'40,000 ಕೋಟಿ ರೂ. ರಕ್ಷಿಸಲು ಫಡ್ನವೀಸ್ ಪ್ರಮಾಣವಚನದ ನಾಟಕ ನಡೆದಿತ್ತು'

Update: 2019-12-02 14:13 GMT

ಹೊಸದಿಲ್ಲಿ, ಡಿ.2: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅವರು ದಿಢೀರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದು ಕೇಂದ್ರದ 40,000 ಕೋ.ರೂ.ನಿಧಿಯನ್ನು ರಕ್ಷಿಸಲು ಮತ್ತು ಅದನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸಲು ಯೋಜಿತ ‘ನಾಟಕ ’ವಾಗಿತ್ತು ಎಂಬ ಬೆಚ್ಚಿ ಬೀಳಿಸುವಂತಹ ಹೇಳಿಕೆಯೊಂದನ್ನು ಕರ್ನಾಟಕದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಅವರು ನೀಡಿದ್ದು,ಇದು ಪಕ್ಷಕ್ಕೆ ಭಾರೀ ಮುಜುಗರವನ್ನುಂಟು ಮಾಡಿದೆ.

ಈಗಾಗಲೇ ತನ್ನ ಹಲವಾರು ವಿವಾದಾತ್ಮಕ ಹೇಳಿಕೆಗಳಿಂದಾಗಿ ಸುದ್ದಿಯಾಗಿರುವ ಹೆಗಡೆ,ಫಡ್ನವೀಸ್ 15 ಗಂಟೆಗಳಲ್ಲಿ ಹಣ ಸುರಕ್ಷಿತವಾಗಿ ಕೇಂದ್ರಕ್ಕೆ ಮರಳುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ತನ್ಮಧ್ಯೆ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಫಡ್ನವೀಸ್ ಅವರು,ಇಂತಹ ಬೆಳವಣಿಗೆ ನಡೆದೇ ಇಲ್ಲ,ಇದು ಶುದ್ಧ ಸುಳ್ಳು ಹೇಳಿಕೆ ಎಂದು ತಿಳಿಸಿದ್ದರೆ,ಮಹಾರಾಷ್ಟ್ರ ಸರಕಾರದ ಪಾಲುದಾರ ಪಕ್ಷವಾಗಿರುವ ಶರದ್ ಪವಾರ್ ನೇತೃತ್ವದ ಎನ್‌ಸಿಪಿಯು,ಹೆಗಡೆಯವರ ಹೇಳಿಕೆ ನಿಜವೇ ಆಗಿದ್ದರೆ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.

 ಶನಿವಾರ ತನ್ನ ಲೋಕಸಭಾ ಕ್ಷೇತ್ರವಾದ ಉತ್ತರ ಕನ್ನಡದ ಯಲ್ಲಾಪುರದಲ್ಲಿ ಡಿ.5ರಂದು ನಡೆಯಲಿರುವ ಉಪ ಚುನಾವಣೆಗಾಗಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಹೆಗಡೆ ,”ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ನಮ್ಮ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರು ಕೇವಲ 80 ಗಂಟೆಗಳ ಅವಧಿಗೆ ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಿಸಿ ರಾಜೀನಾಮೆಯನ್ನು ನೀಡಿದ್ದರು. ನಾವೇಕೆ ಈ ನಾಟಕವನ್ನು ಆಡಬೇಕಿತ್ತು?, ನಮಗೆ ಬಹುಮತ ಇಲ್ಲವೆಂದು ಗೊತ್ತಿದ್ದರೂ ಫಡ್ನವೀಸ್ ಏಕೆ ಮುಖ್ಯಮಂತ್ರಿಯಾಗಿದ್ದರು?, ಈ ಪ್ರಶ್ನೆಯನ್ನು ಪ್ರತಿಯೊಬ್ಬರೂ ಕೇಳುತ್ತಿದ್ದಾರೆ. ಕೇಂದ್ರದಿಂದ ಬಿಡುಗಡೆಯಾಗಿದ್ದ 40,000 ಕೋ.ರೂ.ಗೂ ಅಧಿಕ ಹಣ ಮುಖ್ಯಮಂತ್ರಿಗಳ ನಿಯಂತ್ರಣದಲ್ಲಿತ್ತು. ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಕೈಗೆ ಈ ಹಣ ಸಿಕ್ಕಿದ್ದರೆ ಅದು ಅಭಿವೃದ್ಧಿಗೆ ವಿನಿಯೋಗವಾಗುತ್ತಿರಲಿಲ್ಲ ಮತ್ತು ದುರ್ಬಳಕೆಯಾಗುತ್ತಿತ್ತು” ಎಂದು ಹೇಳಿದರು.

ಇದನ್ನೆಲ್ಲ ಮೊದಲೇ ಯೋಜಿಸಲಾಗಿತ್ತು. ಏನೇ ಆಗಲಿ,ಬೃಹನ್ನಾಟಕವೊಂದು ಅಗತ್ಯವಿದೆ ಎಂದು ನಿರ್ಧರಿಸಲಾಗಿತ್ತು. ಇದೇ ಕಾರಣಕ್ಕೆ ಫಡ್ನವೀಸ್ ಅವರು ಎನ್‌ಸಿಪಿ ನಾಯಕ ಅಜಿತ ಪವಾರ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುಖ್ಯಮಂತ್ರಿಯಾಗಿದ್ದರು. 15 ಗಂಟೆಗಳಲ್ಲಿ ಫಡ್ನವೀಸ್ ಆ ಹಣವನ್ನು ಎಲ್ಲಿಗೆ ಸೇರಬೇಕಿತ್ತೋ ಅಲ್ಲಿಗೆ ಸುರಕ್ಷಿತವಾಗಿ ಸೇರಿಸಿದ್ದರು ಎಂದು ಹೆಗಡೆ ತಿಳಿಸಿದರು.

ಅಲ್ಲಗಳೆದ ಫಡ್ನವೀಸ್

ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಫಡ್ನವೀಸ್,ಇಂತಹ ಬೆಳವಣಿಗೆ ನಡೆದೇ ಇಲ್ಲ. ಇವೆಲ್ಲ ಸಂಪೂರ್ಣ ಸುಳ್ಳು ಹೇಳಿಕೆಗಳಾಗಿವೆ. ತಾನು ಅಧಿಕಾರದಲ್ಲಿದ್ದ ಅವಧಿಯಲ್ಲಿ ಯಾವುದೇ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿರಲಿಲ್ಲ. ಇಂತಹ ಘಟನೆಗಳು ಹೀಗೆಲ್ಲ ನಡೆಯುವುದಿಲ್ಲ. ಸರಕಾರದ ಹಣಕಾಸು ಇಲಾಖೆಯು ಹೆಗಡೆ ಹೇಳಿಕೆ ಬಗ್ಗೆ ತನಿಖೆಯನ್ನು ನಡೆಸಬಹುದಾಗಿದೆ ಎಂದರು.

ಬುಲೆಟ್ ರೈಲು ಯೋಜನೆಯನ್ನೂ ಪ್ರಸ್ತಾಪಿಸಿದ ಅವರು,ಕೇಂದ್ರ ಸರಕಾರದ ಕಂಪನಿಯೊಂದು ಈ ಯೋಜನೆಯನ್ನು ಅನುಷ್ಠಾನಿಸುತ್ತ್ತಿದೆ ಮತ್ತು ಮಹಾರಾಷ್ಟ್ರ ಸರಕಾರದ ಪಾತ್ರ ಭೂ ಸ್ವಾಧೀನಕ್ಕೆ ಮಾತ್ರ ಸೀಮಿತವಾಗಿದೆ. ಕೇಂದ್ರ ಸರಕಾರವು ಯಾವುದೇ ನಿಧಿಗಾಗಿ ಕೇಳಿರಲಿಲ್ಲ,ಮಹಾರಾಷ್ಟ್ರ ಸರಕಾರವೂ ಯಾವುದೇ ನಿಧಿಯನ್ನು ವಾಪಸ್ ಕಳುಹಿಸಿಲ್ಲ ಎಂದರು. ಇತರ ಯಾವುದೇ ಯೋಜನೆಯಿಂದಲೂ ಮಹಾರಾಷ್ಟ್ರ ಸರಕಾರದ ಒಂದೇ ಒಂದು ರೂಪಾಯಿಯನ್ನೂ ಕೇಂದ್ರಕ್ಕೆ ವಾಪಸ್ ಮಾಡಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ಪ್ರಧಾನಿಯವರೇ,ಉತ್ತರಿಸಿ

ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಬಿಜೆಪಿ ಸಂಸದರೋರ್ವರು ಮೋದಿ ಸರಕಾರದ ಪಾಲಿಗೆ ಸಂಕಷ್ಟಗಳ ಪೆಟ್ಟಿಗೆಯನ್ನು ತೆರೆದಿದ್ದಾರೆ. ಬಿಜೆಪಿಯ ಮಹಾರಾಷ್ಟ್ರ ವಿರೋಧಿ ಮುಖವು ಅನಾವರಣಗೊಂಡಿದೆ. ಒಕ್ಕೂಟ ವ್ಯವಸ್ಥೆಯ ಮೇಲೆ ಸವಾರಿ ಮಾಡಲಾಗುತ್ತಿದೆಯೇ? ಜನತೆ ಮತ್ತು ರೈತರಿಗೆ ಸೇರಿದ್ದ 40,000 ಕೋ.ರೂ.ಗಳನ್ನು ಪಿತೂರಿಯಿಂದ ಹಿಂಪಡೆಯಲಾಗಿದೆಯೇ? ಪ್ರಧಾನಿಯವರೇ,ಇದಕ್ಕೆ ಉತ್ತರಿಸಿ

►ರಣದೀಪ ಸುರ್ಜೆವಾಲಾ,ಕಾಂಗ್ರೆಸ್ ವಕ್ತಾರ

ನಿಧಿ ವರ್ಗಾವಣೆ ಅಸಾಧ್ಯ

ರಾಜ್ಯ ಸರಕಾರವು ಕೇಂದ್ರಕ್ಕೆ 40,000 ಕೋ.ರೂ.ಮರಳಿಸುವುದು ಸಾಧ್ಯವಿಲ್ಲ. ಇದು ನಿಜವೇ ಆಗಿದ್ದರೆ ಪ್ರಧಾನಿ ನರೇಂದ್ರ ಮೋದಿಯವರು ಹುದ್ದೆಯಿಂದ ಕೆಳಗಿಳಿಯಬೇಕಾಗುತ್ತದೆ. ಇದು ಮಹಾರಾಷ್ಟ್ರಕ್ಕೆ ಮಾತ್ರವಲ್ಲ,ಇತರ ರಾಜ್ಯಗಳಿಗೂ ಅನ್ಯಾಯವಾಗುತ್ತದೆ. ತಮಿಳುನಾಡು, ಪ.ಬಂಗಾಳ, ಒಡಿಶಾ, ತೆಲಂಗಾಣ, ಕೇರಳದಂತಹ ರಾಜ್ಯಗಳ ಜನರು ಇಂತಹ ಅನ್ಯಾಯವನ್ನು ಸಹಿಸುವುದಿಲ್ಲ.

► ನವಾಬ್ ಮಲಿಕ್,ಎನ್‌ಸಿಪಿ ಮುಖ್ಯ ವಕ್ತಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News