ಬ್ರಹ್ಮಚಾರಿ: ಬ್ರಹ್ಮಚಾರಿಗಳ ಹಿತಕ್ಕಾಗಿ ಜಾರಿ..!

Update: 2019-11-30 18:32 GMT

ಚಿತ್ರದ ಹೆಸರು ಬ್ರಹ್ಮಚಾರಿ ಎಂದು ಇದ್ದರೂ ಇದು ನವವಿವಾಹಿತನೋರ್ವನ ಕತೆ. ಆದರೆ ಕಟ್ಟಾ ಬ್ರಹ್ಮಚಾರಿಯಾಗಿದ್ದ ಆತ ಮದುವೆಯ ಬಳಿಕ ಎದುರಿಸಬೇಕಾಗಿ ಬರುವ ಸನ್ನಿವೇಶಗಳೇನು ಎನ್ನುವುದನ್ನು ರಸವತ್ತಾಗಿ ಹೇಳಿರುವ ಚಿತ್ರ ಇದು.

ಚಿತ್ರದ ನಾಯಕನ ಹೆಸರು ರಾಮ. ಆತ ಹೆಸರಿಗೆ ತಕ್ಕಂತೆ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಪರಮ ಭಕ್ತ. ಅಂದರೆ ಹನುಮಾನನಂತೆ ಬ್ರಹ್ಮಚರ್ಯದಲ್ಲಿ ತೃಪ್ತಿ ಕಂಡವನು. ಅದಕ್ಕೂ ಒಂದು ಕಾರಣವಿರುತ್ತದೆ. ಆತನ ತಂದೆ ಪರಸ್ತ್ರೀ ಹಿಂದೆ ಹೋದ ಕಾರಣಕ್ಕಾಗಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ತಬ್ಬಲಿಯಾಗಬೇಕಾಗಿ ಬಂದ ಕಂದಮ್ಮ ರಾಮ್ ನನ್ನು ಅಜ್ಜಿ ತಂದೆಯ ಗುಣಗಳ ನೆರಳು ಸೋಕದಂತೆ ಬೆಳೆಸುತ್ತಾರೆ. ಹಾಗಾಗಿ ಬಾಲ್ಯದಿಂದಲೇ ಹೆಣ್ಣುಮಕ್ಕಳ ಜತೆಗೆ ಎಂದಿಗೂ ಬೆರೆಯದಂಥ ಪಾತ್ರ ಅದು. ಸರಕಾರಿ ಕಚೇರಿಯೊಂದರಲ್ಲಿ ಗುಮಾಸ್ತನಾಗಿರುವ ರಾಮ ನಿಜಕ್ಕೂ ಸದ್ಗುಣ ಸಂಪನ್ನ. ಆದರೆ ಸದ್ಗುಣ, ತಕ್ಕಮಟ್ಟಿನ ಸೌಂದರ್ಯ, ಸರಕಾರಿ ಕೆಲಸ ಇದ್ದರೂ ಒಂದೊಳ್ಳೆಯ ಹೆಣ್ಣು ವಧುವಾಗಿ ಸಿಗುತ್ತಿಲ್ಲವೆಂಬ ಕೊರಗು ಆತನದು. ಆದರೆ ಆತನ ಇಬ್ಬರು ಸ್ನೇಹಿತರು ಹೆಣ್ಣು ಮಕ್ಕಳನ್ನು ಕಂಡರೆ ಮೈಮರೆತು ಹೋಗುವವರು. ಅವರು ಕೂಡ ರಾಮನಿಗೆ ಹುಡುಗಿ ಹುಡುಕುವ ಪ್ರಯತ್ನ ನಡೆಸುತ್ತಾರೆ. ರಾಮನಿರುವ ವಠಾರದಲ್ಲೇ ಹುಡುಗಿಯೊಬ್ಬಳು ಆತನ ಬೆನ್ನಹಿಂದೆ ಬಂದಿದ್ದರೂ, ರಾಮನಿಗೆ ಇಷ್ಟವಾಗಿರುವುದಿಲ್ಲ. ಆದರೆ ಸುನೀತಾ ಕೃಷ್ಣಮೂರ್ತಿ ಎನ್ನುವ ಬರಹಗಾರ್ತಿಯ ‘ಮೊದಲ ಅನುಭವ ಮದುವೆ ನಂತರ’ ಪುಸ್ತಕ ಓದಿದ ಮೇಲೆ ಆಕೆಯನ್ನು ಇಷ್ಟಪಡುತ್ತಾನೆ. ಆಕೆಯ ಪುಸ್ತಕಗಳ ಮಾರಾಟಕ್ಕೆ ಸಹಾಯ ಮಾಡುತ್ತಾನೆ. ಇದರ ನಡುವೆ ಆಕೆಯೂ ಸಹ ರಾಮನನ್ನು ಪ್ರೀತಿಸತೊಡಗುತ್ತಾಳೆ. ಮದುವೆ ಮಾತುಕತೆ ನಡೆಯುತ್ತದೆ. ಅಲ್ಲಿಂದ ರೋಮಾಂಚನಕಾರಿ ತಿರುವುಗಳಿರುತ್ತವೆ. ಅವುಗಳನ್ನೆಲ್ಲ ಪರದೆಯ ಮೇಲೆ ನೋಡಿದರೆ ಮನೋರಂಜನೀಯ.

ರಾಮನಾಗಿ ನೀನಾಸಂ ಸತೀಶ್ ಎಂದಿನಂತೆ ಆಕರ್ಷಕ ನಟನೆ ನೀಡಿದ್ದಾರೆ. ಏನಾದರೊಂದು ಐಬು ಇರುವ ಪಾತ್ರಗಳಿಗೆ ಸದಾ ಜೀವ ತುಂಬುವಲ್ಲಿ ಅವರು ಪಡೆದಿರುವ ಚಾಕಚಕ್ಯತೆಯನ್ನು ಇಲ್ಲಿಯೂ ಮುಂದುವರಿಸಿದ್ದಾರೆ. ಸರಕಾರಿ ಗುಮಾಸ್ತನಾದರೂ ಐಟಿ ವೃತ್ತಿಯವರ ಹಾಗೆ ನೋಟದಲ್ಲಿ ಕೂಡ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಮದುವೆಯ ಬಳಿಕದ ತಮ್ಮ ಸಮಸ್ಯೆಯನ್ನು ಪತ್ನಿಯಿಂದ ಅಡಗಿಸಲು ನಡೆಸುವ ಪ್ರಯತ್ನವನ್ನು ಲೀಲಾಜಾಲವಾಗಿ ಅಭಿನಯಿಸಿ ತೋರಿಸಿದ್ದಾರೆ. ಅವರಿಗೆ ಜೋಡಿಯಾಗಿ ಲೇಖಕಿ ಸುನೀತಾ ಕೃಷ್ಣಮೂರ್ತಿಯ ಪಾತ್ರದಲ್ಲಿ ಅದಿತಿ ಪ್ರಭುದೇವ ಅದ್ಭುತವಾಗಿದ್ದಾರೆ. ರಿಸರ್ವ್ಡ್ ಆಗಿರುವ ಸಾಮಾನ್ಯ ಲೇಖಕಿಯ ಕಂಜೂಸಿತನಗಳನ್ನು, ಪತ್ನಿ ಮೇಲಿನ ಪ್ರೀತಿ, ಆಸಕ್ತಿ ಮತ್ತು ಹತಾಶೆಗಳನ್ನು ವ್ಯಕ್ತಪಡಿಸುವಲ್ಲಿ ಗೆದ್ದಿದ್ದಾರೆ. ರಾಮನ ಸ್ನೇಹಿತರ ಪಾತ್ರಗಳಾಗಿ ಶಿವರಾಜ್ ಕೆ. ಆರ್. ಪೇಟೆ ಮತ್ತು ಅಶೋಕ್ ಶರ್ಮ ನಗಿಸುತ್ತಾರೆ. ಮಾವನಾಗಿ ಅಚ್ಯುತ್ ಕುಮಾರ್ ಕೂಡ ಸಾಂದರ್ಭಿಕ ಹಾಸ್ಯದ ಸೃಷ್ಟಿಗೆ ಕಾರಣವಾಗಿದ್ದಾರೆ. ಪದ್ಮಜಾ ರಾವ್ ಧಾರಾವಾಹಿ ಪ್ರಿಯಾ ಅತ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ನಲ್ಲಿ ಪೋಲಿಯಂತೆ ಕಾಣಿಸಿದ್ದ ಡಾಕ್ಟರ್ ದತ್ತಣ್ಣ ಚಿತ್ರದಲ್ಲಿ ್ರಧಾನ ಪಾತ್ರವನ್ನೇ ನಿರ್ವಹಿಸಿದ್ದಾರೆ. ಧರ್ಮವಿಶ್ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಅಜ್ಜಿಯ ಪಾತ್ರವನ್ನು ಗಿರಿಜಾ ಲೋಕೇಶ್ ನಿಭಾಯಿಸಿದ್ದಾರೆ.

ಸರಾಗವಾಗಿ ನೋಡಿಸಿಕೊಂಡು ಹೋಗುವ ಚಿತ್ರದ ಕ್ಲೈಮ್ಯಾಕ್ಸ್ ನೀರಸವೆನಿಸುತ್ತದೆ. ಚಿತ್ರದ ಪೂರ್ತಿ ನಗಿಸಿದ ನಿರ್ದೇಶಕ ಚಂದ್ರಮೋಹನ್ ಕೊನೆಗೆಲ್ಲೋ ತುಸು ಹಿಡಿತ ಕಳೆದುಕೊಂಡಂತಿದೆ. ನಾಯಕಿ ಬರೆದ ‘ಮೊದಲ ಅನುಭವ ಮದುವೆ ನಂತರ’ ಪುಸ್ತಕದಲ್ಲಿ ಏನಿತ್ತು ಎನ್ನುವುದನ್ನು ನಿರ್ದೇಶಕರು ಹೇಳುವುದೇ ಇಲ್ಲ! ಒಂದು ರೀತಿ ವಯಸ್ಕರ ವಿಚಾರವೇ ಕಥಾವಸ್ತುವಾದರೂ ತೀರ ಇರಿಸುಮುರಿಸಾಗುವ ಸನ್ನಿವೇಶಗಳು ಚಿತ್ರದಲ್ಲಿ ಇಲ್ಲ ಎನ್ನುವುದೇ ಚಿತ್ರಕ್ಕೆ ಯುಎ ಪ್ರಮಾಣಪತ್ರ ನೀಡಿದೆ ಎನ್ನಬಹುದು. ಒಟ್ಟಿನಲ್ಲಿ ಚಿತ್ರವನ್ನು ಬ್ರಹ್ಮಚಾರಿಗಳು ಮಾತ್ರವಲ್ಲ, ಪ್ರೇಮಿಗಳು ಮತ್ತು ನವವಿವಾಹಿತರು ಕೂಡ ಮನಸಾರೆ ಮೆಚ್ಚುವುದು ಖಚಿತ.

ಚಿತ್ರ: ಬ್ರಹ್ಮಚಾರಿ
 ತಾರಾಗಣ : ನೀನಾಸಂ ಸತೀಶ್, ಅದಿತಿ ಪ್ರಭುದೇವ
 ನಿರ್ದೇಶನ : ಚಂದ್ರಮೋಹನ
 ನಿರ್ಮಾಣ : ಉದಯ್ ಕೆ. ಮೆಹ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News