ಬೆಳವಣಿಗೆ ಕುಂಠಿತಗೊಂಡಿದೆ, ಆದರೆ ಆರ್ಥಿಕ ಹಿಂಜರಿತವಿಲ್ಲ: ವಿತ್ತಸಚಿವೆ ನಿರ್ಮಲಾ ಸೀತಾರಾಮನ್

Update: 2019-11-27 16:37 GMT

ಹೊಸದಿಲ್ಲಿ, ನ.27: ದೇಶದಲ್ಲಿ ಆರ್ಥಿಕ ಬೆಳವಣಿಗೆ ನಿಧಾನಗೊಂಡಿರಬಹುದು,ಆದರೆ ಆರ್ಥಿಕ ಹಿಂಜರಿತವಿಲ್ಲ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಪ್ರತಿಪಾದಿಸಿದರು.

ಆರ್ಥಿಕ ಪ್ರಗತಿಯ ಮಂದಗತಿಯ ಕುರಿತು ಚರ್ಚೆ ಮತ್ತು ಅರ್ಥವ್ಯವಸ್ಥೆಯು ಹಿಂಜರಿತದ ಸ್ಥಿತಿಯಲ್ಲಿದೆ ಎಂಬ ಪ್ರತಿಪಕ್ಷದ ಆರೋಪಕ್ಕೆ ರಾಜ್ಯಸಭೆಯಲ್ಲಿ ಉತ್ತರಿಸುತ್ತಿದ್ದ ಅವರು,ಯಾವುದೇ ಆರ್ಥಿಕ ಹಿಂಜರಿತವಿಲ್ಲ,ಆರ್ಥಿಕ ಹಿಂಜರಿತ ಉಂಟಾಗುವುದೂ ಇಲ್ಲ. ಸರಕಾರವು ತೆಗೆದುಕೊಂಡಿರುವ ಪ್ರತಿಯೊಂದು ಕ್ರಮವನ್ನು ತಾನು ದಾಖಲೆಗಳ ಸಹಿತ ಮಂಡಿಸುತ್ತೇನೆ ಎಂದರು. ಜುಲೈ-ಸೆಪ್ಟೆಂಬರ್ ಅವಧಿಗೆ ಅಧಿಕೃತ ಜಿಡಿಪಿ ಅಂಕಿಅಂಶಗಳ ಬಿಡುಗಡೆಗೆ ಮುನ್ನ ಸೀತಾರಾಮನ್ ಅವರ ಈ ಹೇಳಿಕೆ ಹೊರಬಿದ್ದಿದೆ.

ಪ್ರಧಾನಿ ನರೇಂದ್ರ ಮೋದಿ ಸರಕಾರವು ಬ್ಯಾಂಕಿಂಗ್ ಕ್ಷೇತ್ರದಲ್ಲಿಯ ಒತ್ತಡಗಳನ್ನು ಗುರುತಿಸಿದೆ ಮತ್ತು ಬ್ಯಾಂಕಿಂಗ್ ಕೇತ್ರದಲ್ಲಿಯ ಸಮಸ್ಯೆಗಳನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು.

ಸರಕಾರದ ಹೆಜ್ಜೆಗಳನ್ನು ಸಮರ್ಥಿಸಿಕೊಂಡ ಸೀತಾರಾಮನ್ ಎನ್‌ಡಿಎ ಮತ್ತು ಹಿಂದಿನ ಯುಪಿಎ ಆಡಳಿತಾವಧಿಗಳಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಅಂಕಿಅಂಶಗಳನ್ನು ಹೋಲಿಸಿದರು. 2019ರಲ್ಲಿ ಎಫ್‌ಡಿಐ ಹರಿವು 283.9 ಶತಕೋಟಿ ಡಾ.ಗೆ ಹೆಚ್ಚಿದ್ದರೆ, 2009-2014ರ ಯುಪಿಎ ಅವಧಿಯಲ್ಲಿ ಅದು 189.5 ಶತಕೋಟಿ ಡಾ.ಆಗಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News