ಅತ್ಯಾಚಾರಕ್ಕೊಳಗಾಗಿ ಮೈಗೆ ಬೆಂಕಿ ಹಚ್ಚಲ್ಪಟ್ಟಿದ್ದ ಬಾಲಕಿ ಆಸ್ಪತ್ರೆಯಲ್ಲಿ ಸಾವು
Update: 2019-12-01 21:19 IST
ಹೊಸದಿಲ್ಲಿ, ಡಿ.1: ಹತ್ತು ದಿನಗಳ ಹಿಂದೆ ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ನಖಾಸ್ ಎಂಬಲ್ಲಿ ನೆರೆಮನೆಯಾತನಿಂದ ಅತ್ಯಾಚಾರಕ್ಕೊಳಗಾಗಿ ಮೈಗೆ ಬೆಂಕಿ ಹಚ್ಚಲ್ಪಟ್ಟಿದ್ದ 16 ಹರೆಯದ ಬಾಲಕಿ ತೀವ್ರ ಸುಟ್ಟ ಗಾಯಗಳಿಂದ ಶನಿವಾರ ದಿಲ್ಲಿಯ ಸಪ್ಧರಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ನ.21ರಂದು ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ನೆರೆಮನೆಯ ಝೀಶನ್ ಎಂಬಾತ ಆಕೆಯ ಮೇಲೆ ಅತ್ಯಾಚಾರವೆಸಗಿ,ಬಳಿಕ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ತೀವ್ರ ಸುಟ್ಟ ಗಾಯಗಳಾಗಿದ್ದ ಆಕೆಯನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಬಳಿಕ ದಿಲ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದರು.
ಆರೋಪಿಯನ್ನು ಬಂಧಿಸಿ,ಆತನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರಲಾಗಿದ್ದು,ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ ಎಂದು ಎಸ್‌ಪಿ ಯಮುನಾ ಪ್ರಸಾದ ತಿಳಿಸಿದರು.