ಅನಂತಕುಮಾರ್ ಹೆಗಡೆ ಹೇಳಿಕೆ ಸಂಪೂರ್ಣ ಸುಳ್ಳು: ಫಡ್ನವೀಸ್ ಪ್ರತಿಕ್ರಿಯೆ

Update: 2019-12-02 07:41 GMT

ಮುಂಬೈ, ಡಿ.2: "ಕೇಂದ್ರ ಸರಕಾರದ ಯಾವುದೇ ಅನುದಾನವನ್ನು ನಾನು ವಾಪಸ್ ನೀಡಿಲ್ಲ. ಉಸ್ತುವಾರಿ ಮುಖ್ಯಮಂತ್ರಿಯಾಗಿ ನಾನು ಅಂತಹ ಯಾವುದೇ ನಿರ್ಧಾರವನ್ನು ಕೈಗೊಂಡಿರಲಿಲ್ಲ. ಅನಂತಕುಮಾರ್ ಹೆಗಡೆ ಹೇಳಿಕೆ ಸಂಪೂರ್ಣ ಸುಳ್ಳು'' ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸ್ಪಷ್ಟಪಡಿಸಿದ್ದಾರೆ. ಫಡ್ನವೀಸ್ ಅವರ ಈ ಪ್ರತಿಕ್ರಿಯೆ ಕರ್ನಾಟಕದ ಸಂಸದ ಅನಂತಕುಮಾರ್‌ಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ.

 ಕೇಂದ್ರ ಸರಕಾರ ರಾಜ್ಯಕ್ಕೆ ನೀಡಿರುವ 40,000 ಕೋ.ರೂ.ಅನುದಾನವನ್ನು ಶಿವಸೇನೆ ನೇತೃತ್ವದ ಮಹಾಮೈತ್ರಿಕೂಟ ದುರುಪಯೋಗಪಡಿಸುವುದನ್ನು ತಡೆಯಲು ತನ್ನ ಪಕ್ಷದ ಸಹೋದ್ಯೋಗಿ ದೇವೇಂದ್ರ ಫಡ್ನವೀಸ್‌ರನ್ನು ಬಹುಮತದ ಕೊರತೆಯ ಹೊರತಾಗಿಯೂ ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಫಡ್ನವೀಸ್ ಕೇವಲ 15 ಗಂಟೆಯಲ್ಲಿ 40,000 ಕೋ.ರೂ. ಕೇಂದ್ರದ ಹಣವನ್ನು ಸುರಕ್ಷಿತವಾಗಿ ವಾಪಸ್ ನೀಡಿದ್ದಾರೆ. ಅನುದಾನವನ್ನು ಉಳಿಸಲು ಬಿಜೆಪಿ ಈ ನಾಟಕ ಮಾಡಿತ್ತು ಎಂದು ಉತ್ತರಕನ್ನಡದ ಸಂಸದ ಅನಂತಕುಮಾರ್ ಹೆಗಡೆ ಶನಿವಾರ ಹೇಳಿಕೆ ನೀಡಿದ್ದರು. ತನ್ನ ಈ ಹೇಳಿಕೆಯನ್ನು ಹೆಗಡೆ ತನ್ನದೇ ವ್ಯಾಟ್ಸ್‌ಆ್ಯಪ್‌ನಲ್ಲಿ ಹಾಕಿದ್ದ ಕಾರಣ ಅದು ಭಾರೀ ವೈರಲ್ ಆಗಿತ್ತು.

ಹೆಗಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಫಡ್ನವೀಸ್, "ಕೇಂದ್ರ ಸರಕಾರಕ್ಕೆ ಯಾವುದೇ ಅನುದಾನವನ್ನು ವಾಪಸ್ ನೀಡಿಲ್ಲ. ಉಸ್ತುವಾರಿ ಮುಖ್ಯಮಂತ್ರಿಯಾಗಿ ಯಾವುದೇ ನಿರ್ಧಾರ ಕೈಗೊಳ್ಳುವುದಕ್ಕೆ ನಿಯಮದಲ್ಲಿ ಅವಕಾಶವಿಲ್ಲ. ಈ ಹೇಳಿಕೆ ಸಂಪೂರ್ಣ ಸುಳ್ಳು. ಇಂತಹ ಘಟನೆಯೇ ನಡೆದಿಲ್ಲ. ಬುಲೆಟ್ ರೈಲಿನ ಯೋಜನೆಗೆ ಸಂಬಂಧಿಸಿ ಮಹಾರಾಷ್ಟ್ರ ಸರಕಾರ ಭೂ ಒತ್ತುವರಿ ಮಾಡಿಕೊಂಡಿದ್ದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ಕೇಂದ್ರ ಸರಕಾರ ಯಾವುದೇ ಹಣವನ್ನು ಕೇಳಿಲ್ಲ ಅಥವಾ ಮಹಾರಾಷ್ಟ್ರ ಸರಕಾರ ಯಾವುದೇ ಕೋರಿಕೆಯನ್ನು ಸಲ್ಲಿಸಿರಲಿಲ್ಲ''ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News