ಸಂವಿಧಾನ ಶಿಲ್ಪಿಅಂಬೇಡ್ಕರ್: ಮತ್ತಷ್ಟು ಸಾಕ್ಷ್ಯಗಳು

Update: 2019-11-26 18:22 GMT

ನವೆಂಬರ್ 4ರಂದು ಸಂವಿಧಾನದ ಮೂಲಪಠ್ಯವನ್ನು (ಡ್ರಾಫ್ಟ್) ಅದರ ಪ್ರಥಮ ಓದಿಗಾಗಿ ಸಭೆಗೆ ಸಮರ್ಪಿಸುತ್ತಾ ಅಂಬೇಡ್ಕರ್‌ರವರು ಡ್ರಾಫ್ಟ್ ಸಂವಿಧಾನದ ಮೂಲ ಅಂಶಗಳನ್ನು ವಿವರಿಸುತ್ತಾ ಹೇಳುವುದು ‘‘ಸಂವಿಧಾನ ಸಭೆಯ ನಿರ್ದೇಶನದಂತೆ ಮೂಲ ಪಠ್ಯರಚನಾ ಸಮಿತಿಗೆ ಸಂವಿಧಾನವನ್ನು ರಚಿಸುವ ಜವಾಬ್ದಾರಿಯನ್ನು ವಹಿಸಲಾಯಿತು’’ ಎಂದು! ಅಂದ ಹಾಗೆ ಅಂಬೇಡ್ಕರ್ ಏಕೆ ‘ಪರಿಶೀಲಿಸುವ’ ಜವಾಬ್ದಾರಿಯನ್ನು ನೀಡಲಾಯಿತು ಎಂದು ಹೇಳಲಿಲ್ಲ? ಹಾಗೆಯೇ ಅಲ್ಲಿದ್ದ ಸದಸ್ಯರು ಅಂಬೇಡ್ಕರ್‌ರ ‘‘ಸಂವಿಧಾನವನ್ನು ರಚಿಸುವ ಜವಾಬ್ದಾರಿಯನ್ನು ವಹಿಸಲಾಯಿತು’’ ಎಂಬ ಹೇಳಿಕೆಯನ್ನು ಯಾಕೆ ಆಕ್ಷೇಪಿಸಲಿಲ್ಲ?


ಅಂಬೇಡ್ಕರ್ ಸಂವಿಧಾನ ರಚನೆ ಮಾಡಿಯೇ ಇಲ್ಲ ಎಂದು ಅನೇಕರು ಈಗಲೂ ತಗಾದೆ ತೆಗೆಯುತ್ತಲೇ ಇದ್ದಾರೆ. ಸಂವಿಧಾನ ರಚನೆಯ ಆರಂಭದ ಹಂತದಲ್ಲೇ ಅದರ ಮೊದಲ ಓದಿನ ಸಂದರ್ಭದಲ್ಲಿಯೇ ಎಲ್ಲಾ ಸದಸ್ಯರು ಅಂಬೇಡ್ಕರರಿಗೇ ಇದರ ಕೀರ್ತಿ ಸಲ್ಲುತ್ತದೆ ಎಂದರೂ ಒಬ್ಬ ಸದಸ್ಯರು ಅದರ ಕೀರ್ತಿ ಅದನ್ನು ಟೈಪ್ ಮಾಡಿದವರಿಗೂ, ಅದನ್ನು ಕಾಪಿ ಮಾಡಿದವರಿಗೂ ಸಲ್ಲುತ್ತದೆ ಎಂದು ತಮ್ಮ ಅಸಹನೆ ಹೊರಹಾಕಿದ್ದರು! ಇದರಿಂದ ಅರಿವಾಗುವುದು ಸಮಸ್ಯೆ ಇರುವುದು ಸಂವಿಧಾನದಲ್ಲಲ್ಲ, ಬದಲಿಗೆ ಸಂವಿಧಾನ ಶಿಲ್ಪಿಎನಿಸಿಕೊಂಡವರ ಬಗ್ಗೆ ಎಂಬುದು. ಇರಲಿ, ಇದರ ಬಗ್ಗೆ ಚರ್ಚೆ ಇದ್ದದ್ದೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಸಂವಿಧಾನ ಶಿಲ್ಪಿಎನಿಸಿಕೊಂಡ ಅಥವಾ ಹಾಗೆ ಕರೆಯಲ್ಪಡುವ ಬಗ್ಗೆ ಮತ್ತಷ್ಟು ಸಾಕ್ಷ್ಯಗಳನ್ನು ಹುಡುಕುವುದಾದರೆ... ಸಂವಿಧಾನ ರಚನೆಯ ಕಾರ್ಯ ಅಧಿಕೃತವಾಗಿ ಹೊಸದಿಲ್ಲಿಯ ಕಾನ್‌ಸ್ಟಿಟ್ಯೂಷನ್ ಹಾಲ್‌ನಲ್ಲಿ 1946 ಡಿಸೆಂಬರ್ 6ರಂದು ಸಂವಿಧಾನ ಸಭೆಯ ಸಮಾವೇಶದ ಮೂಲಕ ಆರಂಭಗೊಂಡಿತು. ಆ ಸಭೆಯಲ್ಲಿ 207 ಸದಸ್ಯರು ಭಾಗವಹಿಸಿದ್ದರು ಅದರಲ್ಲಿ ಬಂಗಾಳದಿಂದ ಗೆದ್ದಿದ್ದ ಅಂಬೇಡ್ಕರ್‌ರವರು ಕೂಡ ಒಬ್ಬರು.

ಸಂವಿಧಾನ ರಚನೆಯ ಈ ಹಿನ್ನೆಲೆಯಲ್ಲಿ ಸಂವಿಧಾನ ಸಭೆ (Constitution Assembly) ಯಥಾಪ್ರಕಾರ ತನ್ನ ಔಪಚಾರಿಕ ಕೆಲಸಗಳನ್ನು, ಅನೇಕ ಸಮಿತಿ ಉಪ ಸಮಿತಿಗಳನ್ನು ರಚಿಸಲು ಆರಂಭಿಸಿತು. ಅಂತಹ ಸಮಿತಿಗಳಲ್ಲಿ ಒಂದು ಪ್ರಮುಖ ಸಮಿತಿ ಸಂವಿಧಾನ ಸಲಹಾ ಸಮಿತಿ. 50 ಸದಸ್ಯರ ಆ ಸಮಿತಿಯಲ್ಲಿ ಅಂಬೇಡ್ಕರ್ ಕೂಡ ಒಬ್ಬ ಸದಸ್ಯರಾಗಿ ಆಯ್ಕೆಗೊಂಡರು. ಹಾಗೆಯೇ ಮೂಲಭೂತ ಹಕ್ಕುಗಳ ಉಪಸಮಿತಿ ಮತ್ತು ಅಲ್ಪಸಂಖ್ಯಾತರ(ಎಸ್ಸಿ/ಎಸ್ಟಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು) ಉಪಸಮಿತಿ ಎಂಬ ಮತ್ತೆರಡು ಪ್ರಮುಖ ಉಪಸಮಿತಿಗಳಿಗೂ ಕೂಡ ಅವರು ಸದಸ್ಯರಾದರು. 1946ರ ಅಂತ್ಯದ ಆ ಸಂದರ್ಭದಲ್ಲಿ ಭಾರತದ ಸಂವಿಧಾನದ ಬಗ್ಗೆ ತನ್ನದೇ ಆದ ದೂರದೃಷ್ಟಿ ಹೊಂದಿದ್ದ ಅಂಬೇಡ್ಕರ್‌ರವರು ಅಲ್ಪಸಂಖ್ಯಾತರ ಉಪಸಮಿತಿಗೆ ಆಗಿನ್ನೂ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದ್ದ ಪರಿಶಿಷ್ಟ ಜಾತಿ/ವರ್ಗಗಳ ಹಕ್ಕುಗಳ ಕುರಿತು ಒಂದು ಲಿಖಿತ ಮನವಿ ಸಲ್ಲಿಸುತ್ತಾರೆ. ಆ ಮನವಿಯಲ್ಲಿ ಅವರು ಪರಿಶಿಷ್ಟ ಜಾತಿಯವರು ಹೇಗೆ ಅಲ್ಪಸಂಖ್ಯಾತರಾಗುತ್ತಾರೆ ಅಥವಾ ಅದಕ್ಕಿಂತ ಹೇಗೆ ಹೆಚ್ಚಾಗುತ್ತಾರೆ? ಅವರ ಸಮಸ್ಯೆಗಳೇನು? ಭವಿಷ್ಯದ ಸಂವಿಧಾನದಲ್ಲಿ ಅವರಿಗೆ ಪೂನಾ ಒಪ್ಪಂದದ ಅಡಿಯಲ್ಲಿ ನೀಡಲಾಗಿದ್ದ ಮೀಸಲಾತಿ ಒಳಗೊಂಡಂತೆ ಅನೇಕ ಹಕ್ಕುಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂದು ವಿವರಿಸಿರುತ್ತಾರೆ.

ಕೇವಲ ಸಂವಿಧಾನ ಸಭೆಗೆ ಸಲ್ಲಿಸಲು ಸಿದ್ಧಪಡಿಸಿದ್ದ ಈ ಮನವಿಯನ್ನು ಅವರ ಕೆಲವು ಹಿಂದೂ ಸ್ನೇಹಿತರ ಮನವಿ ಮೇರೆಗೆ ಅಂಬೇಡ್ಕರ್‌ರವರು ‘ಸ್ಟೇಟ್ಸ್ ಆ್ಯಂಡ್ ಮೈನಾರಿಟೀಸ್’ ಎಂಬ ಶೀರ್ಷಿಕೆಯಡಿಯಲ್ಲಿ ಪುಸ್ತಕ ರೂಪದಲ್ಲೂ ಪ್ರಕಟಿಸುತ್ತಾರೆ. ಆಶ್ಚರ್ಯವೆಂದರೆ ಅಂಬೇಡ್ಕರ್‌ರವರು ಪ್ರಕಟಿಸಿರುವ ಆ ಕೃತಿಯಲ್ಲಿ ಸಂವಿಧಾನ ಶಿಲ್ಪಿಅಂಬೇಡ್ಕರ್‌ರವರೇ ಎಂಬುದಕ್ಕೆ ಮೊದಲ ಸಾಕ್ಷಿ ದೊರಕುತ್ತದೆ. ಹೇಗೆಂದರೆ ಈಗಿನ ಸಂವಿಧಾನದ ಪ್ರಸ್ತಾವನೆಯಲ್ಲಿ ಕಂಡುಬರುವ We the people of India… (ನಾವು ಭಾರತದ ಜನರು...) ಎಂಬ ಮೊದಲ ಸಾಲು 1947 ಮಾರ್ಚ್ 15ರಂದು ಅವರು ಪ್ರಕಟಿಸಿರುವ ‘ಸ್ಟೇಟ್ಸ್ ಆ್ಯಂಡ್ ಮೈನಾರಿಟೀಸ್’ ಎಂಬ ಕಿರು ಸಂವಿಧಾನ ಮಾದರಿಯ ಆ ಕೃತಿಯ ಪ್ರಸ್ತಾವನೆಯಲ್ಲೂ ಕಂಡುಬರುತ್ತದೆ! ಒಂದು ವ್ಯತ್ಯಾಸವೆಂದರೆ ‘ಸ್ಟೇಟ್ಸ್ ಆ್ಯಂಡ್ ಮೈನಾರಿಟೀಸ್’ ಕೃತಿಯಲ್ಲಿ ಉದ್ದೇಶಿತ ಪ್ರಸ್ತಾವನೆ ಎಂಬ ತಲೆಬರಹದಡಿಯಲ್ಲಿ ಕಂಡುಬರುವ ಆ ಸಾಲು ಆಗಿನ್ನು ಭಾರತಕ್ಕೆ ಸ್ವಾತಂತ್ರ್ಯ ಬಂದಿಲ್ಲದ ಕಾರಣ We the people of India ಎನ್ನುವ ಬದಲು We the people of the territories of British India ಎಂದಿದೆಯಷ್ಟೆ!

 ಇನ್ನು ಎರಡನೆಯ ಸಾಕ್ಷಿ, ಡಾ.ಅಂಬೇಡ್ಕರ್‌ರವರು ಸಂವಿಧಾನದ ಮೂಲಪಠ್ಯ ರಚನಾ ಸಮಿತಿ (Drafting Committee)ಯ ಅಧ್ಯಕ್ಷರಾಗಿ 1947 ಎಪ್ರಿಲ್ 29ರಂದು ಆಯ್ಕೆಯಾದದ್ದು ಎಲ್ಲರಿಗೂ ತಿಳಿದಿದೆ. ಈ ಸಂದರ್ಭದಲ್ಲಿ ಕೆಲವರು ವಿಶೇಷವಾಗಿ ಅಂಬೇಡ್ಕರ್‌ರನ್ನು ಸಂವಿಧಾನ ಶಿಲ್ಪಿ ಅಲ್ಲ ಎಂದು ಟೀಕಿಸುವವರು ಹೇಳುವುದೇನೆಂದರೆ ಅಂಬೇಡ್ಕರ್ ಬೇರೆಯವರು ಬರೆದುಕೊಟ್ಟದ್ದನ್ನು ಪರಿಶೀಲಿಸಿದರು... ಹಾಗೆ ಹೀಗೆ ಎಂದು. ಅಂತಹವರು ಹೀಗೆ ಹೇಳಲಿಕ್ಕೆ ಕಾರಣ ಸಂವಿಧಾನ ಸಭಾ ನಡಾವಳಿ ಸಂಪುಟ 5ರಲ್ಲಿ ಸಂವಿಧಾನ ಮೂಲ ಪಠ್ಯ ರಚನಾ ಸಮಿತಿಯನ್ನು Committee to Scrutinize Draft Constitution ಎಂದು ಉಲ್ಲೇಖಿಸಿರುವುದಾಗಿರುತ್ತದೆ. ಆದರೆ ಅದರ ಮುಂದುವರಿದ ಭಾಗ ಅಂದರೆ ಸಂವಿಧಾನ ಸಭಾ ನಡಾವಳಿ ಸಂಪುಟ 7ರಲ್ಲಿ ಕಂಡು ಬರುವ ಅಂಶ, 1948 ನವೆಂಬರ್ 4 ರಂದು ಸಂವಿಧಾನದ ಮೂಲಪಠ್ಯವನ್ನು (ಡ್ರಾಫ್ಟ್) ಅದರ ಪ್ರಥಮ ಓದಿಗಾಗಿ ಸಭೆಗೆ ಸಮರ್ಪಿಸುತ್ತಾ ಅಂಬೇಡ್ಕರ್‌ರವರು ಡ್ರಾಫ್ಟ್ ಸಂವಿಧಾನದ ಮೂಲ ಅಂಶಗಳನ್ನು ವಿವರಿಸುತ್ತಾ ಹೇಳುವುದು ‘‘ಸಂವಿಧಾನ ಸಭೆಯ ನಿರ್ದೇಶನದಂತೆ ಮೂಲ ಪಠ್ಯರಚನಾ ಸಮಿತಿಗೆ ಸಂವಿಧಾನವನ್ನು ರಚಿಸುವ ಜವಾಬ್ದಾರಿಯನ್ನು ವಹಿಸಲಾಯಿತು’’ ಎಂದು! ಅಂದ ಹಾಗೆ ಅಂಬೇಡ್ಕರ್ ಏಕೆ ‘ಪರಿಶೀಲಿಸುವ’ ಜವಾಬ್ದಾರಿಯನ್ನು ನೀಡಲಾಯಿತು ಎಂದು ಹೇಳಲಿಲ್ಲ? ಹಾಗೆಯೇ ಅಲ್ಲಿದ್ದ ಸದಸ್ಯರು ಅಂಬೇಡ್ಕರ್‌ರ ‘‘ಸಂವಿಧಾನವನ್ನು ರಚಿಸುವ ಜವಾಬ್ದಾರಿಯನ್ನು ವಹಿಸಲಾಯಿತು’’ ಎಂಬ ಹೇಳಿಕೆಯನ್ನು ಯಾಕೆ ಆಕ್ಷೇಪಿಸಲಿಲ್ಲ? ಆಕ್ಷೇಪಿಸುವುದಿರಲಿ ಅಲ್ಲಿದ್ದ ಎಲ್ಲಾ ಸದಸ್ಯರು ಅಂಬೇಡ್ಕರ್‌ರ ಈ ರಚನಾ ಕಾರ್ಯವನ್ನು ಶ್ಲಾಘಿಸುತ್ತಾ ಹೋದರು! ಹಾಗಿದ್ದರೆ ಇದರ ಅರ್ಥ? ಅಂಬೇಡ್ಕರರು ಬೇರೆಯವರು ಬರೆದಿದ್ದನ್ನು ಪರಿಶೀಲಿಸಿದರೆಂದೇ ಅಥವಾ ಸ್ವತಃ ತಾವೇ ರಚಿಸಿದರೆಂದೇ? ಟೀಕಾಕಾರರು ಉತ್ತರಿಸಬೇಕು.

ಇನ್ನು ಮುಂದಿನ ಅತ್ಯಂತ ಪ್ರಮುಖ ಸಾಕ್ಷಿಯತ್ತ ಬರುವುದಾದರೆ, ಅದರ ಮಾರನೆಯ ದಿನವೇ ಅಂದರೆ 1948 ನವೆಂಬರ್ 5 ರಂದು ಸಭೆಯ ಗೌರವಾನ್ವಿತ ಸದಸ್ಯರಾದ ಟಿ.ಟಿ.ಕೃಷ್ಣಮಾಚಾರಿಯವರು ಹೇಳುವುದು ‘‘ಸಂವಿಧಾನದ ಈ ಮೂಲ ಪಠ್ಯದ ರಚನೆಯ ಕಾರ್ಯದ ಜವಾಬ್ದಾರಿಯನ್ನು ಡಾ.ಅಂಬೇಡ್ಕರ್‌ರವರು ಯಾವ ರೀತಿ ಹೊತ್ತುಕೊಂಡರೆಂದರೆ ಈ ನಿಟ್ಟಿನೆಡೆ ಅವರ ಉತ್ಸಾಹ ಮತ್ತು ಶ್ರಮ ಖಂಡಿತ ನನಗೆ ಅದರ ಅರಿವಿದೆ. ಅಲ್ಲದೆ ಈ ಸಭೆಗೆ ಮತ್ತೊಂದು ವಿಚಾರದ ಅರಿವೂ ಇದೆ. ಅದೆಂದರೆ ಮೂಲಪಠ್ಯ ರಚನಾ ಸಮಿತಿಗೆ ನಾವು ನಾಮನಿರ್ದೇಶನ ಮಾಡಿದ 7 ಜನ ಸದಸ್ಯರಲ್ಲಿ ಒಬ್ಬರು ರಾಜೀನಾಮೆ ನೀಡಿ ಹೊರಟುಹೋದರು. ಅವರ ಸ್ಥಾನಕ್ಕೆ ಮತ್ತೊಬ್ಬರನ್ನು ನೇಮಿಸಲಾಯಿತು. ಒಬ್ಬರು ನಿಧನರಾದರು. ಅವರ ಸ್ಥಾನಕ್ಕೆ ಯಾರನ್ನೂ ನೇಮಿಸಲಿಲ್ಲ. ಹಾಗೆಯೇ ಒಬ್ಬ ಸದಸ್ಯರು ದೂರದ ಅಮೆರಿಕದಲ್ಲಿಯೇ ಉಳಿದರು. ಅವರ ಸ್ಥಾನಕ್ಕೂ ಯಾರನ್ನೂ ನೇಮಿಸಲಿಲ್ಲ. ಈ ನಡುವೆ ಮತ್ತೊಬ್ಬ ಸದಸ್ಯರು ತಮ್ಮ ರಾಜ್ಯದ ವ್ಯವಹಾರಗಳಲ್ಲಿಯೇ ಮುಳುಗಿದರು ಮತ್ತು ಅವರ ಸ್ಥಾನವನ್ನು ಒಂದು ರೀತಿಯ ಶೂನ್ಯತೆ ಆವರಿಸಿಕೊಂಡಿತು. ಅಲ್ಲದೆ ಒಂದಿಬ್ಬರು ಸದಸ್ಯರು ದಿಲ್ಲಿಯಿಂದ ದೂರ ಇದ್ದ ಕಾರಣ ಮತ್ತು ಬಹುಶಃ ಅವರಿಗೆ ಕಾಡಿದ ಅನಾರೋಗ್ಯವು ಸಮಿತಿಯ ಸಭೆಗಳಲ್ಲಿ ಭಾಗವಹಿಸಲು ಅವಕಾಶಕೊಡಲಿಲ್ಲವೆಂದು ಕಾಣುತ್ತದೆ. ಆ ಕಾರಣದಿಂದ ಅವರು ಕೂಡ ದೂರ ಉಳಿದರು. ಅಂತಿಮವಾಗಿ ಸಂವಿಧಾನದ ಮೂಲಪಠ್ಯ ರಚಿಸುವ ಹೊಣೆ ಅಥವಾ ಭಾರ ಡಾ.ಅಂಬೇಡ್ಕರರ್ ಮೇಲೆಯೇ ಬಿದ್ದಿತು. ಆ ಕಾರಣದಿಂದ ನಮ್ಮೆಲ್ಲರ ಪ್ರಶಂಸೆಗೆ ಒಳಗಾಗಿರುವ ಇಂತಹ ಒಂದು ಮಹತ್ತರ ಕೆಲಸವನ್ನು ಸಾಧಿಸಿದ್ದಕ್ಕಾಗಿ ಡಾ.ಅಂಬೇಡ್ಕರರಿಗೆ ನಾವು ಅಕ್ಷರಶಃ ಕೃತಜ್ಞರಾಗಿರಬೇಕು.’’

ಖಂಡಿತ, ಸಂವಿಧಾನ ಅಂಗೀಕರಿಸುವುದಕ್ಕಿಂತ (ನವೆಂಬರ್ 26, 1949) ಒಂದು ವರ್ಷ ಹಿಂದೆಯೇ ಟಿ.ಟಿ.ಕೃಷ್ಣಮಾಚಾರಿಯವರು ಆಡಿರುವ ಈ ಮಾತಗಳನ್ನು ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿ ಅಲ್ಲ ಅಥವಾ ಅವರೊಬ್ಬರಿಗೇ ಆ ಕ್ರೆಡಿಟ್ ಸಲ್ಲುವುದಿಲ್ಲ ಎಂದು ಟೀಕಿಸುವ ಪ್ರತಿಯೊಬ್ಬರೂ ಮತ್ತೆ ಮತ್ತೆ ಓದಬೇಕು. ಮುಂದುವರಿದು ಅದೇ ದಿನ ಅಂದರೆ ಟಿ.ಟಿ.ಕೃಷ್ಣಮಾಚಾರಿಯವರ ನಂತರ ಮಾತನಾಡಿರುವ ಸಂವಿಧಾನ ಸಭೆಯ ಮತ್ತೊಬ್ಬ ಸದಸ್ಯರಾದ ಖಾಜಿ ಕರೀಮುದ್ದೀನ್‌ರವರ ಮಾತುಗಳನ್ನು ಇಲ್ಲಿ ಉಲ್ಲೇಖಿಸಬೇಕಾಗುತ್ತದೆ. ಕರೀಮುದ್ದೀನ್‌ರವರು ಹೇಳುತ್ತಾರೆ, ‘‘ನನಗೆ ಭರವಸೆ ಇದೆ, ಶ್ರೇಷ್ಠ ಸಂವಿಧಾನ ರಚನಾಕಾರ ಡಾ.ಅಂಬೇಡ್ಕರ್ ಎಂದು. ಅಕ್ಷರಶಃ ಅವರ ಹೆಸರು ಮುಂದಿನ ಪೀಳಿಗೆಗಳಲ್ಲಿ ಚಿರಸ್ಥಾಯಿಯಾಗಲಿದೆ.’’ ಒಟ್ಟಾರೆ ಸಂವಿಧಾನ ರಚನೆಯ ಉದ್ದಕ್ಕೂ ದಾಖಲಾಗಿರುವ ಇಂತಹ ಹಲವು ಉಲ್ಲೇಖಗಳಲ್ಲಿ ಇಲ್ಲಿ ಉಲ್ಲೇಖಿಸಲ್ಪಟ್ಟಿರುವುವು ಒಂದೆರಡು ಅಷ್ಟೆ. ಈ ಒಂದೆರಡು ಉಲ್ಲೇಖಗಳೇ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಎಂಬುದಕ್ಕೆ ಈ ಪರಿಯ ಯಾರೂ ಪುಡಿಗಟ್ಟಲಾಗದ ಗಟ್ಟಿ ಸಾಕ್ಷಿಗಳಾಗುತ್ತವೆ. ಈ ಸಾಕ್ಷಿಗಳು ಕೇವಲ 1948 ನವೆಂಬರ್ 4 ಮತ್ತು 5ರ ಸಂವಿಧಾನ ಪ್ರಾರಂಭದ ಓದಿನ ಸಾಕ್ಷಿಗಳಷ್ಟೆ! ಅಂದಹಾಗೆ ಸಂವಿಧಾನ ಅಂತಿಮವಾಗಿ ಅಂಗೀಕಾರವಾದ 1949 ನವೆಂಬರ್ 17 ರಿಂದ 26ರವರೆಗೆ ಘನವೆತ್ತ ಸದಸ್ಯರು ಹೇಳಿರುವ ಮಾತುಗಳು? ಖಂಡಿತ, ಅವುಗಳೆಲ್ಲವನ್ನು ಹೇಳುತ್ತಾ ಹೋದರೆ ಅದೇ ಒಂದು ಸಂವಿಧಾನ ರಚನೆಯ ಹಿನ್ನೆಲೆಯಲ್ಲಿ ಅಂಬೇಡ್ಕರರ ಶ್ರಮದ ವರ್ಣನೆಯ ದೃಶ್ಯಕಾವ್ಯವಾಗಲಿದೆ.

Writer - ರಘೋತ್ತಮ ಹೊ.ಬ, ಮೈಸೂರು

contributor

Editor - ರಘೋತ್ತಮ ಹೊ.ಬ, ಮೈಸೂರು

contributor

Similar News