ಅಮೆರಿಕ ವಿರುದ್ಧ ದಿಗ್ಬಂಧನಗಳನ್ನು ಘೋಷಿಸಿದ ಚೀನಾ

Update: 2019-12-02 15:28 GMT

ಬೀಜಿಂಗ್, ಡಿ. 2: ಹಾಂಕಾಂಗ್‌ನ ಪ್ರಜಾಪ್ರಭುತ್ವಪರ ಹೋರಾಟಗಾರರಿಗೆ ಅಮೆರಿಕ ಬೆಂಬಲ ನೀಡುತ್ತಿರುವುದಕ್ಕೆ ಪ್ರತೀಕಾರವಾಗಿ, ಚೀನಾ ಕೂಡ ಅಮೆರಿಕದ ವಿರುದ್ಧ ದಂಡನಾರ್ಹ ಕ್ರಮಗಳನ್ನು ತೆಗೆದುಕೊಂಡಿದೆ. ಚೀನಾವು ಅಮೆರಿಕದ ಎನ್‌ಜಿಒಗಳ  ವಿರುದ್ಧ ದಿಗ್ಬಂಧನಗಳನ್ನು ವಿಧಿಸಿದೆ ಹಾಗೂ ಅಮೆರಿಕದ ಯುದ್ಧನೌಕೆಗಳು ಮತ್ತು ವಿಮಾನಗಳ ಭೇಟಿಯನ್ನು ಅಮಾನತಿನಲ್ಲಿಟ್ಟಿದೆ.

‘‘ಅಮೆರಿಕದ ಅಸಮರ್ಥನೀಯ ವರ್ತನೆಗೆ ಪ್ರತಿಯಾಗಿ, ವಿಶ್ರಾಂತಿ ಮತ್ತು ಚೇತರಿಕೆಗಾಗಿ ಯುದ್ಧ ನೌಕೆಗಳು ಹಾಂಕಾಂಗ್‌ಗೆ ಹೋಗಲು ಅನುಮತಿ ನೀಡಬೇಕೆಂದು ಕೋರಿ ಅಮೆರಿಕ ಸಲ್ಲಿಸಿರುವ ಅರ್ಜಿಗಳ ಪರಿಶೀಲನೆಯನ್ನು ಸ್ಥಗಿತಗೊಳಿಸಲು ಚೀನಾ ಸರಕಾರ ನಿರ್ಧರಿಸಿದೆ’’ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಪತ್ರಿಕಾಗೋಷ್ಠಿಯೊಂದರಲ್ಲಿ ಸೋಮವಾರ ತಿಳಿಸಿದರು.

ಹಾಂಕಾಂಗ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳ ವೇಳೆ ‘ಕೆಟ್ಟದಾಗಿ’ ವರ್ತಿಸಿದ ನ್ಯಾಶನಲ್ ಎಂಡೋಮೆಂಟ್ ಫಾರ್ ಡೆಮಾಕ್ರಸಿ, ಹ್ಯೂಮನ್ ರೈಟ್ಸ್ ವಾಚ್ ಮತ್ತು ಫ್ರೀಡಂ ಹೌಸ್ ಮುಂತಾದ ಸಂಘಟನೆಗಳ ವಿರುದ್ಧ ದಿಗ್ಬಂಧನಗಳನ್ನು ವಿಧಿಸಲಾಗಿದೆ ಎಂದು ಅವರು ಹೇಳಿದರು.

‘‘ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ, ಹಾಂಕಾಂಗ್ ಮತ್ತು ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುವ ಕೃತ್ಯಗಳನ್ನು ನಿಲ್ಲಿಸಿ ಎಂಬುದಾಗಿ ಚೀನಾವು ಅಮೆರಿಕವನ್ನು ಒತ್ತಾಯಿಸುತ್ತದೆ’’ ಎಂದು ವಕ್ತಾರೆ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News