ದಲಿತರನ್ನು ದೂರವಿರಿಸಲು ಆವರಣ ಗೋಡೆ ನಿರ್ಮಿಸಲಾಗಿತ್ತು: ಸಂತ್ರಸ್ತ ಕುಟುಂಬಗಳ ಆರೋಪ

Update: 2019-12-03 12:40 GMT

ಕೊಯಂಬತ್ತೂರು: ಕೊಯಂಬತ್ತೂರು ಸಮೀಪದ ಮೆಟ್ಟುಪಾಳಯಂ ಎಂಬಲ್ಲಿ ಸೋಮವಾರ ಸುರಿದ ಭಾರೀ ಮಳೆಗೆ ಗೋಡೆ ಕುಸಿದು 17 ಜನರು ಮೃತಪಟ್ಟಿದ್ದಾರೆ. ಈ ಘಟನೆಯ ಬೆನ್ನಲ್ಲೇ ಸರಕಾರಿ ಆಸ್ಪತ್ರೆಯ ಹೊರಗೆ ಜಮಾಯಿಸಿದ ಭಾರೀ ಸಂಖ್ಯೆಯ ಪ್ರತಿಭಟನಕಾರರು, ದಲಿತರನ್ನು ದೂರವಿಡಲೆಂದು ಆ ಗೋಡೆ ನಿರ್ಮಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಈ 20 ಅಡಿ ಎತ್ತರದ ಆವರಣ ಗೋಡೆ ನಡೂರ್ ಗ್ರಾಮದಲ್ಲಿ ಮೂರು ಮನೆಗಳ ಮೇಲೆ ಕುಸಿದು ಬಿದ್ದಿತ್ತು.

ದುರಂತದಲ್ಲಿ ಮೃತಪಟ್ಟವರ ಕುಟುಂಬಗಳು ತಮಿಳ್ ಟೈಗರ್ಸ್, ದ್ರಾವಿಡರ್ ತಮಿಳರ್ ಕಚ್ಚಿ ಹಾಗೂ ವಿಡುತಲೈ ಚಿರುತೈಗಲ್ ಕಚ್ಚಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿವೆ.

ಆವರಣ ಗೋಡೆ ಜವುಳಿ ವರ್ತಕ ಶಿವಸುಬ್ರಹ್ಮಣ್ಯಂ ಎಂಬವರಿಗೆ ಸೇರಿದ್ದಾಗಿತ್ತು. ಅದರ ನಿರ್ಮಾಣ ಗುಣಮಟ್ಟ ಕಳಪೆಯಾಗಿತ್ತು ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಪೊಲೀಸರು ಪ್ರತಿಭಟನಾಕಾರರಿಗೆ ಥಳಿಸಿದ್ದಾರೆಂಬ ಆರೋಪ ಕೂಡ ಕೇಳಿ ಬಂದಿದೆ. ಸುಮಾರು 25 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಕನಿಷ್ಠ 25 ಲಕ್ಷ ರೂ. ಪರಿಹಾರವನ್ನು ಸಂತ್ರಸ್ತರು ಬೇಡಿಕೆಯಿರಿಸಿದ್ದಾರೆ. ಕುಸಿದ ಗೋಡೆಯ ಮಾಲಕರ ವಿರುದ್ಧ ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ಕಾಯಿದೆಯನ್ವಯ ಪ್ರಕರಣ ದಾಖಲಿಸಬೇಕೆಂದೂ ಆಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News