99% ಮುಸ್ಲಿಮರು ಅಯೋಧ್ಯೆ ತೀರ್ಪಿನ ಮರುಪರಿಶೀಲನೆ ಬಯಸುತ್ತಾರೆ: ಮುಸ್ಲಿಂ ಕಾನೂನು ಮಂಡಳಿ

Update: 2019-12-01 16:10 GMT
Photo: PTI

ಲಕ್ನೊ, ಡಿ.1: ದೇಶದ 99% ಮುಸ್ಲಿಮರು ಅಯೋಧ್ಯೆ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಮರುಪರಿಶೀಲನೆ ಬಯಸುತ್ತಿದ್ದಾರೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಹೇಳಿದೆ.

ದೇಶದ ಹೆಚ್ಚಿನ ಮುಸ್ಲಿಮರು ಮರುಪರಿಶೀಲನೆ ಅರ್ಜಿ ಸಲ್ಲಿಸುವುದನ್ನು ವಿರೋಧಿಸುತ್ತಿದ್ದಾರೆ ಎಂದು ತಿಳಿದುಕೊಂಡಿದ್ದರೆ ಅದು ತಪ್ಪು. ಮುಸ್ಲಿಮರಿಗೆ ನ್ಯಾಯಾಂಗದ ಮೇಲೆ ವಿಶ್ವಾಸವಿರುವುದರಿಂದ ಮರುಪರಿಶೀಲನೆ ಅರ್ಜಿ ಸಲ್ಲಿಸಲಾಗುವುದು. ಆದರೆ, ಅಯೋಧ್ಯೆಯ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಳಿಕ ಈ ವಿಶ್ವಾಸ ದುರ್ಬಲವಾಗಿದೆ ಎಂದು ಎಐಎಂಪಿಎಲ್‌ಬಿ ಪ್ರಧಾನ ಕಾರ್ಯದರ್ಶಿ ಮೌಲಾನ ರಹ್ಮಾನಿ ಹೇಳಿದ್ದಾರೆ.

ಆದರೆ ಮರುಪರಿಶೀಲನಾ ಅರ್ಜಿ ತಿರಸ್ಕೃತವಾಗಬಹುದು ಎಂಬ ಸಂದೇಹವಿದೆ. ಆದರೂ ನಾವು ಅರ್ಜಿ ಸಲ್ಲಿಸಲಿದ್ದೇವೆ. ಇದು ನಮ್ಮ ಕಾನೂನುಬದ್ಧ ಹಕ್ಕಾಗಿದೆ. ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹಲವು ವಿರೋಧಾಭಾಸದ ವಿಷಯಗಳಿವೆ ಎಂದವರು ಹೇಳಿದ್ದಾರೆ.

ಸುಪ್ರೀಂ ತೀರ್ಪಿನ ಬಳಿಕ ದಶಕಗಳಿಂದ ನನೆಗುದಿಗೆ ಬಿದ್ದಿರುವ ವಿವಾದಕ್ಕೆ ಅಂತ್ಯಹೇಳಬೇಕು ಎಂಬ ಸಲಹೆಯ ಬಗ್ಗೆ ಉತ್ತರಿಸಿದ ಅವರು “ಮಸೀದಿಯ ಬಗ್ಗೆ ಆಸಕ್ತಿ ಇಲ್ಲದವರು ಹಾಗೆ ಹೇಳುತ್ತಿದ್ದಾರೆ. ಭಯದಲ್ಲಿ ಬದುಕುತ್ತಿರುವ ಇಂತಹವರು ಬೇರೆಯವರೂ ತಮ್ಮ ಹಾಗೆಯೇ ಬದುಕಬೇಕು ಎಂದು ಬಯಸುತ್ತಾರೆ . ಬುದ್ಧಿಜೀವಿಗಳು ಈ ವಿಷಯವನ್ನು ಎತ್ತಿದ್ದಾರೆ. ಆದರೆ ಮುಸ್ಲಿಮ್ ಸಮುದಾಯ ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಅವರಲ್ಲಿ ಯಾವುದೇ ಯೋಜನೆಗಳಿಲ್ಲ. ಸಮುದಾಯಕ್ಕೆ ನೀವೇನು ಮಾಡಿದ್ದೇವೆ ಎಂಬ ಪ್ರಶ್ನೆಯನ್ನು ಅವರಲ್ಲಿ ಕೇಳಬೇಕು” ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News