ವರುಣ್ ಧವನ್‌ಗೆ ಸ್ಟಂಟ್ ತಂದ ಸಂಕಷ್ಟ

Update: 2019-12-01 07:14 GMT

ಬಾಲಿವುಡ್‌ನ ಜನಪ್ರಿಯ ಯುವನಟ ವರುಣ್‌ಧವನ್ ಸ್ಟಂಟ್ ದೃಶ್ಯದಲ್ಲಿ ನಟಿಸುತ್ತಿರುವಾಗ ಅಪಾಯದಲ್ಲಿ ಸಿಕ್ಕಿ ಹಾಕಿಕೊಂಡರೂ, ಅದೃಷ್ಟವಶಾತ್ ಪಾರಾಗಿದ್ದಾರೆ. ವರುಣ್ ನಾಯಕನಾಗಿ ನಟಿಸುತ್ತಿರುವ ಕೂಲಿ ನಂ.1 ಚಿತ್ರದ ಶೂಟಿಂಗ್‌ನಲ್ಲಿ ಈ ಅವಘಡ ಸಂಭವಿಸಿದೆ. ಪುಣೆಯ ಹೊರವಲಯದಲ್ಲಿ ಚಿತ್ರದ ಶೂಟಿಂಗ್ ಕಳೆದ ವಾರ ನಡೆಯುತ್ತಿತ್ತು. ಬೆಟ್ಟದ ಕಡಿದಾದ ಬಂಡೆಯಲ್ಲಿ ಕಾರು ಚಲಾಯಿಸುವ ಸನ್ನಿವೇಶದ ಚಿತ್ರೀಕರಣ ಅದಾಗಿತ್ತು. ಆಕಸ್ಮಿಕವಾಗಿ ವರುಣ್ ಇದ್ದ ಕಾರಿನ ಬಾಗಿಲುಗಳು ಜಾಮ್ ಆಗಿದ್ದರಿಂದ ವರುಣ್‌ಗೆ ಹೊರಬರಲು ಸಾಧ್ಯವಾಗಲಿಲ್ಲ. ಆದಾಗ್ಯೂ ವರುಣ್ ಗಾಬರಿಯಾಗದೆ ಶಾಂತವಾಗಿಯೇ ಪರಿಸ್ಥಿತಿಯನ್ನು ನಿಭಾಯಿಸಿದರು.

ವರುಣ್ ಈ ಸನ್ನಿವೇಶದಲ್ಲಿ ಕಾರಿನಿಂದ ಹೊರಗೆ ಜಿಗಿಯಬೇಕಾಗಿತ್ತು. ಆದರೆ ಬಾಗಿಲುಗಳ ಜ್ಯಾಮ್ ಆಗಿದ್ದರಿಂದ ವರುಣ್‌ಗೆ ಹೊರಬರಲು ಸಾಧ್ಯವಾಗಲೇ ಇಲ್ಲ. ಇತ್ತ ಚಿತ್ರತಂಡವೂ ಗಾಬರಿಗೊಂಡಿತ್ತು. ಕೊನೆಗೆ ಸಾಹಸ ನಿರ್ದೇಶಕರು ಧಾವಿಸಿ ಬಂದು ಕಾರಿನ ಬಾಗಿಲು ಅನ್‌ಲಾಕ್ ಮಾಡುವಲ್ಲಿ ಯಶಸ್ವಿಯಾದರು. ಆದರೆ ಅಪಾಯಕಾರಿ ಸನ್ನಿವೇಶದಲ್ಲೂ ಸ್ಥಿತಪ್ರಜ್ಞತೆ ಕಾಯ್ದುಕೊಂಡ ವರುಣ್ ಅವರನ್ನು ಇಡೀ ಚಿತ್ರತಂಡ ಅಭಿನಂದಿಸಿತು.

ಅಂದ ಹಾಗೆ ಕೂಲಿ ನಂ.1 ಚಿತ್ರವು 1995ರಲ್ಲಿ ತೆರೆಕಂಡ ಹಿರಿಯ ನಟ ಗೋವಿಂದ ಅಭಿನಯದ ಅದೇ ಹೆಸರಿನ ಚಿತ್ರದ ರಿಮೇಕ್ ಆಗಿದೆ. ಓರಿಜಿನಲ್ ಕೂಲಿ ನಂ.1 ಚಿತ್ರವನ್ನು ವರುಣ್ ಅವರ ತಂದೆ ಡೇವಿಡ್ ಧವನ್ ನಿರ್ದೇಶಿಸಿದ್ದರು. ಇದೀಗ ರಿಮೇಕ್‌ಗೂ ಅವರೇ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕೂಲಿ ನಂ.1,ಮುಂದಿನ ವರ್ಷದ ಮೇನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News