ನಾಗರಿಕರ ಮಾಹಿತಿ ಹಕ್ಕನ್ನು ಮೊಟಕುಗೊಳಿಸುವ ನ್ಯಾಯಾಲಯಗಳ ತೀರ್ಪುಗಳು

Update: 2019-11-27 18:27 GMT

ನವೆಂಬರ್ 13ರಂದು ಸುಪ್ರೀಂ ಕೋರ್ಟಿನ ಪಂಚ ಸದಸ್ಯ ನ್ಯಾಯಪೀಠ ವೊಂದು ಸುಭಾಷ್ ಅಗರ್‌ವಾಲ್ ಪ್ರಕರಣದಲ್ಲಿ ತಮ್ಮ ತೀರ್ಪು ನೀಡಿತ್ತು. ಆ ಮೂಲಕ ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮೊಕದ್ದಮೆಯೊಂದನ್ನು ಮುಕ್ತಾಯಗೊಳಿಸಿತು. ಮಾಹಿತಿಗೆ ಸಂಬಂಧಿಸಿ ಸಾರ್ವಜನಿಕ ಹಿತಾಸಕ್ತಿ, ಖಾಸಗಿತನ, ನ್ಯಾಯಾಂಗದ ಸ್ವಾತಂತ್ರ್ಯ ಇತ್ಯಾದಿ ಹಲವು ವಿಷಯಗಳನ್ನು ಆಳವಾಗಿ ಪರಿಶೀಲಿಸಿದ ನ್ಯಾಯಪೀಠದ ತೀರ್ಪು ಅಂತಿಮವಾಗಿ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ (ಸಿಪಿಐಒ) ಮಾಹಿತಿಯನ್ನು ನೀಡುವ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ನೀಡಿದಂತಾಯಿತು.

ಸರಕಾರಿ ನೌಕರರಿಗೆ ಸಂಬಂಧಿಸಿದ ಹಲವಾರು ಮಾಹಿತಿಗಳು ವೈಯಕ್ತಿಕ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅವರ ನೇಮಕಾತಿ, ನಡತೆ, ಅವರ ವಿರುದ್ಧ ಇರುವ ದೂರುಗಳು, ದೂರುಗಳ ವಿಚಾರಣೆ ಇತ್ಯಾದಿಗಳ ಕುರಿತ ಮಾಹಿತಿ ಸರಕಾರದ ಬಳಿ ಇರುತ್ತದೆ. ಸಾರ್ವಜನಿಕರೊಬ್ಬರು ಇಂತಹ ಮಾಹಿತಿ ಕೇಳಿದಾಗ ಬಹುತೇಕ ಸಿಪಿಐಒಗಳು ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(j) ಉಲ್ಲೇಖಿಸಿ ಮಾಹಿತಿ ನೀಡಲು ನಿರಾಕರಿಸುತ್ತಾರೆ. ದಶಕಗಳ ಲಾಗಾಯ್ತು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವಿವರಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ. ಇವುಗಳಲ್ಲಿ ತಮ್ಮ ಕ್ರಿಮಿನಲ್ ಇತಿಹಾಸ (ಏನಾದರೂ ಇದ್ದಲ್ಲಿ)ವನ್ನು ನಮೂದಿಸಬೇಕಾಗುತ್ತದೆ. ತಾವು ಯಾರಿಗೆ ಮತ ನೀಡುತ್ತಿದ್ದೇವೆಂದು ಮತದಾರರಿಗೆ ತಿಳಿಯುವ ಹಕ್ಕು ಇದೆ ಎಂಬ ನೆಲೆಯಲ್ಲಿ ಈ ವೈಯಕ್ತಿಕ ಮಾಹಿತಿಯನ್ನು ಅಭ್ಯರ್ಥಿ ಬಹಿರಂಗಪಡಿಸಬೇಕಾಗುತ್ತದೆ.

ಆದರೆ ಆರ್‌ಟಿಐ ನಿಯಮಗಳ ಪ್ರಕಾರ ಕಾರ್ಯಾಂಗ ಹಾಗೂ ನ್ಯಾಯಾಂಗ ಸದಸ್ಯರ ಬಗ್ಗೆ ಇಂತಹ ಮಾಹಿತಿಯನ್ನು ಹೇಳಬೇಕಾದರೆ ಆ ಮಾಹಿತಿ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಅಗತ್ಯವೆಂದು ಮಾಹಿತಿ ಕೇಳುವ ನಾಗರಿಕ ಮೊದಲು ಸಾಬೀತುಪಡಿಸಬೇಕಾಗುತ್ತದೆ ಅಥವಾ ಅದು ನ್ಯಾಯಾಧೀಶರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುವುದಿಲ್ಲ ಎಂದು ಸಾಬೀತುಪಡಿಸಬೇಕಾಗುತ್ತದೆ. ನಮ್ಮ ದೇಶದಲ್ಲಿ ಆರ್‌ಟಿಐ ತನ್ನ ಅಸ್ತಿತ್ವದ 15ನೇ ವರ್ಷಕ್ಕೆ ಕಾಲಿಟ್ಟಿದೆ. ಕೇಂದ್ರ ಸರಕಾರ ಫೈಲ್ ನೋಟಿಂಗ್ ಗಳನ್ನು ಬಹಿರಂಗಪಡಿಸಲು ನಿರಾಕರಿಸಿದಾಗ ಆರ್‌ಟಿಐಗೆ ಮೊದಲ ಸವಾಲು ಎದುರಾಯಿತು. ಕೊಲಿಜಿಯಂನ ಕಾರ್ಯವಿಧಾನಗಳ ಬಗ್ಗೆ ಸುಭಾಷ್ ಅಗರ್‌ವಾಲ್ ಸುಪ್ರೀಂಕೋರ್ಟ್‌ನಿಂದ ಮಾಹಿತಿ ಕೇಳಿದಾಗ ಅದಕ್ಕೆ ಎರಡನೇ ಸವಾಲು ಎದುರಾದಂತಾಯಿತು. ಭಾರತದ ಮುಖ್ಯ ನ್ಯಾಯಾಧೀಶರು ಓರ್ವ ಸಾರ್ವಜನಿಕ ಅಧಿಕಾರಿ (ಪ್ರಾಧಿಕಾರ) ಎಂಬ ನೆಲೆಯಲ್ಲಿ ಅಗರ್‌ವಾಲ್‌ಗೆ ಮಾಹಿತಿಯನ್ನು ನಿರಾಕರಿಸಲಾಯಿತು.

ರಾಜಕೀಯ ಪಕ್ಷಗಳನ್ನು ಆರ್‌ಟಿಐ ವ್ಯಾಪ್ತಿಯಲ್ಲಿ ತರುವ ಸಿಐಸಿಯ ಆಜ್ಞೆಯನ್ನು ಉಲ್ಲಂಘಿಸಿ ಆ ಆಜ್ಞೆಗೆ ಬೆಲೆಕೊಡದಾ ಸಿಇಸಿಯಿಂದ ಏನೂ ಮಾಡಲಾಗಲಿಲ್ಲ. ಇದು ಆರ್‌ಟಿಐ ಎದುರಿಸಿದ ಮೂರನೇ ಸವಾಲು.

ನ್ಯಾಯಾಂಗದ ಜೊತೆ ಆರ್‌ಟಿಐ ಸಂಬಂಧ ಮೊದಲಿನಿಂದಲೂ ಚೆನ್ನಾಗಿರಲಿಲ್ಲ. ಆರ್‌ಟಿಐ ಕಾಯ್ದೆಯು ತನ್ನ ಆಜ್ಞೆಗಳನ್ನು ಕಾರ್ಯರೂಪಕ್ಕಿಳಿಸುವ ಅಧಿಕಾರವನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಹಾಗೂ ಹೈಕೋರ್ಟ್‌ಗಳ ನ್ಯಾಯಾಧೀಶರಿಗೆ ನೀಡಿತು. ಅಂದಿನಿಂದ ಈ ಎಲ್ಲ ನ್ಯಾಯಾಲಯಗಳು ತಮ್ಮದೇ ಆದ ನಿಯಮಗಳನ್ನು ರಚಿಸಿಕೊಂಡವು. ಸುಪ್ರೀಂ ಕೋರ್ಟ್ ಕೇಂದ್ರ ಸರಕಾರದ ಸಿಬ್ಬಂದಿಗೆ ಆರ್‌ಟಿಐ ಸ್ನೇಹಿ ನಿಯಮಗಳನ್ನು ರಚಿಸಿದರೆ, ಹಲವು ಹೈಕೋರ್ಟ್‌ಗಳು ನಾಗರಿಕರಿಗೆ ಯಾವುದೇ ಮಾಹಿತಿ ಸಿಗುವುದು ಬಹುತೇಕ ಅಸಾಧ್ಯವಾಗುವಂತಹ ಆರ್‌ಟಿಐ ಸ್ನೇಹಿ ಅಲ್ಲದ ನಿಯಮಗಳನ್ನು ರಚಿಸಿದವು. ಉದಾಹರಣೆಗೆ, ಮಾಹಿತಿಯ ತುಣುಕೊಂದಕ್ಕೆ ಹತ್ತು ರೂಪಾಯಿ ಶುಲ್ಕ ನೀಡಬೇಕೆಂದು ಸುಪ್ರೀಂಕೋರ್ಟ್ ನಿಗದಿಪಡಿಸಿದೆ. ಆದರೆ ಅಲಹಾಬಾದ್ ಹೈಕೋರ್ಟ್ ನಾಗರಿಕನೊಬ್ಬ ಪಡೆಯಬಯಸುವ ಮಾಹಿತಿಯ ಪ್ರತಿ ತುಣುಕಿಗೆ ಐನೂರು ರೂಪಾಯಿ ಠೇವಣಿ ಇಡಬೇಕೆಂದು ಹೇಳಿದೆ. ಒಟ್ಟಿನಲ್ಲಿ ಮಾಹಿತಿಯನ್ನು ಪಡೆಯುವುದು ಕಷ್ಟ ಸಾಧ್ಯವಾಗಿದೆ.

ಆರ್‌ಟಿಐ ಕಾಯ್ದೆಯು ತಮ್ಮ ತಮ್ಮ ಕಾರ್ಯವ್ಯಾಪ್ತಿಯ ಕ್ಷೇತ್ರಗಳಲ್ಲಿ ಮಾಹಿತಿ ಆಯೋಗಗಳಿಗೇ ಗರಿಷ್ಠ ಅಧಿಕಾರ ನೀಡಿದೆ. ಮಾಹಿತಿ ಕಾರ್ಯಕರ್ತರಿಗೆ ಅವುಗಳಿಂದ ಅವರು ಬಯಸಿದ ಮಾಹಿತಿ ಸಿಗದಾಗ ಅವರು ಹೈಕೋರ್ಟ್ ಗಳಿಗೆ ಹಾಗೂ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಳ್ಳಬಹುದಾಗಿದೆ. ಆದರೂ, ಬಹುತೇಕ ಪ್ರಕರಣಗಳಲ್ಲಿ ನ್ಯಾಯಾಲಯಗಳು ಮಾಹಿತಿ ಪಡೆಯುವ ಕುರಿತು ನೀಡಿದ ವಿನಾಯಿತಿಗಳು ನಾಗರಿಕನಿಗೆ ಇರುವ ಸರಕಾರದಿಂದ ಮಾಹಿತಿ ಪಡೆಯುವ ಹಕ್ಕನ್ನು ಬಲಪಡಿಸುವುದಕ್ಕೆ ಬದಲಾಗಿ ಮಾಹಿತಿ ನೀಡದಿರುವ ಸರಕಾರಿ ಅಧಿಕಾರಿಗಳ ನಿರ್ಧಾರವನ್ನು ಬಲಪಡಿಸಿವೆ.

ಗಿರೀಶ ದೇಶಪಾಂಡೆ ಪ್ರಕರಣದಲ್ಲಿ ಸರಕಾರ ಮತ್ತು ಅದರ ನೌಕರರ ನಡುವಿನ ಸಂಬಂಧ ವೈಯಕ್ತಿಕವಾದ ಒಂದು ಸಂಬಂಧ; ಆದ್ದರಿಂದ ಓರ್ವ ಸರಕಾರಿ ನೌಕರನ ಕುರಿತಾದ ಯಾವುದೇ ಮಾಹಿತಿಯನ್ನು ಹೊರಗೆಡಹುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಮಾಹಿತಿ ಬಹಿರಂಗಪಡಿಸಬೇಕಾದಲ್ಲಿ ಮಾಹಿತಿ ಕೋರಿದ ವ್ಯಕ್ತಿ ಆ ಮಾಹಿತಿ ಸಾರ್ವಜನಿಕ ಹಿತಾಸಕ್ತಿಯ ವಿಷಯವೆಂದು ಮೊದಲು ರುಜುವಾತು ಪಡಿಸಬೇಕೆಂದು ಅದು ಹೇಳಿತು. ಆರ್‌ಟಿಐ ಕಾಯ್ದೆ ಸೆಕ್ಷನ್ 8(1)(j)ಯ ಈ ಅರ್ಥ ವಿವರಣೆಯ ಪ್ರಕಾರ ಸರಕಾರಿ ನೌಕರರೊಬ್ಬರ ವಿರುದ್ಧ ತೆಗೆದುಕೊಂಡ ಶಿಸ್ತು ಕ್ರಮದ ವಿವರಗಳನ್ನು ಕೂಡ ಮಾಹಿತಿ ಅಧಿಕಾರಿ ಹೊರಗೆಡುಹುವಂತಿಲ್ಲ. ಆತ ಆ ಮಾಹಿತಿಯನ್ನು ಸಾರ್ವಜನಿಕ ಹಿತಾಸಕ್ತಿ ಪರೀಕ್ಷೆಗೆ ಒಳಪಡಿಸಿದ ಬಳಿಕವಷ್ಟೇ ನೀಡಬಹುದು. ಆ ಆಜ್ಞೆ ಈಗ ಬಹಳ ಜನಪ್ರಿಯವಾಗಿದೆ. ಇದನ್ನು ಉಲ್ಲೇಖಿಸಿ ಹಲವಾರು ಆರ್‌ಟಿಐ ಅರ್ಜಿಗಳನ್ನು ತಳ್ಳಿ ಹಾಕಲಾಗುತ್ತಿದೆ.

ಹೀಗೆ ಹೈಕೋರ್ಟ್‌ಗಳು ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ಹಲವು ತೀರ್ಪುಗಳು, ಆಜ್ಞೆಗಳು ಮಾಹಿತಿ ಬಯಸುವ ನಾಗರಿಕರ ಹಕ್ಕನ್ನು ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಮೊಟಕುಗೊಳಿಸಿವೆ.


ಕೃಪೆ: The Indian Express  

Writer - ಸತ್ಯಾನಂದ ಮಿಶ್ರಾ

contributor

Editor - ಸತ್ಯಾನಂದ ಮಿಶ್ರಾ

contributor

Similar News