ಆ.5ರಿಂದ ಜಮ್ಮು-ಕಾಶ್ಮೀರದಲ್ಲಿ ಬಂಧಿತರ ಪೈಕಿ 609 ಜನರು ಈಗಲೂ ಬಂಧನದಲ್ಲಿ:ಕೇಂದ್ರ

Update: 2019-11-27 15:54 GMT

ಹೊಸದಿಲ್ಲಿ, ನ.27: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡ ಆ.5ರಿಂದ ಮುನ್ನೆಚ್ಚರಿಕೆ ಕ್ರಮವಾಗಿ 5,000ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದ್ದು,ಈ ಪೈಕಿ 609 ಜನರು ಈಗಲೂ ಕಸ್ಟಡಿಯಲ್ಲಿದ್ದಾರೆ ಎಂದು ಸಹಾಯಕ ಗೃಹಸಚಿವ ಜಿ.ಕಿಶನ ರೆಡ್ಡಿ ಅವರು ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದರು.

ಆ.5ರಿಂದೀಚಿಗೆ ಪೊಲೀಸ್ ಗೋಲಿಬಾರ್‌ನಲ್ಲಿ ಯಾವುದೇ ಸಾವು ಸಂಭವಿಸಿಲ್ಲ,ಆದರೆ ಕಾನೂನು ಮತ್ತು ಸುವ್ಯವಸ್ಥೆ ಸಂಬಂಧಿತ ಘಟನೆಗಳಲ್ಲಿ 197 ಜನರು ಗಾಯಗೊಂಡಿದ್ದಾರೆ. ಇದೇ ಅವಧಿಯಲ್ಲಿ ಭಯೋತ್ಪಾದನೆ ಸಂಬಂಧಿತ ಘಟನೆಗಳಲ್ಲಿ ಮೂವರು ಭದ್ರತಾ ಪಡೆ ಸಿಬ್ಬಂದಿಗಳು ಮತ್ತು 17 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದರು.

ಶಾಂತಿಭಂಗ ಸೇರಿದಂತೆ ಅಪರಾಧಗಳನ್ನು ತಡೆಯಲು ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ಕಲ್ಲು ತೂರಾಟಗಾರರು,ದುಷ್ಕರ್ಮಿಗಳು,ಪ್ರತ್ಯೇಕತಾವಾದಿಗಳು,ರಾಜಕೀಯ ಕಾರ್ಯಕರ್ತರು ಮತ್ತಿತರರು ಸೇರಿದಂತೆ 5,161 ಜನರನ್ನು ಬಂಧಿಸಲಾಗಿತ್ತು. ಈ ಪೈಕಿ ಸುಮಾರು 218 ಕಲ್ಲು ತೂರಾಟಗಾರರು ಸೇರಿದಂತೆ 609 ಜನರು ಈಗಲೂ ಬಂಧನದಲ್ಲಿದ್ದಾರೆಎಂದರು.

ಈಗಲೂ ಬಂಧನದಲ್ಲಿರುವವರಲ್ಲಿ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ,ಉಮರ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಅವರು ಸೇರಿದ್ದಾರೆ.

ಬಂಡಾಯ ನಿಗ್ರಹ,ಹೆಚ್ಚಿನ ಆಂತರಿಕ ಭದ್ರತೆ ಹಾಗೂ ಕಾನೂನು-ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಜಮ್ಮು-ಕಾಶ್ಮೀರದಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ ರೆಡ್ಡಿ,ಕಣಿವೆಯಲ್ಲಿ ಅಗತ್ಯ ಸೇವೆಗಳು ಸಹಜವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಜಮ್ಮು-ಕಾಶ್ಮೀರ ಸರಕಾರವು ವರದಿ ಮಾಡಿದೆ ಎಂದು ತಿಳಿಸಿದರು.

2015, ನ.7ರಂದು ಪ್ರಕಟಿಸಲಾಗಿದ್ದ 80,068 ಕೋ.ರೂ.ಗಳ ಪ್ರಧಾನ ಮಂತ್ರಿ ಅಭಿವೃದ್ಧಿ ಪ್ಯಾಕೇಜ್‌ನಡಿ ರಸ್ತೆ,ವಿದ್ಯುತ್,ಆರೋಗ್ಯ,ಪ್ರವಾಸೋದ್ಯಮ,ಕೃಷಿ,ತೋಟಗಾರಿಕೆ ಇತ್ಯಾದಿ ಕ್ಷೇತ್ರಗಳಲ್ಲಿ 63 ಪ್ರಮುಖ ಅಭಿವೃದ್ಧಿ ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದ ಅವರು,ಇದರ ಜೊತೆಗೆ ವ್ಯಕ್ತಿಗತ ಫಲಾನುಭವಿ ಕೇಂದ್ರಿತ ಕಾರ್ಯಕ್ರಮಗಳು ಸೇರಿದಂತೆ ಕೇಂದ್ರದ ವಿವಿಧ ಮುಂಚೂಣಿ ಯೋಜನೆಗಳನ್ನು ಜಮ್ಮ-ಕಾಶ್ಮೀರ ಸರಕಾರವು ಜಾರಿಗೊಳಿಸುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News