ಕೇಂದ್ರ ಸರಕಾರವನ್ನು ಟೀಕಿಸಲು ಜನರು ಹೆದರುತ್ತಿದ್ದಾರೆ: ಅಮಿತ್ ಶಾಗೆ ಉದ್ಯಮಿ ರಾಹುಲ್ ಬಜಾಜ್

Update: 2019-12-01 15:46 GMT

ಹೊಸದಿಲ್ಲಿ, ಡಿ.1: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಟೀಕಿಸಲು ಜನರು ಭಯಪಡುತ್ತಿದ್ದಾರೆ ಎಂದು ಖ್ಯಾತ ಉದ್ಯಮಿ ಮತ್ತು ಬಜಾಜ್ ಗ್ರೂಪ್ ನ ರಾಹುಲ್ ಬಜಾಜ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮುಂದೆ ಆತಂಕ ವ್ಯಕ್ತಪಡಿಸಿದ್ದಾರೆ.

ಮುಂಬೈಯಲ್ಲಿ ಇಕನಾಮಿಕ್ ಟೈಮ್ಸ್ ಆಯೋಜಿಸಿದ್ದ 'ಇಟಿ' ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರಾಹುಲ್ ಬಜಾಜ್ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಮತ್ತು ಪಿಯೂಷ್ ಗೋಯಲ್ ರನ್ನು ಉದ್ದೇಶಿಸಿ ಮಾತನಾಡಿದರು.

"ಯುಪಿಎ-2ರ ಅವಧಿಯಲ್ಲಿ ನಾವು ಯಾರನ್ನು ಬೇಕಾದರೂ ಟೀಕಿಸಬಹುದಿತ್ತು. ನೀವು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೀರಿ. ಆದರೆ ನಾವು ನಿಮ್ಮನ್ನು ಬಹಿರಂಗವಾಗಿ ಟೀಕಿಸಲು ಮುಂದಾದರೆ, ನೀವು ಅದನ್ನು ಮೆಚ್ಚಬಹುದು ಎನ್ನುವ ಯಾವುದೇ ಭರವಸೆ ನಮಗಿಲ್ಲ. ನಾನು ಹೇಳಿದ್ದರಲ್ಲಿ ತಪ್ಪಿರಬಹುದು. ಆದರೆ ಎಲ್ಲರಿಗೂ ಹೀಗೆ ಅನಿಸುತ್ತಿದೆ. ಉದ್ಯಮ ರಂಗದ ಯಾರೊಬ್ಬರೂ ಈ ವಿಚಾರಗಳನ್ನೆತ್ತುವುದಿಲ್ಲ" ಎಂದವರು ಹೇಳಿದರು.

ಮುಂದುವರಿದು ಮಾತನಾಡಿದ ಅವರು, ಪ್ರಧಾನಿ ಮೋದಿಯವರು 'ನಾನು ಆಕೆಯನ್ನು ಕ್ಷಮಿಸಲಾರೆ' ಎಂದು ಹೇಳಿದ ನಂತರವೂ ಪ್ರಜ್ಞಾ ಸಿಂಗ್ ರನ್ನು ರಕ್ಷಣಾ ಸಮಿತಿಯ ಸದಸ್ಯೆಯನ್ನಾಗಿ ಆಯ್ಕೆ ಮಾಡಲಾಗಿತ್ತು ಎಂದರು.

ಇದೇ ಸಂದರ್ಭ ಅವರು ದೇಶದಲ್ಲಿ ನಡೆಯುತ್ತಿರುವ ಗುಂಪು ಹತ್ಯೆಗಳ ಬಗ್ಗೆ  ಆತಂಕ ವ್ಯಕ್ತಪಡಿಸಿದರು. "ನಾವು ಕೆಲವೊಂದು ವಿಚಾರಗಳನ್ನು ಹೇಳಲು ಬಯಸುವುದಿಲ್ಲ. ಆದರೆ ಯಾರೊಬ್ಬರೂ ಶಿಕ್ಷೆಗೊಳಗಾಗಿರುವುದನ್ನು ಇದುವರೆಗೂ ನಾವು ನೋಡಿಲ್ಲ" ಎಂದು ರಾಹುಲ್ ಹೇಳಿದರು.

‘ನಾನು ಹುಟ್ಟಾ ಆಡಳಿತ ವ್ಯವಸ್ಥೆಯ ವಿರೋಧಿಯಾಗಿದ್ದೇನೆ. ಹೀಗಾಗಿ ನನ್ನ ಕಳವಳಗಳು ಸಣ್ಣ ಸಂಗತಿಗಳು ’ಎಂಬ ವ್ಯಂಗ್ಯದೊಂದಿಗೆ ಮಾತನ್ನು ಆರಂಭಿಸಿದ್ದ ಬಜಾಜ್,ಇಂದು ಯಾರನ್ನು ಬೇಕಾದರೂ ದೇಶಭಕ್ತ ಎಂದು ಕರೆಯಬಹುದು. ಗಾಂಧೀಜಿಯನ್ನು ಕೊಂದಿದ್ದ ವ್ಯಕ್ತಿ ಯಾರು ಎನ್ನುವುದು ನಿಮಗೆ ಗೊತ್ತಿದೆ ಅಥವಾ ಆ ಬಗ್ಗೆ ಏನಾದರೂ ಶಂಕೆ ಇದೆಯೇ? ನನಗೆ ಗೊತ್ತಿಲ್ಲ. ಇದನ್ನು ಪ್ರಜ್ಞಾ ಠಾಕೂರ್ ಮೊದಲೂ ಹೇಳಿದ್ದರು,ನೀವು ಅವರಿಗೆ ಟಿಕೆಟ್ ನೀಡಿದಿರಿ,ಆಕೆ ಗೆದ್ದರು...ಸರಿ. ನಿಮ್ಮ ಬೆಂಬಲದಿಂದಾಗಿ ಅವರು ಗೆದ್ದರು,ಅವರ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ.ಅವರನ್ನು ಸಂಸದೀಯ ಸಮಿತಿಯ ಸದಸ್ಯೆಯಾಗಿಯೂ ನೇಮಕಗೊಳಿಸಿದಿರಿ. ತನಗೆ ಪ್ರಜ್ಞಾ ಠಾಕೂರರನ್ನು ಕ್ಷಮಿಸುವುದು ಕಷ್ಟವಾಗುತ್ತದೆ ಎಂದು ಪ್ರಧಾನಿಗಳು ಹೇಳಿದ್ದರು,ಆದರೂ ನೀವು ಅವರಿಗೆ ವಿವಿಧ ಸ್ಥಾನಮಾನಗಳನ್ನು ದಯಪಾಲಿಸಿದಿರಿ. ಇದು ಒಂದು ಉದಾಹರಣೆಯಷ್ಟೇ ಎಂದರು.

ಈ ಸಂದರ್ಭ ಕೇಂದ್ರ ಸಚಿವರು ವೇದಿಕೆಯಲ್ಲಿ ಉಪಸ್ಥಿತರಿದ್ದು ದೇಶದ ಕೆಲವು ಉನ್ನತ ಕೈಗಾರಿಕೋದ್ಯಮಿಗಳಿಂದ ಪ್ರಶ್ನೆಗಳನ್ನೆದುರಿಸುತ್ತಿದ್ದರು. ರಿಲಯನ್ಸ್ ಅಧ್ಯಕ್ಷ ಮುಕೇಶ ಅಂಬಾನಿ,ಭಾರ್ತಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಸುನಿಲ ಭಾರ್ತಿ ಮಿತ್ತಲ್ ಮತ್ತು ಆದಿತ್ಯ ಬಿರ್ಲಾ ಗ್ರೂಪ್‌ನ ಮುಖ್ಯಸ್ಥ ಕುಮಾರ ಮಂಗಲಂ ಬಿರ್ಲಾರಂತಹ ಉದ್ಯಮಿಗಳು ಸಭಿಕರಲ್ಲಿದ್ದರು.

ಗುಂಪಿನಿಂದ ಥಳಿಸಿ ಹತ್ಯೆಗಳು ಅಸಹಿಷ್ಣುತೆಯ ವಾತಾವರಣವನ್ನು ಸೃಷ್ಟಿಸಿವೆ. ನಾವು ಭಯಗೊಂಡಿದ್ದೇವೆ. ಕೆಲವು ವಿಷಯಗಳನ್ನು ಹೇಳಲು ನಾವು ಬಯಸುವುದಿಲ್ಲ,ಆದರೆ ಇಂತಹ ಪ್ರಕರಣಗಳಲ್ಲಿ ಈವರೆಗೆ ಯಾರಿಗೂ ಶಿಕ್ಷೆಯಾಗಿಲ್ಲ ಎನ್ನುವುದನ್ನು ನಾವು ನೋಡುತ್ತಿದ್ದೇವೆ ಎಂದು ಬಜಾಜ್ ಕುಟುಕಿದರು.

ಶಾ ಉತ್ತರ

ಬಜಾಜ್ ಅವರ ಟೀಕೆಗಳಿಗೆ ಪ್ರತಿಕ್ರಿತಿಯಿಸಿದ ಶಾ, ಹಲವಾರು ಮಾಧ್ಯಮ ಸಂಸ್ಥೆಗಳು ಮೋದಿ ಮತ್ತು ಪ್ರಸಕ್ತ ಸರಕಾರದ ವಿರುದ್ಧ ಬರೆಯುವುದನ್ನು ಮುಂದುವರಿಸಿವೆ ಎಂದು ಅವರು ಬೆಟ್ಟು ಮಾಡಿದರು. ಆದಾಗ್ಯೂ ಒಂದು ರೀತಿಯ ವಾತವರಣವಿದೆ ಎಂದು ನೀವು ಹೇಳಿದರೆ ಅದನ್ನು ಸುಧಾರಿಸಲು ನಾವು ಪ್ರಯತ್ನಿಸುತ್ತೇವೆ. ಯಾರೂ ಹೆದರಿಕೊಳ್ಳಬೇಕಿಲ್ಲ. ಯಾವುದೇ ಟೀಕೆಯ ಬಗ್ಗೆ ಕಳವಳ ಪಡುವಂಥದ್ದೇನೂ ನಾವು ಮಾಡಿಲ್ಲ. ಸರಕಾರವು ಅತ್ಯಂತ ಪಾರದರ್ಶಕವಾಗಿದೆ. ಯಾವುದೇ ಬಗೆಯ ವಿರೋಧದ ಬಗ್ಗೆ ನಮಗೆ ಹೆದರಿಕೆಯಿಲ್ಲ. ಯಾರಾದರೂ ಟೀಕಿಸಿದರೆ ಅದರಲ್ಲಿಯ ಧನಾತ್ಮಕ ಅಂಶವನ್ನು ಕಂಡುಕೊಂಡು ನಮ್ಮನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಗೋಡ್ಸೆ ಕುರಿತು ಠಾಕೂರ್ ಹೇಳಿಕೆ ಬಗ್ಗೆ ಶಾ,ಅವರ ಯಾವುದೇ ಹೇಳಿಕೆಯನ್ನು ಬಿಜೆಪಿ ಅಥವಾ ಕೇಂದ್ರ ಬೆಂಬಲಿಸಿಲ್ಲ ಮತ್ತು ಅವುಗಳನ್ನು ಖಂಡಿಸಿವೆ ಎಂದರು. ಠಾಕೂರ್ ಆ ಮಾತನ್ನು ಹೇಳಿದ್ದು ಗೋಡ್ಸೆ ಕುರಿತೋ ಅಥವಾ ಕ್ರಾಂತಿಕಾರಿ ಉಧಮ ಸಿಂಗ್ ಕುರಿತೋ ಎಂಬ ಬಗ್ಗೆ ಗೊಂದಲವಿದೆ ಎಂದು ಅದೇ ಉಸಿರಿನಲ್ಲಿ ಹೇಳಿದರು.

ಗುಂಪಿನಿಂದ ಥಳಿಸಿ ಹತ್ಯೆಗಳು ಹಿಂದೆಯೂ ನಡೆಯುತ್ತಿದ್ದವು,ಈಗಲೂ ನಡೆಯುತ್ತಿವೆ. ಬಹುಶಃ ಈಗ ಮೊದಲಿಗಿಂತ ಕಡಿಮೆ ಸಂಖ್ಯೆಯಲ್ಲಿ ನಡೆಯುತ್ತಿವೆ. ಹಲವಾರು ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆೆ ಶಿಕ್ಷೆಯೂ ಆಗಿದೆ. ಆದರೆ ಮಾಧ್ಯಮಗಳು ಇದನ್ನು ಪ್ರಕಟಿಸುತ್ತಿಲ್ಲ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News