಂಬುದನ್ನು ತೋರಿಸಬೇಕಾಗುತ್ತದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News